ADVERTISEMENT

ವಲಸೆ ಕಾರ್ಮಿಕರಿಗಾಗಿ ವ್ಯವಸ್ಥೆ | ತೆಲಂಗಾಣದಿಂದ ಜಾರ್ಖಂಡ್‌ನತ್ತ ಹೊರಟ ಮೊದಲ ರೈಲು

ಭಾರತೀಯ ರೈಲ್ವೆ

​ಪ್ರಜಾವಾಣಿ ವಾರ್ತೆ
Published 1 ಮೇ 2020, 12:16 IST
Last Updated 1 ಮೇ 2020, 12:16 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ಲಾಕ್‌ಡೌನ್‌ನಿಂದಾಗಿ ವಿವಿಧ ರಾಜ್ಯಗಳಲ್ಲಿ ಸಿಕ್ಕಿ ಹಾಕಿಕೊಂಡಿರುವ ವಲಸೆ ಕಾರ್ಮಿಕರನ್ನು ಮರಳಿ ಊರಿಗೆ ಕಳುಹಿಸಲು ಭಾರತೀಯ ರೈಲ್ವೆ ವಿಶೇಷ ರೈಲಿನ ವ್ಯವಸ್ಥೆ ಮಾಡಿದೆ.

ತೆಲಂಗಾಣದಲ್ಲಿ ಸಿಲುಕಿ ಹಾಕಿಕೊಂಡಿದ್ದ ಜಾರ್ಖಂಡ್‌ನ 1200 ವಲಸೆ ಕಾರ್ಮಿಕರಿಗಾಗಿ ಒಂದು ವಿಶೇಷ ರೈಲನ್ನು ತೆಲಂಗಾಣದ ಲಿಂಗಂಪಲ್ಲಿಯಿಂದ ಶುಕ್ರವಾರ ಬೆಳಿಗ್ಗೆ 5.30ಕ್ಕೆ ಬಿಡಲಾಗಿದೆ. ಪ್ರತಿ ಬೋಗಿಯಲ್ಲಿ 54 ಪ್ರಯಾಣಿಕರಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗಿರುವ ಈ ರೈಲು ರಾತ್ರಿ 11ಕ್ಕೆ ಜಾರ್ಖಂಡ್‌ನ ಹತಿಯಾ ತಲುಪಲಿದೆ.

ನಿಲುಗಡೆ ರಹಿತವಾದ ಈ ರೈಲು ಮಾರ್ಗ ಮಧ್ಯೆ ನೀರು ಮತ್ತು ಆಹಾರ ಭರಿಸಿಕೊಳ್ಳಲು ಹಾಗೂ ಸಿಬ್ಬಂದಿ ಬದಲಾವಣೆಗಾಗಿ ಕೇವಲ ಒಂದು ಕಡೆ ಮಾತ್ರ ನಿಲ್ಲಲಿದೆ. ಎಲ್ಲ ಪ್ರಯಾಣಿಕರಗೂ ಮಾಸ್ಕ್‌ (ಮುಖಗವಸು) ಮತ್ತು ಗ್ಲೌಸ್‌ (ಕೈಗವಸು) ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ರೈಲ್ವೆ ಸುರಕ್ಷಾ ದಳದ (ಆರ್‌ಪಿಎಫ್‌) ಸಿಬ್ಬಂದಿಯನ್ನು ಪ್ರತಿ ಬೋಗಿಗೂ ನಿಯೋಜಿಸಲಾಗಿದೆ.

ADVERTISEMENT

ತೆಲಂಗಾಣ ಸರ್ಕಾರದ ಮನವಿ ಹಾಗೂ ರೈಲ್ವೆ ಸಚಿವಾಲಯದ ನಿರ್ದೇಶನದ ಮೇರೆಗೆ ವಿಶೇಷ ರೈಲನ್ನು ಬಿಡಲಾಗಿದೆ. ನಿಲ್ದಾಣದಲ್ಲೇ ಪ್ರಯಾಣಿಕರ ತಪಾಸಣೆ ಹಾಗೂ ಪ್ರಯಾಣದ ವೇಳೆ ಅಂತರ ಕಾಯ್ದುಕೊಳ್ಳುವಿಕೆಗೆ ಆದ್ಯತೆ ನೀಡಲಾಗಿದೆ. ತೆಲಂಗಾಣ ಸರ್ಕಾರ ಗೃಹ ಹಾಗೂ ಆರೋಗ್ಯ ಸಚಿವಾಲಯಗಳ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕ ರೈಲು ಸಂಚಾರ ಆರಂಭವಾಗಿದೆ ಎಂದು ಭಾರತೀಯ ರೈಲ್ವೆಯ ವಕ್ತಾರ ಆರ್‌.ಡಿ. ಬಾಜಪೇಯಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಇದು ಆಯಾ ರಾಜ್ಯಗಳ ಮನವಿಯ ಮೇರೆಗೆ ವಲಸೆ ಕಾರ್ಮಿಕರನ್ನು ಸುರಕ್ಷಿತವಾಗಿ ತಲುಪಿಸಲು ಆರಂಭಿಸಲಾದ ಮೊದಲ ವಿಶೇಷ ರೈಲಾಗಿದೆ. ಮತ್ತೆ ಆಯಾ ರಾಜ್ಯಗಳು ಮನವಿ ಮಾಡಿಕೊಂಡಲ್ಲಿಇಂತಹ ರೈಲುಗಳ ಸೌಲಭ್ಯವನ್ನು ಕಲ್ಪಿಸಲು ಇಲಾಖೆ ಕ್ರಮ ಕೈಗೊಳ್ಳಬಹುದು ಎಂದು ಅವರು ಹೇಳಿದ್ದಾರೆ.

ಈ ಸಂಬಂಧ ರೈಲ್ವೆ ಸಚಿವ ಪೀಯೂಷ್‌ ಗೋಯೆಲ್‌ ಹಾಗೂ ಕೇಂದ್ರದ ಆರೋಗ್ಯ ಸಚಿವ ಹರ್ಷವರ್ಧನ್‌ ಅವರು ಪ್ರಧಾನಿ ಕಚೇರಿಯ ಅಧಿಕಾರಿಗಳನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಚರ್ಚಿಸಿದ ಬಳಿಕ ಈ ಸೌಲಭ್ಯ ಕಲ್ಪಿಸಲಾಗಿದೆ ಎಂದು ಇಲಾಖೆಯ ಮೂಲಗಳು ಹೇಳಿವೆ.

ವಿವಿಧ ರಾಜ್ಯಗಳಲ್ಲಿ ಸಿಲುಕಿರುವ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು, ಪ್ರವಾಸಿಗರು ಮತ್ತು ಯಾತ್ರಾರ್ಥಿಗಳನ್ನು ಸುರಕ್ಷಿತವಾಗಿ ತಲುಪಿಸಲು ವಿಶೇಷ ರೈಲುಗಳನ್ನು ನಿಯೋಜಿಸುವಂತೆ ಆಯಾ ರಾಜ್ಯ ಸರ್ಕಾರಗಳು ಕೇಂದ್ರದ ಮೇಲೆ ಒತ್ತಡ ಹೇರುತ್ತಿವೆ. ಬಿಹಾರ, ರಾಜಸ್ಥಾನ, ಜಾರ್ಖಂಡ್‌ ಮತ್ತುಮಹಾರಾಷ್ಟ್ರ ಸರ್ಕಾರಗಳು ಈ ರೀತಿ ಮನವಿ ಮಾಡಿಕೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.