ADVERTISEMENT

ದಬ್ಬಾಳಿಕೆ ನಿಲ್ಲದೆ ಮಾತುಕತೆ ಇಲ್ಲ: ಕಿಸಾನ್ ಸಂಯುಕ್ತ ಮೋರ್ಚಾ

ಬಂಧಿತ ರೈತರ ಬಿಡುಗಡೆಗೆ ಕಿಸಾನ್ ಸಂಯುಕ್ತ ಮೋರ್ಚಾ ಆಗ್ರಹ lಶನಿವಾರ ರಸ್ತೆ ತಡೆಗೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2021, 19:09 IST
Last Updated 2 ಫೆಬ್ರುವರಿ 2021, 19:09 IST
ಗಾಜಿಪುರ ಗಡಿಯಲ್ಲಿ ರೈತರ ಪ್ರತಿಭಟನೆ ಎಎಫ್‌ಪಿ ಚಿತ್ರ
ಗಾಜಿಪುರ ಗಡಿಯಲ್ಲಿ ರೈತರ ಪ್ರತಿಭಟನೆ ಎಎಫ್‌ಪಿ ಚಿತ್ರ   

ನವದೆಹಲಿ (ಪಿಟಿಐ): ಪ್ರತಿಭಟನೆ ನಿರತ ರೈತರ ಮೇಲೆ ಸರ್ಕಾರ ಮತ್ತು ಪೊಲೀಸರು ದಬ್ಬಾಳಿಕೆ ನಡೆಸುತ್ತಿದ್ದಾರೆ. ಸುಳ್ಳು ಆರೋಪಗಳಲ್ಲಿ ರೈತರನ್ನು ಬಂಧಿಸಲಾಗಿದೆ. ಈ ದಬ್ಬಾಳಿಕೆಯನ್ನು ನಿಲ್ಲಿಸಿ, ಬಂಧಿತ ರೈತರನ್ನು ಬಿಡುಗಡೆ ಮಾಡುವವರೆಗೆ ಸರ್ಕಾರದ ಜತೆ ಮಾತುಕತೆ ನಡೆಸುವುದಿಲ್ಲ ಎಂದು ಕಿಸಾನ್ ಸಂಯುಕ್ತ ಮೋರ್ಚಾ ಮಂಗಳವಾರ ಹೇಳಿದೆ.

ನೂತನ ಕೃಷಿ ಕಾಯ್ದೆಗಳನ್ನು ರದ್ದುಪಡಿಸಬೇಕು ಎಂದು ರೈತ ಸಂಘಟನೆಗಳು ನಡೆಸುತ್ತಿರುವ ಹೋರಾಟಕ್ಕೆ ಕಿಸಾನ್ ಸಂಯುಕ್ತ ಮೋರ್ಚಾದ ನೇತೃತ್ವ ಇದೆ. ಹೋರಾಟದ ಮುಂದಿನ ಹಾದಿಯ ಬಗ್ಗೆ ಚರ್ಚಿಸಲು ಸೋಮವಾರ ಸಂಜೆ ನಡೆಸಿದ ಸಭೆಯಲ್ಲಿ ರೈತ ಸಂಘಟನೆಗಳು ಈ ತೀರ್ಮಾನಕ್ಕೆ ಬಂದಿವೆ ಎಂದು ಒಕ್ಕೂಟವು ಹೇಳಿದೆ.

ಸರ್ಕಾರದ ದಬ್ಬಾಳಿಕೆಗಳ ವಿರುದ್ಧ ಫೆಬ್ರುವರಿ 6ರಂದು ದೇಶದಾದ್ಯಂತ ‘ಛಕ್ಕಾ ಜಾಮ್’ ನಡೆಸಲು ತೀರ್ಮಾನಿಸಲಾಗಿದೆ. ಅಂದು ಎಲ್ಲಾ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಮೂರು ತಾಸು ರಸ್ತೆ ತಡೆ ನಡೆಸಲಾಗುವುದು ಎಂದು ಒಕ್ಕೂಟವು ಹೇಳಿದೆ.

ADVERTISEMENT

‘ಸರ್ಕಾರ, ಆಡಳಿತ ಯಂತ್ರ ಮತ್ತು ಪೊಲೀಸ್‌ ಇಲಾಖೆಯು ರೈತರ ವಿರುದ್ಧ ನಿಂತಿವೆ. ಇಂಟರ್‌ನೆಟ್ ಸ್ಥಗಿತಗೊಳಿಸಲಾಗುತ್ತಿದೆ. ರೈತ ನಾಯಕರ ಟ್ವಿಟರ್‌ ಖಾತೆಗಳನ್ನು ನಿರ್ಬಂಧಿಸಲಾಗುತ್ತಿದೆ. ಪ್ರತಿಭಟನೆ ಸಂಘಟಿಸುವುದಕ್ಕೆ ತಡೆ ಉಂಟು ಮಾಡಲಾಗುತ್ತಿದೆ. ಇದು ಪ್ರಜಾಪ್ರಭುತ್ವದ ಮೇಲಿನ ನೇರ ದಾಳಿ’ ಎಂದು ಒಕ್ಕೂಟವು ಆಕ್ರೋಶ ವ್ಯಕ್ತಪಡಿಸಿದೆ.

