ನಾಗರಕರ್ನೂಲ್(ತೆಲಂಗಾಣ): ಶ್ರೀಶೈಲಂ ಎಡದಂಡೆ ಕಾಲುವೆಯಡಿ ಎಸ್‌ಎಲ್‌ಬಿಸಿ ಸಿಲುಕಿರುವ ಸಿಬ್ಬಂದಿಯ ರಕ್ಷಣೆಗಾಗಿ ಸತತ 11ದಿನಗಳಿಂದ ಕಾರ್ಯಾಚರಣೆ ನಡೆಯುತ್ತಿದೆ. ಹಾಳಾಗಿದ್ದ ಕನ್ವೇಯರ್ ಬೆಲ್ಟ್ ಅನ್ನು ದುರಸ್ತಿ ಮಾಡಿ ಶೋಧ ಕಾರ್ಯಾಚರಣೆ ಮುಂದುವರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲೋಹ ಕತ್ತರಿಸುವ ತಜ್ಞರನ್ನು ಒಳಗೊಂಡ ದಕ್ಷಿಣ ಮಧ್ಯ ರೈಲ್ವೆ ತಂಡವು ರಕ್ಷಣಾ ಕಾರ್ಯಾಚರಣೆಯಲ್ಲಿ ಸಾಥ್ ನೀಡಿದೆ. ಆದರೆ ಈವರೆಗೂ ಕಾರ್ಮಿಕರ ಬಗ್ಗೆ ಸುಳಿವು ಸಿಕ್ಕಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸುರಂಗದ ಒಳಗೆ ತಿರುವು ತೆಗೆದುಕೊಳ್ಳಲು ಸ್ಥಳಾವಕಾಶವಿಲ್ಲದೆ ಲಾರಿಗಳು ಒಳಗೆ ಹೋಗಿ ಕೆಸರು ಸಾಗಿಸಲು ಕಷ್ಟಕರವಾಗಿತ್ತು. ಸುರಂಗದ ಒಳಗಿದ್ದ ಟನಲ್ ಬೋರಿಂಗ್ ಮೆಷಿನ್ (ಟಿಬಿಎಂ)ಗೆ ಅಳವಡಿಸಲಾಗಿದ್ದ ಕನ್ವೇಯರ್ ಬೆಲ್ಟ್ ಹಾಳಾಗಿತ್ತು. ಆದರೆ ದುರಸ್ತಿ ಪಡಿಸಿ ಬೆಲ್ಟ್ ಮೂಲಕ ಮಣ್ಣು ಸಾಗಿಸುವ ಆಯ್ಕೆ ಪ್ರಾರಂಭಗೊಂಡಿದೆ.
ರಕ್ಷಣಾ ಸಿಬ್ಬಂದಿಗೆ ಯಾವುದೇ ತೊಂದರೆಯಾಗದಂತೆ ರಕ್ಷಣಾ ಕಾರ್ಯಾಚರಣೆಯಲ್ಲಿ ರೋಬೋಟ್‌ಗಳನ್ನು ನಿಯೋಜಿಸುವ ಆಯ್ಕೆ ಬಗ್ಗೆ ಸರ್ಕಾರ ಪರಿಶೀಲಿಸುತ್ತಿದೆ. ರಕ್ಷಣಾ ಸಿಬ್ಬಂದಿ ಪ್ರತಿದಿನ ಮೂರು ಪಾಳಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವೈಭವ್ ಗಾಯಕ್ವಾಡ್ ತಿಳಿಸಿದ್ದರು.
ಫೆಬ್ರುವರಿ 22ರಂದು ಶ್ರೀಶೈಲಂ ಎಡದಂಡೆ ಕಾಲುವೆ ಯೋಜನೆಯ ಸುರಂಗದ ಒಂದು ಭಾಗ ಕುಸಿದು ಬಿದ್ದ ಪರಿಣಾಮ ಸುಮಾರು 8 ಮಂದಿ ಕಾರ್ಮಿಕರು ಸಿಲುಕಿಕೊಂಡಿದ್ದು,ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.