ADVERTISEMENT

ಈ ಬಾರಿ ವಿಶಿಷ್ಟ ಕುಂಭಮೇಳ: 144 ವರ್ಷಗಳ ಬಳಿಕ ಒಂದೇ ರೇಖೆಯಲ್ಲಿ ಆಕಾಶಕಾಯಗಳು

​ಪ್ರಜಾವಾಣಿ ವಾರ್ತೆ
ಪಿಟಿಐ
Published 13 ಜನವರಿ 2025, 0:30 IST
Last Updated 13 ಜನವರಿ 2025, 0:30 IST
<div class="paragraphs"><p>‘ಶ್ರೀ ಪಂಚಯತಿ ಅಖಾಡಾ ಬಡಾ ಉದಾಸೀನ್‌’ ಗುಂಪಿನ ಸಾಧುಗಳು ಭಾನುವಾರ ಮೆರವಣಿಗೆಯ ಮೂಲಕ&nbsp;ಮಹಾಕುಂಭಮೇಳ ನಡೆಯುವ ಸಂಗಮದತ್ತ ಸಾಗಿದರು&nbsp; </p></div>

‘ಶ್ರೀ ಪಂಚಯತಿ ಅಖಾಡಾ ಬಡಾ ಉದಾಸೀನ್‌’ ಗುಂಪಿನ ಸಾಧುಗಳು ಭಾನುವಾರ ಮೆರವಣಿಗೆಯ ಮೂಲಕ ಮಹಾಕುಂಭಮೇಳ ನಡೆಯುವ ಸಂಗಮದತ್ತ ಸಾಗಿದರು 

   

ಪಿಟಿಐ ಚಿತ್ರ

ಲಖನೌ: ಪ್ರಯಾಗ್‌ರಾಜ್‌ನ ಗಂಗಾ ನದಿ ತಟದಲ್ಲಿ ಜಗತ್ತಿನ ಅತ್ಯಂತ ದೊಡ್ಡ ಧಾರ್ಮಿಕ ಉತ್ಸವ ಮಹಾಕುಂಭ ಮೇಳ ಸೋಮವಾರದಿಂದ (ಜ.13) ಆರಂಭವಾಗಲಿದೆ.

ADVERTISEMENT

ಫೆ.26ರವರೆಗೆ 45 ದಿನ ನಡೆಯುವ ಮೇಳದಲ್ಲಿ ಸಾಧು–ಸಂತರು ಸೇರಿ ದೇಶ–ವಿದೇಶಗಳಿಂದ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮದ ಆಸುಪಾಸು 10 ಸಾವಿರ ಎಕರೆಯಷ್ಟು ವಿಸ್ತೀರ್ಣದಲ್ಲಿ ಸಿದ್ಧತೆ ಕೈಗೊಳ್ಳಲಾಗಿದ್ದು, 25 ವಲಯಗಳನ್ನಾಗಿ ವಿಂಗಡಿಸಲಾಗಿದೆ.

₹7,000 ಕೋಟಿ: ಮೇಳಕ್ಕೆ ಉತ್ತರ ಪ್ರದೇಶ ಸರ್ಕಾರ ಮೀಸಲಿಟ್ಟ ಮೊತ್ತ | 45 ಕೋಟಿ: ಭಾಗವಹಿಸಲಿರುವ ಭಕ್ತರ ಅಂದಾಜು ಸಂಖ್ಯೆ

144 ವರ್ಷಗಳ ಬಳಿಕ ಆಕಾಶಕಾಯಗಳು (ಗ್ರಹ, ನಕ್ಷತ್ರಗಳು) ಒಂದೇ ರೇಖೆಯಲ್ಲಿ ಬರುತ್ತಿರುವುದರಿಂದ ಈ ಬಾರಿಯ ಮಹಾಕುಂಭ ಮೇಳ ಹೆಚ್ಚು ವಿಶಿಷ್ಟವಾದುದು ಎಂದು ಜ್ಯೋತಿಷಿಗಳು ಅಭಿಪ್ರಾಯಪಟ್ಟಿದ್ದಾರೆ. 

ಪುಷ್ಯ ಪೂರ್ಣಿಮಾ ದಿನವಾದ ಸೋಮವಾರ ಸಂಗಮದಲ್ಲಿ (ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳು ಕೂಡುವ ಸ್ಥಳ) ಮೊದಲ ‘ಸ್ನಾನ’ ಮಾಡುವುದರೊಂದಿಗೆ ಮಹಾಕುಂಭಕ್ಕೆ ಚಾಲನೆ ಸಿಗಲಿದೆ. 

ಮೊದಲ ‘ಶಾಹೀ ಸ್ನಾನ’ ಮಂಗಳವಾರ (ಜ.14) ಮಕರ ಸಂಕ್ರಾಂತಿಯಂದು ನಡೆಯಲಿದೆ. ಆ ದಿನ ಸಂಗಮದ ನೀರಿನಲ್ಲಿ ಏಳು ಕೋಟಿಯಷ್ಟು ಜನರು ಪವಿತ್ರ ಸ್ನಾನ ಮಾಡುವ ನಿರೀಕ್ಷೆ ಇದೆ. ಇದೇ 29ಕ್ಕೆ ಮೌನಿ ಅಮಾವಾಸ್ಯೆ ಮತ್ತು ಫೆ.3ರಂದು ವಸಂತ ಪಂಚಮಿ ದಿನಗಳಂದೂ ‘ಶಾಹೀ ಸ್ನಾನ’ ನೆರವೇರಲಿದೆ. ಫೆ.26ರಂದು ಮಹಾಶಿವರಾತ್ರಿಯಂದು ಉತ್ಸವಕ್ಕೆ ತೆರೆ ಬೀಳಲಿದೆ.