‘ರೈತರ ಮೇಲೆ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಕಾರ್ಯಕರ್ತರು ದಾಳಿ ನಡೆಸಿದ್ದಾರೆ. ಸರ್ಕಾರವೇ ಈ ದಾಳಿಗಳನ್ನು ಆಯೋಜಿಸಿದೆ. ರೈತರ ಪ್ರತಿಭಟನೆಯ ಅಲೆ ತೀವ್ರವಾಗುತ್ತಿದೆ. ಇದರಿಂದ ಸರ್ಕಾರ ಹೆದರಿದೆ. ಹೀಗಾ
ಗಿಯೇ ಇಂತಹ ಕೃತ್ಯಗಳನ್ನು ನಡೆಸುತ್ತಿದೆ’ ಎಂದು ಒಕ್ಕೂಟವು ಹೇಳಿದೆ.

‘ಮುಂದಿನ ಮಾತುಕತೆ ನಡೆಸಲು ಸರ್ಕಾರದಿಂದ ಆಹ್ವಾನ ಬಂದಿಲ್ಲ. ಅಂತಹ ಆಹ್ವಾನವನ್ನು ನಾವು ಸ್ವೀಕರಿಸುವುದೂ ಇಲ್ಲ. ರೈತರ ಮೇಲೆ ಎಸಗುತ್ತಿರುವ ದೌರ್ಜನ್ಯವನ್ನು ಸರ್ಕಾರವು ತಕ್ಷಣವೇ ನಿಲ್ಲಿಸಬೇಕು. ಬಂಧನದಲ್ಲಿರುವ ರೈತರನ್ನು ಬೇಷರತ್ತಾಗಿ ಬಿಡುಗಡೆ ಮಾಡಬೇಕು. ಅಲ್ಲಿಯವರೆಗೆ ನಾವು ಮಾತುಕತೆಗೆ ಒಪ್ಪುವುದಿಲ್ಲ’ ಎಂದು ಒಕ್ಕೂಟವು ತಿಳಿಸಿದೆ.

ರೈತರ ಅರ್ಜಿ ವಜಾ: ಬಂಧನದಲ್ಲಿರುವ ರೈತರನ್ನು ಬಿಡುಗಡೆ ಮಾಡಲು ಆದೇಶಿಸಬೇಕು ಎಂದು ರೈತ ಸಂಘಟನೆಗಳು ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾ ಮಾಡಿದೆ. ‘ಎಫ್‌ಐಆರ್‌ನಲ್ಲಿ ಇರುವ ಆರೋಪಗಳು, ಸಂಬಂಧಿತ ಸೆಕ್ಷನ್‌ಗಳು ಮತ್ತು ಕಾನೂನುಗಳು ಏನು ಹೇಳುತ್ತವೆಯೋ ಅದರ ಅನ್ವಯ ಕ್ರಮ ತೆಗೆದುಕೊಳ್ಳಿ’ ಎಂದು ಪೊಲೀಸರಿಗೆದೆಹಲಿ ಹೈಕೋರ್ಟ್ ಸೂಚಿಸಿದೆ.

ಲೋಕಸಭೆ, ರಾಜ್ಯಸಭೆಯಲ್ಲಿ ಗದ್ದಲ: ಕೃಷಿ ಕಾಯ್ದೆಗಳನ್ನು ರದ್ದುಪಡಿಸುವಂತೆ ವಿರೋಧ ಪಕ್ಷಗಳು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಒತ್ತಾಯಿಸಿದ ಕಾರಣ ಎರಡೂ ಸದನಗಳಲ್ಲಿ ಕಲಾಪವನ್ನು ಹಲವು ಬಾರಿ ಮುಂದೂಡಲಾಯಿತು. ಇಡೀ ದಿನ ಯಾವುದೇ ಕಲಾಪ ನಡೆಸಲು ಸಾಧ್ಯವಾಗಲಿಲ್ಲ.

ಪತ್ರಕರ್ತನಿಗೆ ಜಾಮೀನು: ರೈತರ ಪ್ರತಿಭಟನೆ ನಡೆಯುತ್ತಿರುವ ಸಿಂಘು ಗಡಿಯಲ್ಲಿ ಪೊಲೀಸರ ಜತೆ ಅನುಚಿತವಾಗಿ ವರ್ತಿಸಿದ ಆರೋಪದಲ್ಲಿ ಬಂಧಿಸಲಾಗಿದ್ದ ಕ್ಯಾರವಾನ್ ನಿಯತಕಾಲಿಕದ ವರದಿಗಾರ ಮನ್‌ದೀಪ್ ಪುನಿಯಾ ಅವರಿಗೆ ದೆಹಲಿ ನ್ಯಾಯಾಲಯವು ಮಂಗಳವಾರ ಜಾಮೀನು ಮಂಜೂರು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.