ಹೈದರಾಬಾದ್: ನಿರ್ಮಾಣ ಹಂತದಲ್ಲಿರುವ, ಶ್ರೀಶೈಲಂ ಎಡ ದಂಡೆ ಕಾಲುವೆ (ಎಸ್‌ಎಲ್‌ಬಿಸಿ) ಕುಸಿದ ಪರಿಣಾಮ ಸಿಲುಕಿರುವ 8 ಮಂದಿ ಕಾರ್ಮಿಕರ ರಕ್ಷಣಾ ಕಾರ್ಯ ಗುರುವಾರವೂ ಮುಂದುವರಿದಿದ್ದು, ಹಾನಿಗೆ ಒಳಗಾಗಿರುವ ಟನೆಲ್ ಬೋರಿಂಗ್ ಮಷಿನ್ (ಟಿಬಿಎಂ) ಅನ್ನು ಕತ್ತರಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಈ ನಡುವೆ, ರಕ್ಷಣಾ ಕಾರ್ಯ ಪೂರ್ಣಗೊಳಿಸಲು ತೆಲಂಗಾಣ ಸರ್ಕಾರ 48 ಗಂಟೆ ಗಡುವು ನೀಡಿದೆ.
ಸಿಲುಕಿರುವ ಸಿಬ್ಬಂದಿ ರಕ್ಷಣೆಗೆ ಟಿಬಿಎಂ ದೊಡ್ಡ ಅಡ್ಡಿಯಾಗಿದೆ. ಈ ಬೃಹತ್ ಯಂತ್ರವನ್ನು ಕತ್ತರಿಸುವ ಸಲುವಾಗಿ ಪ್ಲಾಸ್ಮಾ ಕಟರ್ ಹಾಗೂ ಇತರ ಸಾಧನಗಳೊಂದಿಗೆ ರಕ್ಷಣಾ ಸಿಬ್ಬಂದಿ ಸುರಂಗದೊಳಗೆ ತೆರಳಿದ್ದಾರೆ.
‘ಕೆಸರಿನಿಂದ ಕೂಡಿದ ಮಣ್ಣು ಸೇರಿದಂತೆ ಸುರಂಗದಲ್ಲಿ ಬಿದ್ದಿರುವ ಅವಶೇಷಗಳನ್ನು ಸಾಗಿಸುವುದಕ್ಕಾಗಿ ಟಿಬಿಎಂನ ಕನ್ವೆಯರ್ ಬೆಲ್ಟ್ ದುರಸ್ತಿಗೂ ಚಾಲನೆ ನೀಡಲಾಗಿದೆ. ಇನ್ನೊಂದೆಡೆ ಟಿಬಿಎಂ ಯಂತ್ರದ ಭಾಗಗಳನ್ನು ಕತ್ತರಿಸುವ ಕಾರ್ಯಕ್ಕೆ ಗುರುವಾರ ಮತ್ತೆ ಚಾಲನೆ ನೀಡಲಾಗಿದೆ’ ಎಂದು ನೀರಾವರಿ ಸಚಿವ ಎನ್.ಉತ್ತಮ ಕುಮಾರ್ ರೆಡ್ಡಿ ಹೇಳಿದ್ದಾರೆ.
‘ಈ ರಕ್ಷಣಾ ಕಾರ್ಯ ಭಾರಿ ಸವಾಲನಿಂದ ಕೂಡಿದೆ. ಈ ಕ್ಷೇತ್ರದಲ್ಲಿ ಹೆಚ್ಚು ಪರಿಣತಿ ಹೊಂದಿರುವವರನ್ನು ತೊಡಗಿಸಿಕೊಳ್ಳಲಾಗಿದ್ದು, ಈ ತಜ್ಞರು ತಮ್ಮ ಜೀವ ಪಣಕ್ಕಿಟ್ಟು, ಸುರಂಗದಲ್ಲಿ ಸಿಲುಕಿರುವವರ ರಕ್ಷಣೆಗಾಗಿ ಶ್ರಮಿಸುತ್ತಿದ್ದಾರೆ’ ಎಂದೂ ಸಚಿವ ರೆಡ್ಡಿ ಹೇಳಿದ್ದಾರೆ.
