ADVERTISEMENT

ಕಾಂಗ್ರೆಸ್‌‌ ಪಕ್ಷಕ್ಕೆ ಇ.ಡಿಯಿಂದ ಕಿರುಕುಳ: ಖರ್ಗೆ ಆರೋಪ

​ಪ್ರಜಾವಾಣಿ ವಾರ್ತೆ
Published 27 ಜುಲೈ 2022, 5:30 IST
Last Updated 27 ಜುಲೈ 2022, 5:30 IST
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ    

ನವೆದಹಲಿ: ಕಾಂಗ್ರೆಸ್ ಪಕ್ಷಕ್ಕೆ ಜಾರಿ ನಿರ್ದೇಶನಾಲಯವು (ಇ.ಡಿ) ಕಿರುಕುಳ ನೀಡುತ್ತಿದೆ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.

ಈ ಕುರಿತು ಮಲ್ಲಿಕಾರ್ಜುನ ಖರ್ಗೆ ಹೇಳಿಕೆಯನ್ನು ಸುದ್ದಿಸಂಸ್ಥೆ 'ಎಎನ್‌ಐ' ಟ್ವೀಟ್ ಮಾಡಿದೆ.

ನಮ್ಮ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಆರೋಗ್ಯ ಸ್ಥಿತಿ ಉತ್ತಮವಿಲ್ಲ. ಹಾಗಿದ್ದರೂ ಇ.ಡಿ ಕಚೇರಿಗೆ ಪದೇ ಪದೇ ಕರೆದು ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿದ್ದಾರೆ.

ಇವೆಲ್ಲದರಿಂದ ಕಾಂಗ್ರೆಸ್ ಕಾರ್ಯಕರ್ತರ ಆತ್ಮಸ್ಥೈರ್ಯ ಕುಗ್ಗಿಸುವ ಪ್ರಯತ್ನ ಮಾಡಲಾಗುತ್ತಿದೆ. ಆದರೆ ನಾವು ಭಯಪಡುವುದಿಲ್ಲ ಎಂದು ಹೇಳಿದ್ದಾರೆ.

ನ್ಯಾಷನಲ್ ಹೆರಾಲ್ಡ್ ಪ್ರಕರಣ ಕುರಿತಂತೆ ಕಾಂಗ್ರೆಸ್ ಅಧ್ಯಕ್ಷ ಸೋನಿಯಾ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯವು (ಇ.ಡಿ.) ಮಂಗಳವಾರವೂ ವಿಚಾರಣೆಗೆ ಒಳಪಡಿಸಿತ್ತು. ಆರು ತಾಸು ವಿಚಾರಣೆ ನಡೆಸಿದ ಅಧಿಕಾರಿಗಳು ಬುಧವಾರ ಮತ್ತೆ ವಿಚಾರಣೆಗೆ ಬರುವಂತೆ ಸೂಚಿಸಿದ್ದರು.

ಈ ನಡುವೆ ರಾಜ್ಯಸಭೆಯ ಕಲಾಪಕ್ಕೆ ಅಡ್ಡಿಪಡಿಸಿದ ಕಾರಣಕ್ಕೆ ವಿರೋಧ ಪಕ್ಷಗಳ ಒಟ್ಟು 19 ಸಂಸದರನ್ನು ಮಂಗಳವಾರ ರಾಜ್ಯಸಭೆಯಿಂದ ಒಂದು ವಾರದ ಅವಧಿಗೆ ಅಮಾನತುಗೊಳಿಸಲಾಗಿದೆ. ಈ ಕುರಿತಂತೆ ಸ್ಪೀಕರ್‌ಗೆ ಮೇಲ್ಮನವಿ ಸಲ್ಲಿಸುವುದಾಗಿ ಖರ್ಗೆ ತಿಳಿಸಿದ್ದಾರೆ.

ನಾವು ಕಳೆದ ಏಳು ದಿನಗಳಿಂದ ಸಂಸತ್ತಿನಲ್ಲಿ ಹಣದುಬ್ಬರದ ವಿಷಯವನ್ನು ಪ್ರಸ್ತಾಪಿಸುತ್ತಿದ್ದೇವೆ. ಆದರೆ ಈ ಬಗ್ಗೆ ಚರ್ಚಿಸಲು ಸರ್ಕಾರ ಸಿದ್ಧವಿಲ್ಲ. ಬೆಲೆ ಏರಿಕೆ ವಿರುದ್ಧ ಧ್ವನಿ ಎತ್ತಿರುವ ಸದಸ್ಯರ ಅಮಾನತು ರದ್ದುಗೊಳಿಸುವಂತೆ ಸ್ಪೀಕರ್‌ಗೆ ಮನವಿ ಸಲ್ಲಿಸುತ್ತೇವೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.