ಅಯೋಧ್ಯೆ ರಾಮಮಂದಿರ
(ಪಿಟಿಐ ಚಿತ್ರ)
ಅಯೋಧ್ಯೆ: ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಭಾಗವಹಿಸಿದ ಭಕ್ತರು ಅಯೋಧ್ಯೆಗೂ ಭೇಟಿ ನೀಡುತ್ತಿರುವ ಕಾರಣ ಅಯೋಧ್ಯೆಯಲ್ಲಿ ನಿತ್ಯ ಜನಸಂದಣಿ ಉಂಟಾಗುತ್ತಿದೆ. ಹೀಗಾಗಿ ಅಯೋಧ್ಯೆಗೆ ಬರುವ ಭಕ್ತರು 15–20 ದಿನಗಳ ಕಾಲ ಪ್ರವಾಸವನ್ನು ಮುಂದೂಡಿ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮನವಿ ಮಾಡಿದೆ.
ಈ ಕುರಿತು ರಾಮಜನ್ಮಭೂಮಿ ಟ್ರಸ್ಟ್‌ನ ಮಹಾನಿರ್ದೇಶಕ ಚಂಪಕ್ ರಾಯ್ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ‘ಮಹಾಕುಂಭ ಮೇಳದಲ್ಲಿ ಪವಿತ್ರ ಸ್ನಾನ ಕೈಗೊಳ್ಳಲು ಅಪಾರ ಸಂಖ್ಯೆಯಲ್ಲಿ ಜನರು ಭೇಟಿ ನೀಡುತ್ತಿದ್ದಾರೆ. ಅಲ್ಲಿಂದ ಅಯೋಧ್ಯೆಗೂ ಜನರು ಬರುತ್ತಿದ್ದಾರೆ. ಕಳೆದ ಮೂರು ದಿನಗಳಿಂದ ಹಿಂದೆಂದೂ ಕಂಡಿರದಷ್ಟು ಭಕ್ತ ಸಾಗರವನ್ನು ಅಯೋಧ್ಯೆಯಲ್ಲಿ ಕಾಣುತ್ತಿದ್ದೇವೆ. ಇದರ ಪರಿಣಾಮ ಶ್ರೀರಾಮನ ದರ್ಶನಕ್ಕೆ ಅವಕಾಶ ಕಲ್ಪಿಸಲು ಸಾಧ್ಯವಾಗುತ್ತಿಲ್ಲ’ ಎಂದಿದ್ದಾರೆ.
‘ಜನರು ಹೆಚ್ಚಿರುವ ಕಾರಣ ವಾಹನಗಳ ನಿಲುಗಡೆ ಸೇರಿದಂತೆ ಭದ್ರತಾ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ, ಇದರಿಂದ ಭಕ್ತರು ಹೆಚ್ಚು ದೂರ ನಡೆದು ಬರಬೇಕಾಗಿದೆ. ಈ ಎಲ್ಲ ಕಾರಣಗಳಿಂದ ದೂರದ ಊರಿನಿಂದ ಬರುವವರಿಗೆ ರಾಮನ ದರ್ಶನಕ್ಕೆ ಅವಕಾಶ ಮಾಡಿಕೊಟ್ಟು ಹತ್ತಿರದಲ್ಲಿರುವವರು ಮುಂದಿನ 15–20 ದಿನಗಳ ನಂತರ ಅಯೋಧ್ಯೆಗೆ ಬರುವ ಯೋಜನೆಯನ್ನು ರೂಪಿಸಿಕೊಳ್ಳಿ. ಫೆ.2ರಂದು ಇರುವ ವಸಂತ ಪಂಚಮಿ ಬಳಿಕ ದೇವರ ದರ್ಶನಕ್ಕೆ ಸುಲಭವಾಗಿ ಅವಕಾಶ ದೊರೆಯಲಿದೆ, ಹವಾಮಾನವೂ ಉತ್ತಮವಾಗಿರುತ್ತದೆ’ ಎಂದು ಮನವಿ ಮಾಡಿದ್ದಾರೆ.
ಸೋಮವಾರ ಮತ್ತು ಮಂಗಳವಾರ ಸುಮಾರು 40 ಲಕ್ಷ ಜನ ಅಯೋಧ್ಯೆಗೆ ಭೇಟಿ ನೀಡಿದ್ದಾರೆ ಎಂದು ದೇಗುಲದ ಟ್ರಸ್ಟ್ ಹೇಳಿದೆ
ಉತ್ತರಪ್ರದೇಶ ಸರ್ಕಾರದ ಮಾಹಿತಿ ಪ್ರಕಾರ, ಜ.13 ರಿಂದ ಜ.27ರವರೆಗೆ 14 ಕೋಟಿಗೂ ಹೆಚ್ಚು ಜನ ಪ್ರಯಾಗ್‌ರಾಜ್‌ನಲ್ಲಿ ಪವಿತ್ರ ಸ್ನಾನ ಕೈಗೊಂಡಿದ್ದಾರೆ.
ಇದರ ನಡುವೆ, ಅಯೋಧ್ಯೆ ನಗರದಲ್ಲಿರುವ ಶಿಕ್ಷಣ ಸಂಸ್ಥೆಗಳಿಗೆ ಮುಂದಿನ 10 ದಿನ ಆನ್‌ಲೈನ್ ತರಗತಿ ನಡೆಸುವಂತೆ ಜಿಲ್ಲಾಡಳಿತ ಸೂಚಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.