ADVERTISEMENT

ಉಗ್ರರ ಭೀತಿ: ಬಂದೋಬಸ್ತ್ ಬಿಗಿ

ಗುಜರಾತ್‌ನ ಕಛ್‌ ಕೊಲ್ಲಿ ಮೂಲಕ ಭಯೋತ್ಪಾದಕರು ನುಸುಳುವ ಸಾಧ್ಯತೆ: ಗುಪ್ತಚರ ಮಾಹಿತಿ

ಪಿಟಿಐ
Published 29 ಆಗಸ್ಟ್ 2019, 19:37 IST
Last Updated 29 ಆಗಸ್ಟ್ 2019, 19:37 IST
   

ಭುಜ್‌: ಪಾಕಿಸ್ತಾನದ ಉಗ್ರರು ಸಮುದ್ರ ಮಾರ್ಗದ ಮೂಲಕ ಭಾರತದೊಳಕ್ಕೆ ನುಸುಳುವ ಸಾಧ್ಯತೆ ಇದೆ ಎಂದು ಗುಪ್ತಚರ ಮಾಹಿತಿ ದೊರೆತಿದೆ.

ಪಾಕಿಸ್ತಾನದ ಕರಾವಳಿಗೆ ಹತ್ತಿರದಲ್ಲಿರುವ ಗುಜರಾತ್‌ ಕರಾವಳಿಯ ಮೂಲಕ ಅವರು ನುಸುಳಬಹುದು ಎನ್ನಲಾಗಿದೆ. ಹಾಗಾಗಿ, ಗುಜರಾತ್‌ನ ಕಾಂಡ್ಲಾ ಮತ್ತು ಮುಂದ್ರಾ ಬಂದರುಗಳಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ಕಾಶ್ಮೀರದ ವಿಶೇಷಾಧಿಕಾರ ರದ್ದತಿಯಿಂದಾಗಿ ಭಾರತ–ಪಾಕಿಸ್ತಾನ ನಡುವಣ ಸಂಬಂಧ ವಿಷಮಗೊಂಡಿರುವ ಬೆನ್ನಿಗೇ ಈ ಮಾಹಿತಿ ಹೊರಬಿದ್ದಿದೆ.

ಮುಂಬೈ ಮೇಲೆ ಉಗ್ರರು 2008ರಲ್ಲಿ ನಡೆಸಿದ ಮಾದರಿಯಲ್ಲಿಯೇ ಈ ದಾಳಿಯನ್ನು ನಡೆಸಲು ಅವರು ಯೋಜಿಸಿರಬಹುದು ಎಂದು ಅಂದಾಜಿಸಲಾಗಿದೆ.

ADVERTISEMENT

ಸಮುದ್ರ ಮಾರ್ಗದ ಮೂಲಕ ಭಯೋತ್ಪಾದನಾ ದಾಳಿ ನಡೆಯಬಹುದು ಎಂದು ಭಾರತದ ನೌಕಾಪಡೆಯೂ ಕೆಲ ದಿನಗಳ ಹಿಂದೆ ಎಚ್ಚರಿಕೆ ನೀಡಿತ್ತು.

ಮುಂದ್ರಾ ಬಂದರನ್ನು ಅದಾನಿ ಸಮೂಹವು ನಿರ್ವಹಿಸುತ್ತಿದೆ. ಇದು ದೇಶದ ಅತಿ ದೊಡ್ಡ ಬಂದರು. ಕಳೆದ ವರ್ಷ ಈ ಬಂದರು ಅತಿ ಹೆಚ್ಚು ಸರಕು ಸಾಗಾಟ ನಡೆಸಿತ್ತು. ಕಾಂಡ್ಲಾ ಬಂದರನ್ನು ಸರ್ಕಾರವೇ ನಿರ್ವಹಿಸುತ್ತಿದೆ. ಅತಿ ಹೆಚ್ಚು ಸರಕು ನಿರ್ವಹಣೆಯ ಸಾಮರ್ಥ್ಯ ಈ ಬಂದರಿಗೆ ಇದೆ.

