ADVERTISEMENT

ಕೋವಿಡ್–19 ಸವಾಲು ಮಾತ್ರವಲ್ಲ, ಅವಕಾಶವೂ ಹೌದು: ರಾಹುಲ್ ಗಾಂಧಿ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2020, 5:09 IST
Last Updated 18 ಏಪ್ರಿಲ್ 2020, 5:09 IST
   

ನವದಹಲಿ: ಜಗತ್ತಿನಾದ್ಯಂತ ಸುಮಾರು 1.5 ಲಕ್ಷಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿರುವ ಕೋವಿಡ್‌–19 ಸೋಂಕು ದೊಡ್ಡ ಸವಾಲು ಮಾತ್ರವಲ್ಲ. ಅದೊಂದು ಅವಕಾಶವೂ ಹೌದು ಎಂದು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.

ಈ ಸಂಬಂಧ ಟ್ವೀಟ್‌ ಮಾಡಿರುವ ಅವರು, ‘ಜಾಗತಿಕ ಪಿಡುಗಾದ ಕೋವಿಡ್–19 ದೊಡ್ಡ ಸವಾಲು. ಆದರೆ, ಅದೊಂದು ಅವಕಾಶವೂ ಆಗಿದೆ. ಬಿಕ್ಕಟ್ಟಿನ ಸಂದರ್ಭಗಳಲ್ಲಿ ಹೊಸರೀತಿಯ ಪರಿಹಾರಗಳನ್ನು ಕಂಡುಕೊಳ್ಳಲು ನಮ್ಮಲ್ಲಿರುವ ಭಾರಿ ಸಂಖ್ಯೆಯ ವಿಜ್ಞಾನಿಗಳು, ಎಂಜಿನಿಯರ್‌ಗಳು, ಅಂಕಿ–ಅಂಶ ತ್ರಜ್ಞರನ್ನು ಒಟ್ಟುಗೂಡಿಸಬೇಕಿದೆ’ ಎಂದು ಬರೆದುಕೊಂಡಿದ್ದಾರೆ.

ಕೋವಿಡ್‌–19 ಅಪಾಯದ ಬಗ್ಗೆ ಹಾಗೂ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ರಾಹುಲ್‌ ಈ ಹಿಂದೆ ಸರ್ಕಾರಕ್ಕೆ ಸಲಹೆ ನೀಡಿದ್ದರು. ಮಾತ್ರವಲ್ಲದೆ ಟೆಸ್ಟಿಂಗ್‌ ಕಿಟ್‌ಗಳನ್ನು ಸಕಾಲದಲ್ಲಿ ಖರೀದಿಸಲು ಸರ್ಕಾರ ಗಮನಕೊಡಲಿಲ್ಲ ಎಂದು ಟೀಕಿಸಿದ್ದರು.

ADVERTISEMENT

ಸೋಂಕು ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಹಾಗಾಗಿ ದೇಶದಾದ್ಯಂತ ಜಾರಿಯಲ್ಲಿರುವ ಲಾಕ್‌ಡೌನ್‌ ಆದೇಶವನ್ನು ಮೇ 3ರ ವರೆಗೆ ವಿಸ್ತರಿಸಲಾಗಿದೆ.

ಸದ್ಯ ದೇಶದಾದ್ಯಂತ 11 ಸಾವಿರಕ್ಕೂ ಹೆಚ್ಚು ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. 480 ಮಂದಿ ಮೃತಪಟ್ಟಿದ್ದಾರೆ. 1,900ಕ್ಕೂ ಹೆಚ್ಚು ಜನರು ಗುಣಮುಖರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.