ADVERTISEMENT

ಔರಂಗಜೇಬ್‌ ಸಮಾಧಿ ಭೇಟಿಗೆ 5 ದಿನ ನಿಷೇಧ: ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಮೇ 2022, 6:40 IST
Last Updated 19 ಮೇ 2022, 6:40 IST
ಅಜಿತ್ ಪವಾರ್
ಅಜಿತ್ ಪವಾರ್   

ಮುಂಬೈ: ‘ಮೊಘಲ್ ದೊರೆ ಔರಂಗಜೇಬ್ ಸಮಾಧಿ ಭೇಟಿಯನ್ನು 5 ದಿನಗಳ ಕಾಲ ನಿಷೇಧಿಸಲಾಗಿದೆ’ ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ’ ಎಂದು ಹೇಳಿದ್ದಾರೆ.

ಔರಂಗಜೇಬ್‌ಸಮಾಧಿಯ ಅವಶ್ಯಕತೆ ಬಗ್ಗೆ ಪ್ರಶ್ನಿಸಿರುವ ಮಹಾರಾಷ್ಟ್ರ ನವನಿರ್ಮಾಣ ಸೇನಾ (ಎಂಎನ್ಎಸ್‌) ನಾಯಕರು, ಸಮಾಧಿಯನ್ನು ನೆಲಸಮ ಮಾಡಬೇಕು ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಭದ್ರತೆಯನ್ನು ಹೆಚ್ಚಿಸಲಾಗಿದೆ.

ADVERTISEMENT

ಔರಂಗಜೇಬ್‌ಸಮಾಧಿಯಿರುವ ಸ್ಥಳದಲ್ಲಿ ಭದ್ರತೆ ಹೆಚ್ಚಳ ಮಾಡಿರುವುದಾಗಿ ಬುಧವಾರ ಎಎಸ್‌ಐ ಅಧಿಕಾರಿಯೊಬ್ಬರು ಹೇಳಿದ್ದರು.

ಸಮಾಧಿ ಸ್ಥಳಕ್ಕೆ ಇತ್ತೀಚೆಗೆ ಎಐಎಂಐಎಂ ಮುಖಂಡ ಅಕ್ಬರುದ್ದೀನ್‌ ಒವೈಸಿ ಭೇಟಿ ನೀಡಿದ್ದನ್ನು ಶಿವಸೇನಾ ಟೀಕಿಸಿತ್ತು. ರಾಜ್‌ ಠಾಕ್ರೆ ನೇತೃತ್ವದ ಎಂಎನ್ಎಸ್‌ ಕೂಡ ಅಸಮಾಧಾನ ವ್ಯಕ್ತಪಡಿಸಿತ್ತು.

ಮಹಾರಾಷ್ಟ್ರದಲ್ಲಿ ಔರಂಗಜೇಬ್‌ಸಮಾಧಿಯ ಅವಶ್ಯಕತೆ ಏನಿದೆ? ಅದನ್ನು ನೆಲಸಮ ಮಾಡಬೇಕು. ಹಾಗೆ ಮಾಡಿದರೆ ಜನರು ಅಲ್ಲಿಗೆ ಹೋಗುವುದಿಲ್ಲ ಎಂದು ಎಂಎನ್‌ಎಸ್‌ ವಕ್ತಾರ ಗಜಾನನ್‌ ಕಾಳೆ ಇತ್ತೀಚೆಗೆ ಟ್ವೀಟ್‌ ಮಾಡಿದ್ದರು.

ಇದಾದ ಬಳಿಕ ಪುರಾತತ್ವ ಇಲಾಖೆಯಡಿ ರಕ್ಷಣೆಯಲ್ಲಿರುವ ಸಮಾಧಿ ಸ್ಥಳ ಖುಲ್ತಬಾದ್‌ಗೆ ಕೆಲವರು ಬೀಗ ಹಾಕುವ ಪ್ರಯತ್ನ ನಡೆಸಿದ್ದಾರೆ.

ಸಮಾಧಿಗೆ ಒವೈಸಿ ಭೇಟಿ ಕುರಿತು ಪ್ರತಿಕ್ರಿಯಿಸಿದ್ದ ಎನ್‌ಸಿಪಿ ಮುಖಂಡ ಶರದ್‌ ಪವಾರ್‌, ಮಹಾರಾಷ್ಟ್ರದ ಶಾಂತಿಯುತ ವಾತಾವರಣವನ್ನು ಹಾಳು ಮಾಡುವ ಕೃತ್ಯ ಎಂದು ಕಿಡಿಕಾರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.