ಕಟ್ಟೆಚ್ಚರದ ಕಾರಣ ಅಹಮದಾಬಾದ್‌ನಲ್ಲಿ ವಾಹನಗಳ
ತಪಾಸಣೆ ನಡೆಸಲಾಯಿತು.

ಈ ಎರಡೂ ಪ್ರದೇಶಗಳು ಅರಬ್ಬಿ ಸಮುದ್ರದ ಕಛ್‌ ಕೊಲ್ಲಿಯಲ್ಲಿವೆ. ಈ ಪ್ರದೇಶ ಪಾಕಿಸ್ತಾನಕ್ಕೆ ಬಹಳ ಹತ್ತಿರ.

ಪ್ರಮುಖ ನೆಲೆ: ಗುಜರಾತ್‌ನ ಕಛ್‌ ಪ್ರದೇಶವು ಹಲವು ಮಹತ್ವದ ಕೈಗಾರಿಕೆ ಗಳನ್ನು ಹೊಂದಿರುವ ಪ್ರದೇಶ. ಜಗತ್ತಿನ ಅತ್ಯಂತ ದೊಡ್ಡ ತೈಲ ಸಂಸ್ಕರಣಾ ಘಟಕ ಇಲ್ಲಿನ ಜಾಮ್‌ನಗರದಲ್ಲಿದೆ. ಇದನ್ನು ರಿಲಯನ್ಸ್‌ ಇಂಡಸ್ಟ್ರೀಸ್‌ ನಡೆ ಸುತ್ತಿದೆ. ರಷ್ಯಾದ ಕಂಪನಿ ರಾಸ್‌ನೆಫ್ಟ್‌ ನಿರ್ವಹಿಸುತ್ತಿರುವ ಇದೇ ರೀತಿಯ ಇನ್ನೊಂದು ಸಂಸ್ಕರಣಾ ಘಟಕ ವದಿನಾರ್‌ನಲ್ಲಿದೆ.

‘ಭಯೋತ್ಪಾದಕರ ನುಸುಳುವಿಕೆಗೆ ಸಂಬಂಧಿಸಿ ಕಾಲ ಕಾಲಕ್ಕೆ ನಮಗೆ ಮಾಹಿತಿ ದೊರೆಯುತ್ತದೆ. ಹಾಗಾಗಿ, ಕಾಂಡ್ಲಾ ಬಂದರು ಸೇರಿದಂತೆ ಕಛ್‌ ಜಿಲ್ಲೆಯಲ್ಲಿ ಬಂದೋಬಸ್ತ್‌ ಬಿಗಿಗೊಳಿಸ ಲಾಗಿದೆ’ ಎಂದು ಪೊಲೀಸ್‌ ಮಹಾನಿರೀಕ್ಷಕ (ಗಡಿ ವಿಭಾಗ) ಡಿ.ಬಿ. ವಾಘೇಲಾ ಹೇಳಿದ್ದಾರೆ.

‘ಸ್ವಾತಂತ್ರ್ಯ ದಿನಕ್ಕೆ ಮೊದಲೇ ಈ ಪ್ರದೇಶದಲ್ಲಿ ಭದ್ರತೆ ಹೆಚ್ಚಿಸಲಾಗಿತ್ತು. ಗುಜರಾತ್‌ಗೆ ಉಗ್ರರು ನುಸುಳಿರುವ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ. ಆದರೆ, ಉಗ್ರರು ಸಮುದ್ರ ಮಾರ್ಗದಲ್ಲಿ ಬರಬಹುದು ಎಂಬ ಮಾಹಿತಿ ಇದೆ’ ಎಂದು ಅವರು ತಿಳಿಸಿದ್ದಾರೆ.

