ADVERTISEMENT

2026ರ ಚುನಾವಣೆಯಲ್ಲಿ ಬಿಜೆಪಿ, ಡಿಎಂಕೆ ಜೊತೆ ಮೈತ್ರಿ ಅಲ್ಲಗಳೆದ ದಳಪತಿ ವಿಜಯ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಆಗಸ್ಟ್ 2025, 14:34 IST
Last Updated 21 ಆಗಸ್ಟ್ 2025, 14:34 IST
   

ಮಧುರೈ: 'ಸಿಂಹ ಯಾವಾಗಲೂ ಸಿಂಹವೇ’ಎಂದುಗರ್ಜಿಸಿದ ನಟ ದಳಪತಿ ವಿಜಯ್, 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಥವಾ ಡಿಎಂಕೆ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.

ಗುರುವಾರ ಸಂಜೆ ಮಧುರೈನಲ್ಲಿ ನಡೆದ ಟಿವಿಕೆ ಪಕ್ಷದ ರಾಜ್ಯಮಟ್ಟದ ಎರಡನೇ ಬೃಹತ್ ಸಮಾವೇಶದಲ್ಲಿ ಸಾಗರದಂತೆ ಸೇರಿದ್ದ ಜನ ಸಮೂಹವನ್ನು ಉದ್ದೇಶಿಸಿ ಪಕ್ಷದ ವರಿಷ್ಠ ದಳಪತಿ ವಿಜಯ್ ಮಾತನಾಡಿದರು.

‘ಯಾವುದೇ ಗುಲಾಮಿ ಮೈತ್ರಿಕೂಟಕ್ಕೆ ಸೇರುವ ಅಗತ್ಯವಿಲ್ಲ. ನಮ್ಮ ಮೈತ್ರಿಕೂಟ ಸ್ವಾರ್ಥದ ಮೈತ್ರಿಕೂಟವಾಗಿರುವುದಿಲ್ಲ. ಇದು ಸ್ವಾಭಿಮಾನ ಆಧಾರಿತ ಮೈತ್ರಿಕೂಟವಾಗಿರುತ್ತದೆ’ಎಂದು ವಿಜಯ್ ಘೋಷಿಸಿದ್ದಾರೆ.

ADVERTISEMENT

2026ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಬಿಜೆಪಿಯನ್ನು ಸೈದ್ಧಾಂತಿಕ ಶತ್ರು ಮತ್ತು ಡಿಎಂಕೆಯನ್ನು ಏಕೈಕ ರಾಜಕೀಯ ಶತ್ರು ಎಂದು ವಿಜಯ್ ಘೋಷಿಸಿದರು.

ಪ್ರಧಾನಿ ನರೇಂದ್ರ ಮೋದಿಯವರನ್ನು ನೇರವಾಗಿ ಗುರಿಯಾಗಿಸಿಕೊಂಡು, ತಮಿಳುನಾಡಿನ ಅಗತ್ಯಗಳನ್ನು ಬಿಜೆಪಿ ನಿರ್ಲಕ್ಷಿಸಿದೆ ಎಂದು ವಿಜಯ್ ಆರೋಪಿಸಿದರು.

ನಮಗೆ ಮುಖ್ಯವಾದದ್ದನ್ನು ನೀವು ಮಾಡುತ್ತಿಲ್ಲ. ನೀವು ತುಷ್ಠೀಕರಣಕ್ಕಾಗಿ ಆರ್‌ಎಸ್‌ಎಸ್‌ ಅನ್ನು ಬಳಸಿಕೊಳ್ಳುತ್ತಿದ್ದೀರಿ. 2029ರವರೆಗೆ ನಿಮ್ಮ ಪ್ರಯಾಣ ಸುಗಮವಾಗಿರಬಹುದು ಎಂದು ಭಾವಿಸಿದ್ದೀರಿ. ಆದರೆ, ಕಮಲದ ದಳಗಳ ಮೇಲೆ ನೀರಿನ ಹನಿಗಳು ಅಂಟಿಕೊಳ್ಳುವುದಿಲ್ಲ ಎಂಬುದನ್ನು ನಾನು ನಿಮಗೆ ಸ್ಪಷ್ಟಪಡಿಸುತ್ತೇನೆ ಎನ್ನುವ ಮೂಲಕ ತಮಿಳರು ಬಿಜೆಪಿಗೆ ಅಂಟಿಕೊಳ್ಳುವುದಿಲ್ಲ ಎಂಬುದನ್ನು ಮಾರ್ಮಿಕವಾಗಿ ಹೇಳಿದರು.

ತಮಿಳುನಾಡಿನ ಮೀನುಗಾರರು ಬಂಧಿತರಾಗುತ್ತಿದ್ದಾರೆ. ನಮ್ಮ ಮೀನುಗಾರರಿಗಾಗಿ ಕಚ್ಚತೀವು ದ್ವೀಪವನ್ನು ವಾಪಸ್ ಪಡೆಯಿರಿ. ನಮಗೆ ನೀಟ್ ಬೇಕಿಲ್ಲ. ಹಿಂಪಡೆಯಿರಿ. ನಮಗೆ ಯಾವುದು ಮುಖ್ಯವೋ ಅದನ್ನು ನೀವು ಮಾಡುತ್ತಿಲ್ಲ ಎಂದು ಟೀಕಿಸಿದರು.

ಮೊದಲ ಬಾರಿಗೆ ಎಐಎಡಿಎಂಕೆಯನ್ನು ಟೀಕಿಸಿ, ಪಕ್ಷದ ನಾಯಕತ್ವವನ್ನು ಪ್ರಶ್ನಿಸಿದ ವಿಜಯ್, ಎಂಜಿಆರ್ ಪ್ರಾರಂಭಿಸಿದ ಪಕ್ಷ ಅದನ್ನು ಯಾರು ರಕ್ಷಿಸುತ್ತಿದ್ದಾರೆ? ಪಕ್ಷ ಈಗ ಹೇಗಿದೆ? ನಾನು ಅದನ್ನು ಹೇಳಬೇಕಾಗಿಲ್ಲ ಎಂದಿದ್ದಾರೆ.

ಆಡಳಿತಾರೂಢ ಡಿಎಂಕೆಯನ್ನು ಟೀಕಿಸುತ್ತಾ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರನ್ನು ಗುರಿಯಾಗಿಸಿಕೊಂಡು, ‘ಸ್ಟಾಲಿನ್ ಅಂಕಲ್, ಏನು ಅಂಕಲ್? ನೀವು ಮಹಿಳೆಯರಿಗೆ ₹1,000 ನೀಡಿದರೆ ಸಾಕೇ? ಮಹಿಳೆಯರ ಅಳು ನಿಮಗೆ ಕೇಳಿಸುತ್ತದೆಯೇ? ತುಂಬಾ ತಪ್ಪು ಅಂಕಲ್, ತುಂಬಾ ತಪ್ಪು. ನೀವು ಮಹಿಳೆಯರಿಗೆ ಮೋಸ ಮಾಡುತ್ತಿದ್ದೀರಿ’ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.