
ಪೋಷಕರೊಂದಿಗೆ ಅಲಿನ್
ಕೊಚ್ಚಿ: ಕೇರಳದಲ್ಲಿ ಇತ್ತೀಚೆಗೆ ನಡೆದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮಿದುಳು ನಿಷ್ಕ್ರಿಯವಾಗಿದ್ದ 10 ತಿಂಗಳ ಹೆಣ್ಣು ಮಗು ಅಲಿನ್ ಅಬ್ರಾಹಂಳ ಅಂಗಾಂಗಳನ್ನು ದಾನ ಮಾಡಲಾಗಿದೆ.
ಈ ಪ್ರಕರಣ ದೇಶದ ಗಮನ ಸೆಳೆದಿದ್ದು, ಅಲಿನ್ ಪೋಷಕರ ಸಮ್ಮತಿಯ ಮೇರೆಗೆ ಅಂಗಾಂಗಗಳನ್ನು ಕೇರಳದ ವಿವಿಧ ಆಸ್ಪತ್ರೆಗಳಿಗೆ ದಾನ ನೀಡಲಾಗಿದೆ.
ಈ ಮೂಲಕ 10 ತಿಂಗಳ ಅಲಿನ್ ದೇಶದ ಅತ್ಯಂತ ಕಿರಿಯ ಅಂಗಾಂಗ ದಾನಿ ಎನಿಸಿಕೊಂಡಳು. ಇನ್ನೂ ಅಂಬೆಗಾಲು ಇಡದ ಕಂದಮ್ಮ ಎಲ್ಲರ ಕಣ್ಣಂಚಲ್ಲಿ ನೀರು ತರಿಸಿ ಹೋದಳು.
ಏನಾಗಿತ್ತು?
ಫೆಬ್ರುವರಿ 5 ರಂದು ಅಲಿನ್ ತನ್ನ ತಂದೆ ಪಟ್ಟಣಂತಿಟ್ಟು ಜಿಲ್ಲೆಯ ಮಲ್ಲಪಳ್ಳಿಯ ಅರುಣ್ ಅಬ್ರಾಹಂ, ಅಮ್ಮ ಶೆರಿನ್ ಹಾಗೂ ಅಜ್ಜ, ಅಜ್ಜಿ ಜೊತೆ ಕಾರಿನಲ್ಲಿ ಕೊಟ್ಟಾಯಂನಿಂದ ತಿರುವಲ್ಲಕ್ಕೆ ತೆರಳುತ್ತಿದ್ದಳು. ಆದರೆ ಆ ದಿನ ಅಲಿನ್ ಬಾಳಲ್ಲಿ ವಿಧಿ ಅತ್ಯಂತ ಘೋರ ಆಟ ಆಡಿತ್ತು.
ಅಂದು ಮಧ್ಯಾಹ್ನ 2.30ಕ್ಕೆ ಅರುಣ್ ಚಲಾಯಿಸುತ್ತಿದ್ದ ಕಾರು ಕೊಟ್ಟಾಯಂನ ಪಲ್ಲಂ ಬಳಿ ಇನ್ನೊಂದು ಕಾರಿಗೆ ಮುಖಾಮುಖಿ ಡಿಕ್ಕಿಯಾಗಿತ್ತು. ಅಪಘಾತದಲ್ಲಿ ಅಲಿನ್‌ಗೆ ಗಂಭೀರ ಗಾಯವಾಗಿತ್ತು. ಆಕೆಯ ಪೋಷಕರು, ಅಜ್ಜ, ಅಜ್ಜಿ ಸಣ್ಣಪುಟ್ಟ ಗಾಯದಿಂದ ಬದುಕುಳಿದರು.
ತಕ್ಷಣವೇ ಅಲಿನ್‌ಳನ್ನು ತಿರುವಲ್ಲದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ಮಿದುಳಿಗೆ ಹಾನಿಯಾಗಿದೆ ಎಂದು ವೈದ್ಯರು ಹೇಳಿದ್ದರಿಂದ ಕೊಚ್ಚಿಯ ಅಮೃತಾ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿತ್ತು. ವೈದ್ಯರ, ಪೋಷಕರ ಸತತ ಪ್ರಯತ್ನದಿಂದಲೂ ಅಲಿನ್ ಬದುಕುಳಿಯಲಿಲ್ಲ. ಫೆಬ್ರುವರಿ 10 ರಂದು ಅಲಿನ್ ನಿಧನಳಾದಳು ಎಂದು ಅಮೃತಾ ಆಸ್ಪತ್ರೆಯ ವೈದ್ಯರು ಘೋಷಿಸಿದರು.
ತೀವ್ರ ದುಃಖದ ನಡುವೆಯೂ ಅಲಿನ್ ಪೋಷಕರು ಅಂಗಾಂಗ ದಾನಕ್ಕೆ ಸಮ್ಮತಿಸಿದರು. ಕಣ್ಣು, ಹೃದಯ, ಕಿಡ್ನಿ ಮತ್ತೀತರ ಉಪಯುಕ್ತ ಅಂಗಗಳನ್ನು ತಿರುವನಂತಪುರದ ಆಸ್ಪತ್ರೆಗಳಿಗೆ ದಾನ ಮಾಡಲಾಗಿದೆ. ಅಂಗಾಂಗಗಳ ರವಾನೆಗೆ ಕೊಚ್ಚಿ ಪೊಲೀಸರು ಜಿರೋ ಟ್ರಾಫಿಕ್ ವ್ಯವಸ್ಥೆ ಮಾಡಿದ್ದರು.
ಅನೇಕ ನೆಟ್ಟಿಗರು ಇಂತಹ ಕಠಿಣ ಪರಿಸ್ಥಿತಿಯಲ್ಲಿ ಅಲಿನ್ ಪೋಷಕರ ನಿರ್ಧಾರ ಅಚ್ಚರಿ ಮೂಡಿಸುವಂತದ್ದು ಎಂದಿದ್ದಾರೆ. ಅಲ್ಲದೇ ಇನ್ನೂ ಕೆಲವರು ಭಾರತದಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳ ಅಟ್ಟಹಾಸದ ಬಗ್ಗೆ ವ್ಯವಸ್ಥೆ, ಸರ್ಕಾರಗಳ ಬಗ್ಗೆ ಛೀಮಾರಿ ಹಾಕಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.