ADVERTISEMENT

ಪಶುವೈದ್ಯೆ ಮೇಲೆ ಅತ್ಯಾಚಾರ: ಎಲ್ಲೆಡೆ ಆಕ್ರೋಶ

ಪಿಟಿಐ
Published 30 ನವೆಂಬರ್ 2019, 18:56 IST
Last Updated 30 ನವೆಂಬರ್ 2019, 18:56 IST
ತೆಲಂಗಾಣದ ಶಾದ್‌ನಗರ ಪೊಲೀಸ್‌ ಠಾಣೆಗೆ ನುಗ್ಗಲು ಯತ್ನಿಸಿದ ಪ್ರತಿಭಟನಕಾರರನ್ನು ಪೊಲೀಸರು ತಡೆದರು. ಪೊಲೀಸರ ಮೇಲೆ ಪ್ರತಿಭಟನಕಾರರು ಕಲ್ಲು ಮತ್ತು ಚಪ್ಪಲಿ ತೂರಿದ್ದಾರೆ –ಪಿಟಿಐ ಚಿತ್ರ
ತೆಲಂಗಾಣದ ಶಾದ್‌ನಗರ ಪೊಲೀಸ್‌ ಠಾಣೆಗೆ ನುಗ್ಗಲು ಯತ್ನಿಸಿದ ಪ್ರತಿಭಟನಕಾರರನ್ನು ಪೊಲೀಸರು ತಡೆದರು. ಪೊಲೀಸರ ಮೇಲೆ ಪ್ರತಿಭಟನಕಾರರು ಕಲ್ಲು ಮತ್ತು ಚಪ್ಪಲಿ ತೂರಿದ್ದಾರೆ –ಪಿಟಿಐ ಚಿತ್ರ   

ಹೈದರಾಬಾದ್‌:ತೆಲಂಗಾಣದ ಪಶುವೈದ್ಯೆ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆಯನ್ನು ಖಂಡಿಸಿ ಶನಿವಾರ ದೇಶದ ಹಲವೆಡೆ ಭಾರಿ ಪ್ರತಿಭಟನೆಗಳು ನಡೆದಿವೆ.

ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌ ಮತ್ತು ಟ್ವಿಟರ್‌ನಲ್ಲೂ ಈ ಕೃತ್ಯದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ದೆಹಲಿಯಲ್ಲಿ ಮಹಿಳೆಯೊಬ್ಬರ ಮೇಲೆ ಶುಕ್ರವಾರ ತಡರಾತ್ರಿ ಅತ್ಯಾಚಾರ ನಡೆಸಿ, ಕೊಲೆ ಮಾಡಲಾಗಿದೆ. ಗುಜರಾತ್‌ನ ರಾಜ್‌ಕೋಟ್‌ನಲ್ಲಿ 8 ವರ್ಷದ ಬಾಲಕಿ ಮೇಲೆ ಶನಿವಾರ ಸಂಜೆ ಅತ್ಯಾಚಾರ ನಡೆದಿದೆ. ಈ ಎಲ್ಲಾ ಪ್ರಕರಣಗಳು ಪ್ರತಿಭಟನೆಯ ತೀವ್ರತೆಯನ್ನು ಹೆಚ್ಚಿಸಿವೆ.

ADVERTISEMENT

‘ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ಕಾನೂನನ್ನು ಜಾರಿಗೆ ತರಬೇಕು. ಪಶುವೈದ್ಯೆಯ ಮೇಲೆ ಅತ್ಯಾಚಾರ ನಡೆಸಿದವರನ್ನು ಗಲ್ಲಿಗೆ ಏರಿಸಿಬೇಕು’ ಎಂಬ ಆಗ್ರಹ ಪ್ರತಿಭಟನೆಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿದೆ. ಪಶುವೈದ್ಯೆ ಮೇಲೆ ಅತ್ಯಾಚಾರ ಮಾಡಿದ ನಾಲ್ವರು ಆರೋಪಿಗಳನ್ನು ಇರಿಸಲಾಗಿದ್ದ ತೆಲಂಗಾಣದ ಶಾದ್‌ನಗರ ಪೊಲೀಸ್‌ ಠಾಣೆ ಎದುರು ಭಾರಿ ಪ್ರತಿಭಟನೆ ನಡೆದಿದೆ. ಪ್ರತಿಭಟನಕಾರರನ್ನು ಚದುರಿಸಲು ಪೊಲೀಸರು ಲಾಠಿಪ್ರಹಾರ ನಡೆಸಿದ್ದಾರೆ. ದೆಹಲಿ, ಮುಂಬೈನಲ್ಲೂ ಪ್ರತಿಭಟನೆಗಳು ನಡೆದಿವೆ.

‘ಹೈದರಾಬಾದ್‌ನ ನಿರ್ಭಯಾ’: ಪಶುವೈದ್ಯೆಯ ಅತ್ಯಾಚಾರ ಪ್ರಕರಣವನ್ನು ಪ್ರತಿಭಟನಕಾರರು ನಿರ್ಭಯಾ ಪ್ರಕರಣಕ್ಕೆ ಹೋಲಿಸಿದ್ದಾರೆ. ನಿರ್ಭಯಾ ಪ್ರಕರಣ ನಡೆದು ಏಳು ವರ್ಷವಾದರೂ ಪರಿಸ್ಥಿತಿ ಬದಲಾಗಿಲ್ಲ. ಅತ್ಯಾಚಾರ ಪ್ರಕರಣಗಳ ವಿಚಾರಣೆ ತ್ವರಿತಗತಿಯಲ್ಲಿ ನಡೆಯುತ್ತಿಲ್ಲ. ಅತ್ಯಾಚಾರಿಗಳನ್ನು ಸಾರ್ವಜನಿಕವಾಗಿ ಶಿಕ್ಷಿಸಬೇಕು. ಪಶುವೈದ್ಯೆಯನ್ನು ಕೊಂದಂತೆಯೇ, ಕೊಲ್ಲಬೇಕು’ ಎಂಬ ಆಕ್ರೋಶವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.