ನೌಕಾಪಡೆ ಸನ್ನದ್ಧ: ನೌಕಾಪಡೆಯು ಸನ್ನದ್ಧವಾಗಿದೆ. ಸಮುದ್ರ ಮಾರ್ಗದ ಮೂಲಕ ಎದುರಾಗುವ ಯಾವುದೇ ದಾಳಿಯನ್ನು ಹಿಮ್ಮೆಟ್ಟಿಸಲು ಬೇಕಾದ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ನೌಕಾಪಡೆಯ ಅಧಿಕಾರಿಗಳು ಕಳೆದ ವಾರವೇ ಹೇಳಿದ್ದರು.

ಕರಾವಳಿ ಭದ್ರತೆಗೆ ಬೇಕಾದ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ಭದ್ರತಾ ಪಡೆಗಳು ಅತ್ಯಂತ ಎಚ್ಚರದಲ್ಲಿವೆ ಎಂದು ನೌಕಾಪಡೆಯ ಉಪ ಮುಖ್ಯಸ್ಥ ಮುರಳೀಧರ ಪವಾರ್‌ ಹೇಳಿದ್ದಾರೆ.

ಯುದ್ಧೋನ್ಮಾದ

ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನದ ನಡುವೆ ಪೂರ್ಣ ಪ್ರಮಾಣದ ಯುದ್ಧ ನಡೆಯಲಿದೆ ಎಂದುಪಾಕಿಸ್ತಾನದ ರೈಲ್ವೆ ಸಚಿವ ಶೇಕ್ ರಶೀದ್ ಅಹಮದ್ ಹೇಳಿದ್ದಾರೆ.

‘ಕಾಶ್ಮೀರ ಸ್ವಾತಂತ್ರ್ಯಕ್ಕಾಗಿ ನಡೆಯುವ ಕೊನೆಯ ಯುದ್ಧ ಸನಿಹವಾಗುತ್ತಿದೆ’ ಎಂದುರಾವಲ್ಪಿಂಡಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಶೀದ್ ಹೇಳಿಕೆ ನೀಡಿದ್ದಾರೆ ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ.

ದೋಣಿ ತಂದ ಆತಂಕ

ಕಛ್‌ ಜಿಲ್ಲೆಯ ಹರಾಮಿ ನಾಲೆಯಲ್ಲಿ ಪಾಕಿಸ್ತಾನದ ನಾಲ್ಕು ಮೀನುಗಾರಿಕಾ ದೋಣಿಗಳನ್ನು ಗಡಿ ಭದ್ರತಾ ಪಡೆಯು ನಾಲ್ಕು ದಿನಗಳ ಹಿಂದೆ ಪತ್ತೆ ಮಾಡಿತ್ತು.

ಹರಾಮಿ ನಾಲೆಯ ಮೂಲಕ ಕಛ್‌ ಕೊಲ್ಲಿಗೆ ಪಾಕಿಸ್ತಾನದಲ್ಲಿ ತರಬೇತಿ ಪಡೆದ ಉಗ್ರರು ನುಸುಳಿದ್ದಾರೆ ಎಂಬ ಗುಪ್ತಚರ ಮಾಹಿತಿ.

ಈ ಉಗ್ರರಿಗೆ ನೀರಿನಡಿಯಿಂದಲೇ ದಾಳಿ ನಡೆಸುವ ತರಬೇತಿ ನೀಡಲಾಗಿದೆ ಎಂಬ ಮಾಹಿತಿ ಇದೆ.

ನಿತ್ಯದ ಗಸ್ತು ಸಂದರ್ಭದಲ್ಲಿ ದೋಣಿಗಳನ್ನು ಪತ್ತೆ ಮಾಡಲಾಗಿದೆ. ಈ ರೀತಿ ದೋಣಿ ಸಿಗುವುದು ಅಪರೂಪ ಏನಲ್ಲ. ಆದರೆ, ಈ ಬಾರಿ ಹೆಚ್ಚಿನ ಎಚ್ಚರಿಕೆ ವಹಿಸಲಾಗಿದೆ.ಒಬ್ಬ ಉಗ್ರನ ರೇಖಾಚಿತ್ರವನ್ನು ಬಿಡುಗಡೆ ಮಾಡಲಾಗಿದೆ.

