ADVERTISEMENT

ಭಯೋತ್ಪಾದನೆ ಪ್ರೋತ್ಸಾಹಿಸುವ ದೇಶಗಳ ಬಣ್ಣ ವಿಶ್ವಸಂಸ್ಥೆ ಕ್ರಮದಿಂದ ಬಯಲು: ಜೈಶಂಕರ್

ಪಿಟಿಐ
Published 29 ಅಕ್ಟೋಬರ್ 2022, 6:10 IST
Last Updated 29 ಅಕ್ಟೋಬರ್ 2022, 6:10 IST
ವಿದೇಶಾಂಗ ಸಚಿವ ಜೈಶಂಕರ್‌
ವಿದೇಶಾಂಗ ಸಚಿವ ಜೈಶಂಕರ್‌   

ನವದೆಹಲಿ: 'ಭಯೋತ್ಪಾದನೆಯನ್ನು ಸರ್ಕಾರಿ-ಅನುದಾನಿತ ಉದ್ಯಮವನ್ನಾಗಿಸಿಕೊಂಡಿರುವ ದೇಶಗಳ ಬಣ್ಣ ಬಯಲಾಗಲು ವಿಶ್ವಸಂಸ್ಥೆಯ ಭಯೋತ್ಪಾದನಾ ನಿಗ್ರಹ ಕ್ರಮಗಳು ಪರಿಣಾಮಕಾರಿಯಾಗಿವೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಶನಿವಾರ ಹೇಳಿದರು. ಈ ಮೂಲಕ ಪಾಕಿಸ್ತಾನಕ್ಕೆ ಚಾಟಿ ಬೀಸಿದರು.

ದೆಹಲಿಯಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಭಯೋತ್ಪಾದನಾ ನಿಗ್ರಹ ಸಮಿತಿಯ ಸಭೆಯಲ್ಲಿ ಮಾತನಾಡಿದ ಜೈಶಂಕರ್, ‘ಮಾನುಕುಲಕ್ಕೆ ಎದುರಾಗಿರುವ ಗಂಭೀರ ಬೆದರಿಕೆಗಳಲ್ಲಿ ಭಯೋತ್ಪಾದನೆಯೂ ಒಂದು’ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ವಿಶ್ವಸಂಸ್ಥೆಯ ಪ್ರಯತ್ನಗಳ ಹೊರತಾಗಿಯೂ, ಭಯೋತ್ಪಾದನೆ ವಿಶೇಷವಾಗಿ ಏಷ್ಯಾ ಮತ್ತು ಆಫ್ರಿಕಾದಲ್ಲಿ ಹೆಚ್ಚುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಕಳೆದ ಎರಡು ದಶಕಗಳಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಭಯೋತ್ಪಾದನೆಯ ಬೆದರಿಕೆಯನ್ನು ಎದುರಿಸಲು ರೂಪುರೇಷೆ ರೂಪಿಸುತ್ತಾ ಬಂದಿದೆ. ಭಯೋತ್ಪಾದನೆಯನ್ನು ರಾಜ್ಯ-ಅನುದಾನಿತ ಉದ್ಯಮವಾಗಿ ಪರಿವರ್ತಿಸಿರುವ ದೇಶಗಳ ಬಣ್ಣ ಬಯಲಾಗುವಂತೆ ಮಾಡಲು ವಿಶ್ವಸಂಸ್ಥೆಯ ಕ್ರಮಗಳು ತುಂಬಾ ಪರಿಣಾಮಕಾರಿಯಾಗಿವೆ’ ಎಂದು ಜೈಶಂಕರ್ ಹೇಳಿದರು.

‘ಮುಕ್ತ ಸಮಾಜಗಳ ನೀತಿಯನ್ನು ಸ್ವಾತಂತ್ರ್ಯ, ಸಹಿಷ್ಣುತೆ ಮತ್ತು ಪ್ರಗತಿಯ ಮೇಲಿನ ದಾಳಿಗೆ ಬಳಸಲಾಗುತ್ತಿದೆ’ ಎಂದು ಸಚಿವರು ಹೇಳಿದರು.

ಭಯೋತ್ಪಾದಕ ಗುಂಪುಗಳು ಹೊಸ ತಂತ್ರಜ್ಞಾನಗಳನ್ನು ಬಳಸುತ್ತಿರುವುದರ ಬಗ್ಗೆ ಜೈಶಂಕರ್‌ ಮಾತನಾಡಿದರು. ‘ಇಂಟರ್ನೆಟ್ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳು ಭಯೋತ್ಪಾದಕರ ಟೂಲ್‌ಕಿಟ್‌ನಲ್ಲಿ ಪ್ರಬಲ ಸಾಧನಗಳಾಗಿ ಬಳಕೆಯಾಗುತ್ತಿವೆ’ ಎಂದು ಆರೋಪಿಸಿದರು.

‘ಇತ್ತೀಚಿನ ವರ್ಷಗಳಲ್ಲಿ, ಭಯೋತ್ಪಾದಕ ಗುಂಪುಗಳು, ಅವರ ಸೈದ್ಧಾಂತಿಕ ಬೆಂಬಲಿಗರು ತಂತ್ರಜ್ಞಾನದ ಅನುಕೂಲ ಪಡೆದು, ತಮ್ಮ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಿಕೊಂಡಿದ್ದಾರೆ’ ಎಂದು ಜೈಶಂಕರ್ ಹೇಳಿದರು.

‘ಸ್ವಾತಂತ್ರ್ಯ, ಸಹಿಷ್ಣುತೆ ಮತ್ತು ಪ್ರಗತಿಯ ಮೇಲೆ ಆಕ್ರಮಣ ಮಾಡಲು ಅವರು ತಂತ್ರಜ್ಞಾನ ಮತ್ತು ಹಣವನ್ನು ಬಳಸುತ್ತಿದ್ದಾರೆ. ಮುಖ್ಯವಾಗಿ ಮುಕ್ತ ಸಮಾಜಗಳ ನೀತಿಯನ್ನೂ ಬಳಸುತ್ತಿದ್ದಾರೆ’ ಎಂದು ಹೇಳಿದರು.

ಭಯೋತ್ಪಾದಕ ಗುಂಪು ಮತ್ತು ಸಂಘಟಿತ ಅಪರಾಧ ಜಾಲಗಳು ಮಾನವರಹಿತ ವೈಮಾನಿಕ ವ್ಯವಸ್ಥೆಗಳನ್ನು ಬಳಸಿಕೊಳ್ಳುತ್ತಿವೆ. ಸರ್ಕಾರಗಳು ಈ ಬಗ್ಗೆ ಚಿಂತೆಗೀಡಾಗಿವೆ ಎಂದು ಎಂದು ಅವರು ವಿವರಿಸಿದರು.

‘ಭಯೋತ್ಪಾದಕ ಉದ್ದೇಶಗಳಿಗಾಗಿ ಶಸ್ತ್ರಸಜ್ಜಿತ ಡ್ರೋನ್‌ಗಳನ್ನು ಬಳಸುತ್ತಿರುವುದು ಗಂಭೀರ ವಿಷಯ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.