ADVERTISEMENT

ಬೆದರಿಕೆ ನಡುವೆಯೂ ಸಹಜಸ್ಥಿತಿಯತ್ತ ಕಾಶ್ಮೀರ

ಜುಲ್ಫಿಕರ್ ಮಜಿದ್
Published 19 ಸೆಪ್ಟೆಂಬರ್ 2019, 19:35 IST
Last Updated 19 ಸೆಪ್ಟೆಂಬರ್ 2019, 19:35 IST
ಶ್ರೀನಗರದ ರಸ್ತೆಗಳಲ್ಲಿ ಖಾಸಗಿ ವಾಹನಗಳ ಓಡಾಟ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಪಿಟಿಐ ಚಿತ್ರ
ಶ್ರೀನಗರದ ರಸ್ತೆಗಳಲ್ಲಿ ಖಾಸಗಿ ವಾಹನಗಳ ಓಡಾಟ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಪಿಟಿಐ ಚಿತ್ರ   

ಶ್ರೀನಗರ: ವಿಶೇಷಾಧಿಕಾರ ರದ್ದತಿಯನ್ನು ಖಂಡಿಸಿ ಸಂಪೂರ್ಣ ಬಂದ್‌ ನಡೆಸಬೇಕು, ಯಾವುದೇ ವ್ಯವಹಾರ ನಡೆಯಬಾರದು ಎಂಬ ಒತ್ತಡವನ್ನು ಉಗ್ರಗಾಮಿ ಸಂಘಟನೆಗಳು ಹೇರುತ್ತಲೇ ಇವೆ. ಕಲ್ಲುತೂರಾಟದ ಘಟನೆಗಳೂ ನಡೆಯುತ್ತಿವೆ. ಹಾಗಿದ್ದರೂ ಕಾಶ್ಮೀರವು ನಿಧಾನಕ್ಕೆ ಸಹಜ ಸ್ಥಿತಿಗೆ ಮರಳುತ್ತಿದೆ. ಸರ್ಕಾರಿ ಕಚೇರಿಗಳು ಸಹಜವಾಗಿ ಕಾರ್ಯನಿರ್ವಹಿಸಲು ಆರಂಭಿಸಿವೆ.

ಯಾರೂ ಮನೆಯಿಂದ ಹೊರಗೆ ಬರಬಾರದು ಎಂದು ಒತ್ತಡ ಹೇರುವ ಭಿತ್ತಿಪತ್ರಗಳು ಈ ತಿಂಗಳ ಆರಂಭದಿಂದಲೇ ಕಾಶ್ಮೀರದಾದ್ಯಂತ ಕಾಣಿಸಿಕೊಂಡಿದ್ದವು. ಅಂಗಡಿ ತೆರೆಯುವ ವರ್ತಕರು ಮತ್ತು ಕೆಲಸಕ್ಕೆ ಹಾಜರಾಗುವ ಉದ್ಯೋಗಿಗಳು ಭಾರಿ ಪರಿಣಾಮ ಎದುರಿಸಬೇಕಾದೀತು ಎಂಬ ಎಚ್ಚರಿಕೆಯನ್ನೂ ನೀಡಲಾಗಿತ್ತು. ಪೆಟ್ರೋಲ್‌ ಪಂಪ್‌ ತೆರೆದರೆ ಅದನ್ನು ಸ್ಫೋಟಿಸಲಾಗುವುದು ಎಂದು ಬೆದರಿಕೆ ಒಡ್ಡಲಾಗಿತ್ತು.

ಉತ್ತರ ಕಾಶ್ಮೀರದ ಸೊಪೋರ್‌ನಲ್ಲಿ ಅಪರಿಚಿತ ಕಲ್ಲುತೂರಾಟಗಾರರು ಇದೇ 16ರಂದು ವಾಹನವೊಂದನ್ನು ಸುಟ್ಟು ಹಾಕಿದ್ದರು.ನೂರಾರು ವಾಹನಗಳಿಗೆ ಹಾನಿ ಮಾಡಲಾಗಿದೆ. ಯಾವುದೇ ಪಕ್ಷ ಅಥವಾ ಸಂಘಟನೆ ಬಂದ್‌ಗೆ ಕರೆ ನೀಡದೇ ಇದ್ದರೂ ಕಾಶ್ಮೀರ ಕಣಿವೆ ಇತ್ತೀಚಿನವರೆಗೆ ಪೂರ್ಣವಾಗಿ ಸ್ಥಗಿತವಾಗಿತ್ತು.

ADVERTISEMENT

ಈಗ, ಪರಿಸ್ಥಿತಿ ಬದಲಾಗುತ್ತಿದೆ. ರಸ್ತೆಯಲ್ಲಿ ಖಾಸಗಿ ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸರ್ಕಾರಿ ಕಚೇರಿಗಳು ಮತ್ತು ನ್ಯಾಯಾಲಯಗಳು ಬಹುತೇಕ ಸಹಜ ಸ್ಥಿತಿಗೆ ತಲುಪಿವೆ. ಶ್ರೀನಗರದಲ್ಲಿ ಅಂಗಡಿಗಳು ತೆರೆದಿವೆ. ಹಳೆ ನಗರ ಮತ್ತು ಕೆಲವು ಕಡೆಗಳಲ್ಲಿ ಮಾತ್ರ ಬೆಳಿಗ್ಗೆ ಮತ್ತು ಸಂಜೆ ಅಂಗಡಿಗಳು ತೆರೆಯುತ್ತಿವೆ.

ಹೆತ್ತವರು ಮಕ್ಕಳನ್ನು ಶಾಲೆ ಕಾಲೇಜುಗಳಿಗೆ ಕಳುಹಿಸುತ್ತಿಲ್ಲ ಎಂಬ ಕಾರಣಕ್ಕೆ ಶಿಕ್ಷಣ ಸಂಸ್ಥೆಗಳು ಈಗಲೂ ತೆರೆದಿಲ್ಲ. ಆದರೆ, ವಿದ್ಯಾರ್ಥಿಗಳಿಗೆ ಮನೆಕೆಲಸಗಳನ್ನು ನೀಡುವ ಮೂಲಕ ಅವರ ಕಲಿಕೆ ಮುಂದುವರಿಯುವಂತೆ ಶಿಕ್ಷಣ ಸಂಸ್ಥೆಗಳು ವ್ಯವಸ್ಥೆ ಮಾಡಿಕೊಂಡಿವೆ. ಅಕ್ಟೋಬರ್‌ನಲ್ಲಿ ನಡೆಯಲಿರುವ ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ. ಹಾಗಾಗಿ, ಶಾಲಾ ಕಾಲೇಜುಗಳು ಕೂಡ ಶೀಘ್ರದಲ್ಲಿಯೇ ಸಹಜ ಸ್ಥಿತಿಗೆ ಬರುವ ನಿರೀಕ್ಷೆ ಇದೆ.

ಪೂರ್ವ ಪ್ರಾಥಮಿಕ ತರಗತಿಗಳಿಗೆ ಮಕ್ಕಳ ಸೇರ್ಪಡೆ ಪ್ರಕ್ರಿಯೆ ಆರಂಭವಾಗಿದೆ. ಹೆತ್ತವರು ಮಕ್ಕಳೊಂದಿಗೆ ಸಂದರ್ಶನಗಳಿಗೆ
ಹಾಜರಾಗುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.