ADVERTISEMENT

Ahmedabad Plane Crash: ವಿಮಾನ ದುರಂತದಲ್ಲಿ ಪಾರಾದ ಬ್ರಿಟನ್ ಪ್ರಜೆ ವಿಶ್ವಾಸ್

​ಪ್ರಜಾವಾಣಿ ವಾರ್ತೆ
Published 12 ಜೂನ್ 2025, 15:50 IST
Last Updated 12 ಜೂನ್ 2025, 15:50 IST
   

ಬೆಂಗಳೂರು: ಬ್ರಿಟನ್ ಪ್ರಜೆ ವಿಶ್ವಾಸ್ ಎಂಬವರು ವಿಮಾನ ದುರಂತದ ನಂತರವೂ ಬದುಕುಳಿದಿದ್ದಾರೆ. 

ಅಹಮದಾಬಾದ್‌ನ ಅಸಾವರದಲ್ಲಿನ ಸಿವಿಲ್ ಆಸ್ಪತ್ರೆಯಲ್ಲಿ ತಮ್ಮವರಿಗಾಗಿ ಜನ ಹುಡುಕುತ್ತಿದ್ದರು. ಆಸ್ಪತ್ರೆಯ ಜನರಲ್ ವಾರ್ಡ್‌ನ ಹಾಸಿಗೆಯ ಮೇಲೆ ಮಲಗಿದ್ದ ವಿಶ್ವಾಸ್ ತಾವು ದುರಂತದಲ್ಲಿ ಪಾರಾಗಿರುವುದಾಗಿ ಹೇಳಿದರು ಎಂದು ‘ಹಿಂದೂಸ್ತಾನ್ ಟೈಮ್ಸ್’ ವರದಿ ಮಾಡಿದೆ. 

ಕೆಲವು ದಿನಗಳ ಹಿಂದೆ ವಿಶ್ವಾಸ್ ಭಾರತಕ್ಕೆ ಪ್ರವಾಸಕ್ಕೆಂದು ಬಂದಿದ್ದರು. ಸಹೋದರನ ಜತೆ ದಿಯು ದ್ವೀಪಕ್ಕೆ ಪ್ರವಾಸಕ್ಕೆ ಹೋಗಿಬಂದ ನಂತರ ಲಂಡನ್‌ಗೆ ಮರಳುತ್ತಿದ್ದುದಾಗಿ ಅವರು ತಿಳಿಸಿದ್ದಾರೆ.

ADVERTISEMENT

‘11ಎ’ ಸೀಟಿನಲ್ಲಿ ಪ್ರಯಾಣಿಸುತ್ತಿದ್ದ ಅವರಲ್ಲಿ ಬೋರ್ಡಿಂಗ್ ಪಾಸ್‌ ಕೂಡ ಜತನವಾಗಿದೆ ಎಂದೂ ವರದಿ ಉಲ್ಲೇಖಿಸಿದೆ.

ವಿಶ್ವಾಸ್ ಅವರ ಜತೆ ಅವರ ಸಹೋದರ ಅಜಯ್ ಕುಮಾರ್ ರಮೇಶ್ (45) ಕೂಡ ಲಂಡನ್‌ಗೆ ಪ್ರಯಾಣಿಸುತ್ತಿದ್ದರು. ‘ಸಹೋದರನು ಬೇರೆ ಸೀಟಿನಲ್ಲಿ ಪ್ರಯಾಣಿಸುತ್ತಿದ್ದ. ಅವನು ಎಲ್ಲಿದ್ದಾನೋ ಹುಡುಕಬೇಕಿದೆ’ ಎಂದೂ ವಿಶ್ವಾಸ್ ಹೇಳಿದ್ದಾರೆ. 

‘ವಿಮಾನ ಟೇಕಾಫ್ ಆಗಿ ಸುಮಾರು ಮೂವತ್ತು ಸೆಕೆಂಡ್‌ಗಳಲ್ಲೇ ನೆಲಕ್ಕೆ ಅಪ್ಪಳಿಸಿತು. ಆ ಸಂದರ್ಭದಲ್ಲಿ ನಾನು ತುರ್ತು ನಿರ್ಗಮನ ದ್ವಾರದಿಂದ ಹೊರಗೆ ಜಿಗಿದೆ. ಏಳುವಷ್ಟರಲ್ಲಿ ಸುತ್ತಲೂ ವಿಮಾನದ ಅವಶೇಷಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಶವಗಳು ಕೂಡ ಕಂಡವು. ಭಯಗೊಂಡು, ಎದ್ದು ಓಡಲಾರಂಭಿಸಿದೆ. ಆಗ ಕೆಲವರು ನನ್ನನ್ನು ಹಿಡಿದುಕೊಂಡು, ಆಂಬುಲೆನ್ಸ್‌ ಒಳಗೆ ಕರೆದೊಯ್ದರು’ ಎಂದು ವಿಶ್ವಾಸ್ ಮಾಹಿತಿ ನೀಡಿದ್ದಾರೆ. 

ವಿಮಾನವು ನೆಲಕ್ಕೆ ಅಪ್ಪಳಿಸಿದಾಗ ಉಂಟಾದ ಪರಿಣಾಮದಿಂದಾಗಿ ಅವರ ಮುಖದ ಮೇಲೆ ಗಾಯಗಳಾಗಿವೆ. ಎದೆ, ಕಣ್ಣು ಹಾಗೂ ಪಾದಗಳಿಗೂ ಪೆಟ್ಟಾಗಿದೆ ಎಂದು ‘ಹಿಂದೂಸ್ತಾನ್ ಟೈಮ್ಸ್’ ವರದಿ ಮಾಡಿದೆ. 

ಇಪ್ಪತ್ತು ವರ್ಷಗಳಿಂದ ವಿಶ್ವಾಸ್ ಅವರು ಬ್ರಿಟನ್‌ನಲ್ಲಿ ನೆಲಸಿದ್ದು, ಅವರ ಪತ್ನಿ ಹಾಗೂ ಮಗು ಅಲ್ಲಿಯೇ ಇದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.