Quote - ಬಿಆರ್‌ಎಸ್ ನಾಯಕ ಹರೀಶ್ ರಾವ್ ಉಪದೇಶ ನಮಗೆ ಬೇಕಿಲ್ಲ. ಭಾರತೀಯ ಸೇನೆ ನೌಕಾಪಡೆ ಹಾಗೂ ಬಿಆರ್‌ಒ ತಂಡಗಳನ್ನು ಅವಮಾನಿಸಲು ಅವರು ಯತ್ನಿಸುತ್ತಿದ್ದಾರೆಯೇ? ಉತ್ತಮ ಕುಮಾರ್ ರೆಡ್ಡಿ ನೀರಾವರಿ ಸಚಿವ ತೆಲಂಗಾಣ
Cut-off box - ಬಿಆರ್‌ಎಸ್ ನಾಯಕರ ವಿರುದ್ಧ ಟೀಕೆ ಎಸ್‌ಎಲ್‌ಬಿಸಿ ಸುರಂಗ ಕುಸಿತ ಅವಘಡ ಕುರಿತು ಬಿಆರ್‌ಎಸ್ ನಾಯಕ ಟಿ.ಹರೀಶ್ ರಾವ್ ಹಾಗೂ ಇತರ ಮುಖಂಡರು ಮಾಡಿರುವ ಟೀಕೆಗಳನ್ನು ಸಚಿವ ಉತ್ತಮ ಕುಮಾರ್ ರೆಡ್ಡಿ ಖಂಡಿಸಿದರು. ‘ಈ ಹಿಂದಿನ ಬಿಆರ್‌ಎಸ್ ನೇತೃತ್ವದ ಸರ್ಕಾರ ಈ ಯೋಜನೆಯನ್ನು (ಎಸ್‌ಎಲ್‌ಬಿಸಿ) ದಶಕಗಳ ಕಾಲ ನಿರ್ಲಕ್ಷ್ಯ ಮಾಡಿತ್ತು. ಕೆಲಸವನ್ನು ಆರ್ಧಕ್ಕೆ ನಿಲ್ಲಿಸಿತ್ತು’ ಎಂದು ಟೀಕಿಸಿದರು. ‘ಒಂದು ವೇಳೆ ಯೋಜನೆಯನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಿದ್ದಲ್ಲಿ ತೆಲಂಗಾಣಕ್ಕೆ 30 ಟಿಎಂಸಿ ಅಡಿ ನೀರು ಸಿಗುತ್ತಿತ್ತು. ನಲ್ಗೊಂಡ ಜಿಲ್ಲೆಯ 3–4 ಲಕ್ಷ ಹೆಕ್ಟೇರ್‌ನಷ್ಟು ಕೃಷಿ ಜಮೀನಿಗೆ ಪ್ರಯೋಜನವಾಗುತ್ತಿತ್ತು’ ಎಂದರು.
Cut-off box - ರಕ್ಷಣಾ ಕಾರ್ಯದ ಪ್ರಗತಿ * ಪ್ಲಾಸ್ಮಾ ಕಟರ್ ಹೈಗ್ರೇಡ್ ಶಟರ್ ಹಾಗೂ ಅವಶೇಷಗಳ ತೆರವಿಗೆ ಅಗತ್ಯವಿರುವ ಯಂತ್ರಗಳ ನಿಯೋಜನೆ * ಸುರಂಗದಲ್ಲಿ ಸಿಲುಕಿರುವ 8 ಮಂದಿಯ ರಕ್ಷಣಾ ಕಾರ್ಯದ ಮೇಲ್ವಿಚಾರಣೆಗಾಗಿ ಅಂತರರಾಷ್ಟ್ರೀಯ ತಜ್ಞರು ಸ್ಥಳದಲ್ಲಿ ಠಿಕಾಣಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.