ADVERTISEMENT

ಕೋವಿಡ್‌ ಸ್ಥಿತಿ ಪರಿಶೀಲಿಸಲು ಬಿಡುವು ಮಾಡಿಕೊಂಡ ಪ್ರಧಾನಿಗೆ ಧನ್ಯವಾದ –ಚಿದಂಬರಂ

ಪಿಟಿಐ
Published 18 ಏಪ್ರಿಲ್ 2021, 9:52 IST
Last Updated 18 ಏಪ್ರಿಲ್ 2021, 9:52 IST
ಪಿ.ಚಿದಂಬರಂ
ಪಿ.ಚಿದಂಬರಂ   

ನವದೆಹಲಿ: ‘ಪಶ್ಚಿಮ ಬಂಗಾಳವನ್ನು ವಶಕ್ಕೆ ಪಡೆದುಕೊಳ್ಳುವ ಅವಶ್ಯಕ ಕೆಲಸದ ನಡುವೆ ಕೋವಿಡ್‌ ಪರಿಸ್ಥಿತಿಯನ್ನು ಪರಿಶೀಲಿಸಲು ಬಿಡುವು ಮಾಡಿಕೊಂಡ ಪ್ರಧಾನಿ ಮೋದಿಗೆ ಧನ್ಯವಾದಗಳು’ ಎಂದು ಹಿರಿಯ ಕಾಂಗ್ರೆಸ್‌ ಮುಖಂಡ ಪಿ.ಚಿದಂಬರಂ ವ್ಯಂಗ್ಯವಾಡಿದ್ದಾರೆ.

ದೇಶದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಸರ್ಕಾರಿ ಅಧಿಕಾರಿಗಳೊಂದಿಗೆ ಶನಿವಾರ ಸಭೆ ನಡೆಸಿದ್ದರು. ಪ್ರಧಾನಿಯಿಂದ ಕೊನೆಗೂ ಇಂತಹ ಒಂದು ಸಭೆ ನಡೆದಿದಕ್ಕೆ ಚಿದಂಬರಂ ಟ್ವೀಟ್‌ ಮೂಲಕ ಈ ಟೀಕಾಸ್ತ್ರ ಪ್ರಯೋಗಿಸಿದ್ದಾರೆ.

ಪ್ರಧಾನಿ ಮೋದಿ ಅವರು ಮಮತಾ ಬ್ಯಾನರ್ಜಿ ಅವರನ್ನು ‘ದೀದಿ ಓ ದೀದಿ’ ಎಂದು ಕರೆದಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಚಿದಂಬರಂ ಅವರು,‘ ‍ಪ್ರಧಾನಿಯಾದವರು ರಾಜ್ಯದ ಮುಖ್ಯಮಂತ್ರಿಯನ್ನು ಈ ರೀತಿ ಕರೆಯುವುದು ಸರಿಯೇ’ ಎಂದು ಪ್ರಶ್ನಿಸಿದ್ದಾರೆ.

ADVERTISEMENT

‘ಜವಾಹರಲಾಲ್ ನೆಹರೂ, ಮೊರಾರ್ಜಿದೇಸಾಯಿ, ವಾಜಪೇಯಿ ಅವರು ಇಂತಹ ಭಾಷೆಯನ್ನು ಬಳಸಬಹುದೆಂದು ಭಾವಿಸಲು ಸಹ ಸಾಧ್ಯವಿಲ್ಲ’ ಎಂದು ಅವರು ಹೇಳಿದ್ದಾರೆ.

‘ಹೆಚ್ಚಿನ ಆಸ್ಪತ್ರೆಗಳಲ್ಲಿ ‘ಲಸಿಕೆ ಇಲ್ಲ’ ಎಂಬ ಬೋರ್ಡ್‌ಗಳನ್ನು ಹಾಕಲಾಗಿದೆ. ಆದರೂ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ ಅವರು ಲಸಿಕೆ ಪೂರೈಕೆಯಲ್ಲಿ ಕೊರತೆಯಿಲ್ಲ ಎಂದು ಹೇಳುತ್ತಿದ್ದಾರೆ. ನೀವು ಸಚಿವರ ಮಾತನ್ನು ನಂಬಿ. ನಿಜವಾಗಿಯೂ ನಮ್ಮ ದೇಶದಲ್ಲಿ ಲಸಿಕೆ, ಆಮ್ಲಜನಕ, ರೆಮ್‌ಡಿಸಿವಿರ್, ಹಾಸಿಗೆಗಳು, ವೈದ್ಯರು, ನರ್ಸ್‌ಗಳ ಕೊರತೆಯಿಲ್ಲ. ನಮ್ಮಲ್ಲಿ ಕೇವಲ ರೋಗಿಗಳ ಕೊರತೆಯಿದೆ. ದೇಶಕ್ಕೆ ಎದುರಾಗಿರುವ ಈ ಪರಿಸ್ಥಿತಿಗೆ ಕೇಂದ್ರ ಸರ್ಕಾರವೇ ಕಾರಣ’ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.