ADVERTISEMENT

ಕರ್ನಾಟಕ, ಉತ್ತರ ಪ್ರದೇಶದಲ್ಲಿ ಪ್ಲಾಸ್ಟಿಕ್‌ ಪಾರ್ಕ್: ಕೇಂದ್ರ ಸರ್ಕಾರದ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2021, 20:21 IST
Last Updated 9 ಮಾರ್ಚ್ 2021, 20:21 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಕರ್ನಾಟಕ ಮತ್ತು ಉತ್ತರ ಪ್ರದೇಶಗಳಲ್ಲಿ ತಲಾ ಒಂದು ಪ್ಲಾಸ್ಟಿಕ್ ಪಾರ್ಕ್‌ ಸ್ಥಾಪನೆಗೆ ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ.

ಲೋಕಸಭೆಯಲ್ಲಿ ಮಂಗಳವಾರ ಈ ಸಂಬಂಧ ಲಿಖಿತ ಉತ್ತರ ನೀಡಿರುವ ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದಗೌಡ, ಪ್ಲಾಸ್ಟಿಕ್ ಪಾರ್ಕ್‌ಗಾಗಿ ಗುಜರಾತ್, ಆಂಧ್ರಪ್ರದೇಶ, ಕರ್ನಾಟಕ, ಉತ್ತರ ಪ್ರದೇಶ, ಬಿಹಾರ, ಹಿಮಾಚಲ ಪ್ರದೇಶ ಮತ್ತು ಗೋವಾ ಸರ್ಕಾರಗಳಿಂದ ಪ್ರಸ್ತಾವನೆ ಸಲ್ಲಿಕೆಯಾಗಿದ್ದವು ಎಂದು ತಿಳಿಸಿದ್ದಾರೆ.

ಸ್ಥಳ, ಯೋಜನೆಯ ಅಂದಾಜು ವೆಚ್ಚ ಮತ್ತಿತರ ಅಂಶಗಳಿರುವ ಪ್ರಾಥಮಿಕ ಪ್ರಸ್ತಾವನೆಗಳನ್ನು ಕರ್ನಾಟಕ, ಉತ್ತರ ಪ್ರದೇಶ, ಬಿಹಾರ ಮತ್ತು ಹಿಮಾಚಲ ಪ್ರದೇಶ ಸರ್ಕಾರಗಳು ನಿಗದಿತ ಅವಧಿಯಲ್ಲಿ ಸಲ್ಲಿಸಿವೆ. ಈ ಪೈಕಿ ಕರ್ನಾಟಕ ಮತ್ತು ಉತ್ತರ ಪ್ರದೇಶ ಸರ್ಕಾರಗಳ ಪ್ರಸ್ತಾವನೆಗೆ ಸಮ್ಮತಿ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

ADVERTISEMENT

ತಜ್ಞರ ಸಮಿತಿಯು ತಾಂತ್ರಿಕ ಪರಿಶೀಲನೆ ನಡೆಸಿ ಸಲ್ಲಿಸಿದ ವರದಿಯನ್ವಯ ಕರ್ನಾಟಕದ ಮಂಗಳೂರು ಬಳಿಯ ಗಂಜಿಮಠ ಹಾಗೂ ಉತ್ತರ ಪ್ರದೇಶದ ಗೋರಖ್‌ಪುರ ಬಳಿ ಪ್ಲಾಸ್ಟಿಕ್‌ ಪಾರ್ಕ್‌ ಸ್ಥಾಪಿಸಲಾಗುವುದು. ಈ ಪಾರ್ಕ್‌ನ ಎಲ್ಲ ಘಟಕಗಳು ಶಾಸನಬದ್ಧ ಮಾನದಂಡ ಅನುಸರಿಸಬೇಕಲ್ಲದೆ, ಅಗತ್ಯ ಪರಿಸರ ಅನುಮತಿ ಹೊಂದಿರಬೇಕು ಎಂದು ಅವರು ತಿಳಿಸಿದ್ದಾರೆ.

ಈ ಘಟಕಗಳ ಸ್ಥಾಪನೆಯಿಂದ ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುವ ಸಾಧ್ಯತೆ ಇದ್ದರೆ ಸರ್ಕಾರವು ಅಗತ್ಯ ಸಮೀಕ್ಷೆ ಕೈಗೊಳ್ಳಲಿದೆ ಎಂದೂ ಅವರು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.