ಗಂಗಾ ನದಿಯ ದಂಡೆಯಲ್ಲಿರುವ ಬಿಡಾರ ಗಳನ್ನೊಳಗೊಂಡ ತಾತ್ಕಾಲಿಕ ನಗರವು  ನಾಗಸಾಧುಗಳು, ಸಂತರು, ಮಠಾಧೀಶರು, ಬೈರಾಗಿಗಳು, ಕಲ್ಪವಾಸಿಗಳು (ಒಂದು ತಿಂಗಳು ಕುಂಭದಲ್ಲಿ ಭಾಗವಹಿಸಿ, ಅತ್ಯಂತ ಶಿಸ್ತಿನ ಧಾರ್ಮಿಕ ಆಚರಣೆಗಳನ್ನು ಅನುಸ ರಿಸುವವರು) ಮತ್ತು ಭಕ್ತರಿಂದ ಬಹುತೇಕ ಭರ್ತಿಯಾಗಿದೆ.

ಕುಂಭಮೇಳದಲ್ಲಿ ಭಾಗವಹಿಸುವುದಕ್ಕಾಗಿ ದೇಶದ ವಿವಿಧ ಭಾಗಗಳಿಂದ ಜನರು ಭಾರಿ ಸಂಖ್ಯೆಯಲ್ಲಿ ಪ್ರಯಾಗ್‌ರಾಜ್‌ನತ್ತ ಬರುತ್ತಿದ್ದು, ಸಂಗಮದಲ್ಲಿ ಚಪ್ಪಟೆ ತಳದ ದೋಣಿಗಳನ್ನು ಬಳಸಿ ನಿರ್ಮಿಸಲಾಗಿರುವ ತಾತ್ಕಾಲಿಕ ಸೇತುವೆಗಳು, ರಸ್ತೆಗಳು ಭಕ್ತರಿಂದ ತುಂಬಿತುಳುಕುತ್ತಿವೆ. 

ಸಿದ್ಧತೆ ಪೂರ್ಣ: 

ಮೇಳವು ಸುಗಮವಾಗಿ ನಡೆಯುವುದಕ್ಕಾಗಿ ರಾಜ್ಯ ಸರ್ಕಾರ, ಸ್ಥಳೀಯ ಆಡಳಿತವು ಪ್ರಯಾಗ್‌ರಾಜ್‌ ಮತ್ತು ಸುತ್ತಮುತ್ತಲಿನ ಸ್ಥಳಗಳಲ್ಲಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ.  ಮಹಾಕುಂಭ ಮೇಳಕ್ಕಾಗಿ ರಾಜ್ಯ ಸರ್ಕಾರ ₹7,000 ಕೋಟಿ ವೆಚ್ಚ ಮಾಡುತ್ತಿದೆ ಎಂದು ಉತ್ತರ ಪ್ರದೇಶದ ಮುಖ್ಯ ಕಾರ್ಯದರ್ಶಿ ಮನೋಜ್‌ ಕುಮಾರ್‌ ಸಿಂಗ್‌ ಹೇಳಿದ್ದಾರೆ. 

ಮೇಳ ನಡೆಯುವ ಸ್ಥಳದಲ್ಲಿನ ಪ್ರತಿ ವಲಯದಲ್ಲಿ 20 ಹಾಸಿಗೆಗಳ ಆಸ್ಪತ್ರೆಗಳನ್ನು ಸ್ಥಾಪಿಸಲಾಗಿದೆ. ಇದರ ಜೊತೆಗೆ ಭಕ್ತರಿಗೆ ಕ್ಷಿಪ್ರವಾಗಿ ಆರೋಗ್ಯ ಸೌಲಭ್ಯ ಕಲ್ಪಿಸುವುದಕ್ಕಾಗಿ ಇಡೀ ಪ್ರದೇಶವನ್ನು ಕೇಂದ್ರೀಕರಿಸಿ ದೊಡ್ಡ ಆಸ್ಪತ್ರೆಯ ವ್ಯವಸ್ಥೆ ಮಾಡಲಾಗಿದೆ. ಭಕ್ತರು ಸ್ನಾನ ಮಾಡುವ ಸಂದರ್ಭದಲ್ಲಿ ತುರ್ತು ಪರಿಸ್ಥಿತಿ ಎದುರಾದರೆ ಅದನ್ನು ನಿಭಾಯಿಸುವುದಕ್ಕಾಗಿ 50 ಸ್ನಾನ ಘಟ್ಟಗಳಲ್ಲಿ 300 ಮುಳುಗು ತಜ್ಞರನ್ನು ಮತ್ತು ನಾಲ್ಕು ಜಲ ಆಂಬುಲೆನ್ಸ್‌ಗಳನ್ನು ನಿಯೋಜಿಸಲಾಗಿದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.