ADVERTISEMENT

ಹಣಕಾಸು ಅವ್ಯವಹಾರ ಆರೋಪ: ಕೆಟಿಆರ್‌ ಬಂಧನಕ್ಕೆ ಡಿ.30ರವರೆಗೆ ತಡೆ

ಹೈಕೋರ್ಟ್‌ನಿಂದ ಮಧ್ಯಂತರ ಆದೇಶ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2024, 22:42 IST
Last Updated 20 ಡಿಸೆಂಬರ್ 2024, 22:42 IST
ಕೆ.ಟಿ.ರಾಮರಾವ್‌
ಕೆ.ಟಿ.ರಾಮರಾವ್‌   

ಹೈದರಾಬಾದ್‌: ಫಾರ್ಮುಲಾ– ಇ ರೇಸ್‌ಗೆ ಸಂಬಂಧಿಸಿದ ಹಣಕಾಸು ಅವ್ಯವಹಾರ ಆರೋಪದಡಿ ಬಿಆರ್‌ಎಸ್‌ ಕಾರ್ಯಾಧ್ಯಕ್ಷ ಕೆ.ಟಿ. ರಾಮರಾವ್‌ ಅವರನ್ನು ಡಿ.30ರವರೆಗೆ ಬಂಧಿಸದಂತೆ ತೆಲಂಗಾಣ ಹೈಕೋರ್ಟ್‌ ಶುಕ್ರವಾರ ಮಧ್ಯಂತರ ಆದೇಶ ನೀಡಿದೆ.

‘ಪ್ರಕರಣದ ಕುರಿತಾದ ತನಿಖೆ ಮುಂದುವರಿಯಲಿ ಮತ್ತು ಕೆಟಿಆರ್‌ ಅವರು ತನಿಖೆಗೆ ಸಹಕಾರ ನೀಡಬೇಕು’ ಎಂದು ನ್ಯಾಯಮೂರ್ತಿ ಶ್ರವಣ್‌ ಕುಮಾರ್‌ ಅವರ ಪೀಠವು ಹೇಳಿದೆ.

ಭ್ರಷ್ಟಾಚಾರ ನಿಗ್ರಹ ದಳವು (ಎಸಿಬಿ)ಕೆಟಿಆರ್‌ ವಿರುದ್ಧ ಗುರುವಾರ ಪ್ರಕರಣ ದಾಖಲಿಸಿಕೊಂಡಿತ್ತು. ಎಸಿಬಿ ದಾಖಲಿಸಿಕೊಂಡಿರುವ ಪ್ರಕರಣವನ್ನು ವಜಾಗೊಳಿಸಲು ನಿರ್ದೇಶನ ನೀಡಬೇಕೆಂದು ಕೋರಿ ಕೆಟಿಆರ್‌ ಅವರು ಶುಕ್ರವಾರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ತುರ್ತು ವಿಚಾರಣೆಗೆ ಮನವಿ ಮಾಡಿದ್ದರು. 

ADVERTISEMENT

ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನು ಡಿ.30ಕ್ಕೆ ಮುಂದೂಡಿದೆ.

ಕೆಟಿಆರ್‌ ಅವರು ಪೌರಾಡಳಿತ ಸಚಿವರಾಗಿದ್ದಾಗ ಅನುಮತಿ ಪಡೆಯದೆ ಫಾರ್ಮುಲಾ–ಇ ರೇಸ್‌ ಆಯೋಜಕರಿಗೆ ₹55 ಕೋಟಿ ನೀಡಿದ್ದಾರೆ ಎಂದು ಎಸಿಬಿ ಆರೋಪಿಸಿದೆ.

ಫಾರ್ಮುಲಾ– ಇ ರೇಸ್‌ ವಿಚಾರವಾಗಿ ತೆಲಂಗಾಣ ವಿಧಾನಸಭೆಯಲ್ಲಿ ಶುಕ್ರವಾರ ಗದ್ದಲ ನಡೆಯಿತು.

₹500 ಕೋಟಿ ಉಳಿತಾಯವಾಗಿದೆ: ಫಾರ್ಮುಲಾ– ಇ ರೇಸ್‌ ‌ವಿಚಾರವಾಗಿ ಕೆ.ಟಿ.ರಾಮರಾವ್‌ ವಿರುದ್ಧ ವಾಗ್ದಾಳಿ ನಡೆಸಿದ ತೆಲಂಗಾಣ ಮುಖ್ಯಮಂತ್ರಿ ರೇವಂತ ರೆಡ್ಡಿ ಅವರು, ‘ರೇಸ್‌ ನಡೆಸದೇ ಇರುವುದರಿಂದ ಸರ್ಕಾರಕ್ಕೆ ₹500 ಕೋಟಿ ಉಳಿತಾಯವಾಗಿದೆ’ ಎಂದು ಹೇಳಿದ್ದಾರೆ.

ವಿಧಾನಸಭೆಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ‘₹55 ಕೋಟಿ ನೀಡಿರುವುದಾಗಿ ಕೆಟಿಆರ್‌ ‌ಹೇಳಿದ್ದರು. ಆದರೆ ಅವರು ₹600 ಕೋಟಿಯ ಒಪ್ಪಂದ ಮಾಡಿಕೊಂಡಿದ್ದರು. ನಾನು ಅನುಮತಿ ‌ನೀಡಿದ್ದರೆ ₹600 ಕೋಟಿ ವ್ಯರ್ಥವಾಗುತ್ತಿತ್ತು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.