
ಇತ್ತೀಚೆಗೆ ಕೇಂದ್ರ ಸರ್ಕಾರದಿಂದ ಪರವಾನಗಿ ಪಡೆದ ಮೂರು ಹೊಸ ಏರ್‌ಲೈನ್ಸ್ ಕಂಪನಿಗಳಲ್ಲಿ ಶಂಖ ಏರ್ ಕೂಡ ಒಂದು. ಇದರ ಸ್ಥಾಪನೆ ಹಾಗೂ ಸಂಸ್ಥಾಪಕನ ಹಿಂದಿನ ಕತೆ ನಿಜಕ್ಕೂ ರೋಚಕ. ಮನಸ್ಸಿದ್ದರೆ ಮಾರ್ಗ ಎಂಬುವುದಕ್ಕೆ ಇವರು ಉತ್ತಮ ನಿದರ್ಶನ.
ಹೆಸರು ಶರವಣ್ ಕುಮಾರ್ ವಿಶ್ವಕರ್ಮ. ಉತ್ತರ ಪ್ರದೇಶದವರು. ಒಂದು ಕಾಲದಲ್ಲಿ ಜೀವನ ನಿರ್ವಹಣೆಗಾಗಿ ಟೆಂಪೋ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಆದರೆ ಇಂದು ವಿಮಾನಯಾನ ಕಂಪನಿಯ ಮಾಲೀಕರಾಗಿ ಬೆಳೆದಿದ್ದಾರೆ.
ತಮ್ಮ ಬದುಕಿನಲ್ಲಾದ ತಿರುವಿನ ಕುರಿತು ವಿಷಯ ಹಂಚಿಕೊಂಡಿರುವ ಅವರು, ಉತ್ತರ ಪ್ರದೇಶದ ಕಾನ್ಪುರದಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ನನಗೆ ಬಾಲ್ಯದಲ್ಲಿ ಓದಿನ ಬಗ್ಗೆ ಹೆಚ್ಚಿನ ಆಸಕ್ತಿ ಇರಲಿಲ್ಲ. ಜೀವನೋಪಾಯಕ್ಕಾಗಿ ಟೆಂಪೋ ಓಡಿಸುತ್ತಿದ್ದೆ. ಆ ನಡುವೆ ಕೆಲವು ಸಣ್ಣ ವ್ಯವಹಾರಗಳನ್ನು ಮಾಡಲು ಪ್ರಯತ್ನಿಸಿದೆ. ಆದರೆ ಅವುಗಳಲ್ಲಿ ಯಶ ಕಾಣಲಿಲ್ಲ. ಆದರೂ ನಾನು ಹತಾಶನಾಗಲಿಲ್ಲ. 2014ರಲ್ಲಿ ಸಿಮೆಂಟ್ ವ್ಯಾಪಾರವನ್ನು ಶುರುಮಾಡಿದೆ. ಅದು ನನ್ನ ಕೈಹಿಡಿಯಿತು.
ಸಿಮೆಂಟ್ ವ್ಯಾಪಾರದಿಂದ ಅಪಾರ ಲಾಭಗಳಿಸಿದೆ. ಇದರಿಂದ ವಿಶ್ವಾಸ ಹೆಚ್ಚಿತು. ಬಳಿಕ ಗಣಿಗಾರಿಕೆ ಮತ್ತು ಸಾರಿಗೆ ಉದ್ಯಮಕ್ಕೆ ಕೈಹಾಕಿದೆ. ಹಲವು ಟ್ರಕ್ಗಳನ್ನು ಖರೀದಿಸಿದೆ. ಹೆಚ್ಚಿನ ಸಂಪತ್ತು ಕ್ರೋಢೀಕರಣವಾಧ ಬಳಿಕ ಹಲವು ಯೋಜನೆಗಳು ಮನಸ್ಸಿಗೆ ಬಂದವು. ಅಂಥ ಒಂದು ಆಲೋಚನೆಯ ಫಲವೇ 'ಶಂಖ ಏರ್'.
ವಿಮಾನಯಾನ ಕ್ಷೇತ್ರಕ್ಕೆ ಕಾಲಿಡುವ ಆಲೋಚನೆ ಸುಮಾರು ನಾಲ್ಕು ವರ್ಷಗಳ ಹಿಂದೆಯೇ ಬಂದಿತ್ತು. ಬಳಿಕ ನಾನು ಆ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳಲು ಶುರು ಮಾಡಿದೆ. ನಿರಾಕ್ಷೇಪಣಾ ಪ್ರಮಾಣಪತ್ರ (ಎನ್‌ಒಸಿ) ಅನ್ನು ಹೇಗೆ ಪಡೆಯುವುದು, ನಿಯಮಗಳೇನು ಮತ್ತು ಹೇಗೆ ಕಾರ್ಯನಿರ್ವಹಿಸಬೇಕು ಎಂಬ ಬಗ್ಗೆ ತಿಳಿದುಕೊಂಡೆ. ನಾಲ್ಕು ವರ್ಷಗಳ ಹಿಂದೆ ಪ್ರಾರಂಭವಾದ ಕಲ್ಪನೆ ಈಗ ವಾಸ್ತವದ ರೂಪ ಪಡೆದುಕೊಂಡಿದೆ ಎನ್ನುತ್ತಾರೆ ಅವರು.
ಶಂಖ ಏರ್ ಇದೇ (ಜನವರಿ) ತಿಂಗಳಲ್ಲಿ ಕಾರ್ಯಾಚರಣೆ ಆರಂಭಿಸುವ ನಿರೀಕ್ಷೆಯಿದೆ. ಏರ್‌ಬಸ್‌ನ ಮೂರು ವಿಮಾನಗಳನ್ನು ಬಾಡಿಗೆಗೆ ಪಡೆಯಲಾಗಿದೆ. ಲಖನೌ, ದೆಹಲಿ, ಮುಂಬೈ ಮತ್ತು ಇತರ ನಗರಗಳಿಗೆ ವಿಮಾನಗಳು ಕಾರ್ಯಾಚರಿಸಲಿವೆ ಎಂದು ಶರವಣ್ ಕುಮಾರ್ ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.