ರಜೌರಿ: ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ತನಮಂಡಿ ಪ್ರದೇಶದ ಡರ್‍ರಾ ಬಾರಚಾರ ಗ್ರಾಮದಲ್ಲಿದ್ದ ಉಗ್ರರ ಅಡಗುತಾಣವೊಂದನ್ನು ಸೇನೆ ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಧ್ವಂಸಗೊಳಿಸಿದ್ದಾರೆ. ಅಡಗುತಾಣದಿಂದ 10 ಗ್ರೆನೇಡ್ ಲಾಂಚರ್‌ಗಳನ್ನು ವಶಕ್ಕೆ ಪಡೆಯಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಯಾರವನ್ನೂ ಬಂಧಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಭಾಂಗಣಕ್ಕೆ ರಾಜ್ ಕುಮಾರ್ ಥಾಪಾ ಹೆಸರು: ಪಾಕಿಸ್ತಾನದ ದಾಳಿಯಲ್ಲಿ ಹುತಾತ್ಮರಾಗಿರುವ ಜಮ್ಮು–ಕಾಶ್ಮೀರದ ಆಡಳಿತ ಸೇವಾ (ಜೆಕೆಎಎಸ್) ಅಧಿಕಾರಿ ರಾಜ್ ಕುಮಾರ್ ಥಾಪಾ ಹೆಸರನ್ನು ಇಲ್ಲಿನ ಡಾಕ್ ಬಂಗ್ಲೆ ಸಭಾಂಗಣಕ್ಕೆ ಇಡುವ ಮೂಲಕ ರಜೌರಿ ಜಿಲ್ಲಾಡಳಿತವು ಜನಾನುರಾಗಿಯಾಗಿದ್ದ ಅಧಿಕಾರಿಗೆ ನಮನ ಸಲ್ಲಿಸಿದೆ.
ಎಂಬಿಬಿಎಸ್ ಪದವೀಧರರಾಗಿದ್ದ ಥಾಪಾ (54), 2001ರಲ್ಲಿ ಜೆಕೆಎಎಸ್‌ಗೆ ಸೇರ್ಪಡೆಗೊಂಡು, ಕಳೆದ ವರ್ಷ ರಜೌರಿ ಜಿಲ್ಲೆಗೆ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ನೇಮಕಗೊಂಡಿದ್ದರು. ಮೇ 10ರಂದು ತಮ್ಮ ಗೃಹ ಕಚೇರಿಯ ಮೇಲೆ ನಡೆದ ಶೆಲ್ ದಾಳಿಯಲ್ಲಿ ಅವರು ಮೃತಪಟ್ಟಿದ್ದರು.
ಜಿಲ್ಲಾಡಳಿತದ ವತಿಯಿಂದ ರಾಜ್ ಕುಮಾರ್ ಥಾಪಾ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ರಜೌರಿ ಜಿಲ್ಲಾ ಅಭಿವೃದ್ಧಿ ನಿಗಮದ ಅಧ್ಯಕ್ಷ ನಸೀಮ್ ಲಿಖಾತ್, ಜಿಲ್ಲಾಧಿಕಾರಿ ಅಭಿಷೇಕ್ ಶರ್ಮಾ, ಜಿಲ್ಲಾಡಳಿತದ ಅಧಿಕಾರಿಗಳು, ರಾಜ್ ಕುಮಾರ್ ಥಾಪಾ ಅವರ ಕುಟುಂಬ ಸದಸ್ಯರು ಇದ್ದರು.
ಸಭೆಗೂ ಮುನ್ನ ರಾಜ್ ಕುಮಾರ್ ಥಾಪಾ ಅವರು ಕೊನೆಯ ಕ್ಷಣಗಳನ್ನು ಕಳೆದಿದ್ದ ಅವರ ಗೃಹ ಕಚೇರಿಗೆ ಕುಟುಂಬ ಸದಸ್ಯರು ಭೇಟಿ ನೀಡಿದರು. ಅವರ ಸ್ಮರಣಾರ್ಥ ಕಚೇರಿ ಆವರಣದಲ್ಲಿ ಸಸಿಯೊಂದನ್ನು ನೆಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.