ADVERTISEMENT

ಕನ್ವಾರ್ ಯಾತ್ರೆಗೆ 10,000 ಭದ್ರತಾ ಸಿಬ್ಬಂದಿ: ಉತ್ತರಾಖಂಡ ಡಿಜಿಪಿ

ಪಿಟಿಐ
Published 28 ಜೂನ್ 2022, 4:15 IST
Last Updated 28 ಜೂನ್ 2022, 4:15 IST
   

ಡೆಹರಾಡೂನ್: ಮುಂಬರುವ ಕನ್ವಾರ್ ಯಾತ್ರೆ ವೇಳೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸಿಸಿಟಿವಿ ಕ್ಯಾಮೆರಾ, ಡ್ರೋನ್ ಜೊತೆ 10,000 ಮಂದಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ಉತ್ತರಾಖಂಡದ ಪೊಲೀಸ್ ಮಹಾನಿರ್ದೆಶಕ ಅಶೋಕ್ ಕುಮಾರ್ ಹೇಳಿದ್ದಾರೆ.

ಕೋವಿಡ್–19 ಹಿನ್ನೆಲೆಯಲ್ಲಿ ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ಯಾತ್ರೆಯನ್ನು ಜುಲೈ 14ರಿಂದ 26ರವರೆಗೆ ನಡೆಸಲು ನಿರ್ಧರಿಸಲಾಗಿದೆ.

ಯಾತ್ರೆಯ ಭಾಗವಾಗಿ ಶಿವನ ಭಕ್ತರು ತಮ್ಮ ಪ್ರದೇಶಗಳ ಶಿವನ ದೇವಾಲಯದಲ್ಲಿ ಪೂಜೆಗಾಗಿ ಹರಿದ್ವಾರದ ಗಂಗಾನದಿಯ ಪವಿತ್ರ ಜಲವನ್ನು ಸಂಗ್ರಹಿಸುತ್ತಾರೆ.

ಅಂತರರಾಜ್ಯ ಸಮನ್ವಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕುಮಾರ್, ಶ್ರಾವಣ ಮಾಸದಲ್ಲಿ ಶಿವ ಭಕ್ತರ ದೊಡ್ಡ ಪ್ರಮಾಣದಲ್ಲಿ ಸೇರುವ ದೃಷ್ಟಿಯಿಂದ, ಡ್ರೋನ್ ಮತ್ತು ಸಿಸಿಟಿವಿ ಕ್ಯಾಮೆರಾಗಳನ್ನು ಬಳಸಲಾಗುವುದು ಮತ್ತು ಬಿಗಿಯಾದ ಭದ್ರತಾ ವ್ಯವಸ್ಥೆಗಳನ್ನು ಖಚಿತಪಡಿಸಿಕೊಳ್ಳಲು ಸಾಮಾಜಿಕ ಮಾಧ್ಯಮಗಳ ಮೂಲಕ ಮೇಲ್ವಿಚಾರಣೆ ಮಾಡಲಾಗುತ್ತದೆ ಎಂದು ಹೇಳಿದರು.

ADVERTISEMENT

ಶಾಂತಿ ಕಾಪಾಡುವಲ್ಲಿ ಪೊಲೀಸರು ಮತ್ತು ಸ್ಥಳೀಯ ಆಡಳಿತದೊಂದಿಗೆ ಸಹಕರಿಸುವಂತೆ ಸಾಮಾಜಿಕ ಮಾಧ್ಯಮಗಳ ಮೂಲಕ ಶಿವಭಕ್ತರಿಗೆ ಮನವಿ ಮಾಡಲಾಗುವುದು. ಎಂದು ಅವರು ತಿಳಿಸಿದ್ದಾರೆ.

ಚಾರ್‌ಧಾಮ್, ಮಸೂರಿ ಮತ್ತು ಡೆಹರಾಡೂನ್‌ಗೆ ಭೇಟಿ ನೀಡುವ ಪ್ರವಾಸಿಗರು ಮತ್ತು ಭಕ್ತರು ಯಾವುದೇ ಸಮಸ್ಯೆಗಳನ್ನು ಎದುರಿಸದಂತೆ ನೆರೆಯ ರಾಜ್ಯಗಳು ಯಾತ್ರೆಯ ನಿಗದಿತ ಮಾರ್ಗಗಳನ್ನು ಪ್ರಚಾರ ಮಾಡುವ ನಿರೀಕ್ಷೆಯಿದೆ ಎಂದು ಕುಮಾರ್ ಹೇಳಿದರು.

ಉತ್ತರ ಪ್ರದೇಶ, ಹರಿಯಾಣ, ದೆಹಲಿ, ಹಿಮಾಚಲ ಪ್ರದೇಶ, ಪಂಜಾಬ್, ರಾಜಸ್ಥಾನ ಮತ್ತು ಇತರ ಸ್ಥಳಗಳಿಂದ ಬರುವ ಕನ್ವಾರಿಯಾಗಳ ಸುರಕ್ಷಿತ ಪ್ರಯಾಣವನ್ನು ಖಚಿತಪಡಿಸುವುದು ಈ ಸಭೆಯ ಉದ್ದೇಶವಾಗಿದೆ ಎಂದು ಅವರು ಹೇಳಿದರು.

ಈ ವರ್ಷ, ಹರಿದ್ವಾರ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಯಾತ್ರೆಗಾಗಿ 12 ಸೂಪರ್ ಜೋನ್‌ಗಳು, 31 ವಲಯಗಳು ಮತ್ತು 133 ಸೆಕ್ಟರ್‌ಗಳಾಗಿ ವಿಂಗಡಿಸಲಾಗಿದೆ ಮತ್ತು ಸುಮಾರು 9,000-10,000 ಭದ್ರತಾ ಸಿಬ್ಬಂದಿಯನ್ನು ಭದ್ರತೆ ಕಾಪಾಡಲು ನಿಯೋಜಿಸಲಾಗುವುದು ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.