ತಮಿಳುನಾಡಿನಲ್ಲಿ ಶೋಧ

ಚೆನ್ನೈ: ಉಗ್ರಗಾಮಿ ಸಂಘಟನೆ ಐಎಎಸ್‌ನ ಕೇರಳ–ತಮಿಳುನಾಡು ಕಾರ್ಯಾಚರಣೆಯ ಬಗ್ಗೆ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆಯು ಕೊಯಮತ್ತೂರಿನ ಐದು ಸ್ಥಳಗಳಲ್ಲಿ ಗುರುವಾರ ಶೋಧ ನಡೆಸಿದೆ.

ಐಎಸ್‌ ಜತೆಗೆ ಸಂಪರ್ಕ ಹೊಂದಿದ್ದಾರೆ ಎಂಬ ಶಂಕೆಯಲ್ಲಿ ಜೂನ್‌ನಲ್ಲಿ ಬಂಧನಕ್ಕೆ ಒಳಗಾದ ಮೊಹಮ್ಮದ್‌ ಅಜರುದ್ದೀನ್‌ ಮತ್ತು ಶೇಖ್‌ ಹಿದಾಯತ್‌ ಉಲ್ಲಾ ಎಂಬವರ ಸಹವರ್ತಿಗಳಿಗೆ ಸೇರಿದ ಸ್ಥಳಗಳಲ್ಲಿ ಈ ಶೋಧ ನಡೆದಿದೆ.

ಶ್ರೀಲಂಕಾದಲ್ಲಿ ಈಸ್ಟರ್‌ ಸಂದರ್ಭದಲ್ಲಿ ನಡೆದ ಸ್ಫೋಟದ ಆತ್ಮಹತ್ಯಾ ಬಾಂಬರ್‌ಗಳಲ್ಲಿ ಒಬ್ಬನಾದ ಜಹ್ರಾನ್‌ ಹಾಶಿಂ ಜತೆಗೆ ಅಜರುದ್ದೀನ್‌ ನಿಕಟ ಸಂಬಂಧ ಹೊಂದಿದ್ದ. ಹಾಶಿಂನ ಫೇಸ್‌ಬುಕ್‌ ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡುವ ಕೆಲಸ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ.

ಒಂದು ಲ್ಯಾಪ್‌ಟಾಪ್‌, ಐದು ಮೊಬೈಲ್‌, ನಾಲ್ಕು ಸಿಮ್‌ ಕಾರ್ಡ್‌, ಒಂದು ಮೆಮೊರಿ ಕಾರ್ಡ್‌ ಮತ್ತು ಭಾರಿ ಪ್ರಮಾಣದ ದಾಖಲೆಗಳನ್ನು ಶೋಧದಲ್ಲಿ ವಶಕ್ಕೆ ಪಡೆಯಲಾಗಿದೆ. ಶಂಕಿತರ ಜತೆಗಿನ ಸಂಬಂಧದ ಬಗ್ಗೆ ಎಲ್ಲ ಐವರನ್ನು ತನಿಖೆಗೆ ಒಳಪಡಿಸಲಾಗಿದೆ.

ಶ್ರೀಲಂಕಾದಿಂದ ಸಮುದ್ರಮಾರ್ಗವಾಗಿ ಬಂದ ಲಷ್ಕರ್‌ ಎ ತಯಬಾದ ಆರು ಉಗ್ರರು ತಮಿಳುನಾಡು ಪ್ರವೇಶಿಸಿದ್ದಾರೆ ಎಂಬ ಮಾಹಿತಿಯ ಆಧಾರದಲ್ಲಿ ಕಳೆದ ವಾರ ತಮಿಳುನಾಡಿನಲ್ಲಿ ಕಟ್ಟೆಚ್ಚರ ವಹಿಸ ಲಾಗಿತ್ತು. ವಾರದ ಬಳಿಕ ಈ ಶೋಧ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.