ADVERTISEMENT

ಆತ್ಮಹತ್ಯೆಗೆ ಪ್ರಯತ್ನಿಸಿದ ವಿಜಯಲಕ್ಷ್ಮಿ ಬಗ್ಗೆ ಸಾಮಾಜಿಕ ತಾಣದ ಚರ್ಚೆಗಳಿವು...

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಜುಲೈ 2020, 4:13 IST
Last Updated 27 ಜುಲೈ 2020, 4:13 IST
ನಟಿ ವಿಜಯಲಕ್ಷ್ಮಿ
ನಟಿ ವಿಜಯಲಕ್ಷ್ಮಿ    

ಕರ್ನಾಟಕ ಮೂಲದ ಬಹುಭಾಷಾ ನಟಿ ವಿಜಯಲಕ್ಷ್ಮೀ ಅವರು ಭಾನುವಾರ ವಿಡಿಯೊ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅಸ್ವಸ್ಥರಾಗಿರುವ ಅವರು ಚೆನ್ನೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕರ್ನಾಟಕ ಮೂಲದವಳು ಎಂಬ ಕಾರಣಕ್ಕೆ, ಜಾತಿ ಕಾರಣಕ್ಕೆ ತಮ್ಮನ್ನು ಕೀಳಾಗಿ ಕಾಣಲಾಗುತ್ತಿತ್ತು ಎಂದು ವಿಜಯಲಕ್ಷ್ಮಿ ತಮ್ಮ ವಿಡಿಯೊದಲ್ಲಿ ಆರೋಪಿಸಿದ್ದಾರೆ. ತಮಿಳುನಾಡಿನ ರಾಜಕೀಯ ಪಕ್ಷ 'ನಾಮ್‌ ತಮಿಳರ್‌ ಕಚ್ಚಿ’ (ಎನ್‌ಟಿಕೆ) ಜೊತೆಗೆ ಗುರುತಿಸಿಕೊಂಡಿರುವ ಸೀಮಾನ್, ‘ಪನನ್‌ಕಟ್ಟು ಪಾಡೈ ಕಚ್ಚಿ’ಯ ಹರಿ ನಾಡರ್‌ ಅವರು ತಮಗೆ ಕಿರುಕುಳ ನೀಡಿರುವುದಾಗಿ ವಿಜಯಲಕ್ಷ್ಮಿ ತಮ್ಮ ವಿಡಿಯೊದಲ್ಲಿ ಆರೋಪಿಸಿದ್ದಾರೆ.

ಸದ್ಯ ಅವರು ಆಸ್ಪತ್ರೆಯಲ್ಲಿದ್ದಾರೆ. ವಿಡಿಯೊ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಅವರ ಕುರಿತು ಸಾಮಾಜಿಕ ತಾಣಗಳಲ್ಲಿ ತೀವ್ರ ಚರ್ಚೆಗಳು ನಡೆಯುತ್ತಿವೆ. ಹೀಗಾಗಿ #Vijayalakshmi ಎಂಬ ಹ್ಯಾಶ್‌ಟ್ಯಾಗ್‌ ಟ್ವಿಟರ್‌ನಲ್ಲಿ ಟ್ರೆಂಡ್‌ ಆಗಿದೆ.

ADVERTISEMENT

ಚರ್ಚೆಗಳು ಹೀಗಿವೆ?

‘ಭಾಷೆಯ ಹೆಸರಿನಲ್ಲಿ ಯಾರನ್ನಾದರೂ ಹಿಂಸಿಸಬಹುದೇ? ಅಪರಾಧಿಗೆ ಶಿಕ್ಷೆಯಾಗಬೇಕು,’ ಎಂದು ವೀರೇಶ್‌ ಪಿಎಚ್‌ ಎಂಬುವವರು ಟ್ವೀಟ್‌ ಮಾಡಿದ್ದಾರೆ.

‘ಇದು ಬೇಸರದ ಸಂಗತಿ. ನೀವೇನಾದರೂ ಸಿನಿಮಾ ಮತ್ತು ರಾಜಕೀಯ ರಂಗದಲ್ಲಿ ಉಳಿಯಬೇಕಾದರೆ ನಿಮಗೆ ದಪ್ಪ ಚರ್ಮವಿರಲೇಬೇಕು. ಆತ್ಮಹತ್ಯೆಗೆ ಪ್ರಚೋದಿಸಿದ್ದಕ್ಕೆ ಇದು ಉತ್ತಮ ಉದಾಹರಣೆ. ಈ ಸಂಬಂಧ ಸರಿಯಾದ ತನಿಖೆಯಾಗಬೇಕು,’ ಎಂದು ಅಪರ್ಣಾ ಎಂಬುವವರು ಅಭಿಪ್ರಾಯಪಟ್ಟಿದ್ದಾರೆ.

‘ಸೇಡು ತೀರಿಸಿಕೊಳ್ಳುವ ಸಲುವಾಗಿ ತಮ್ಮ ಪ್ರಾಣವನ್ನೇ ಅಪಾಯಕ್ಕೆ ದೂಡಿಕೊಂಡ ವಿಜಯಲಕ್ಷ್ಮೀ ಅವರ ನಿರ್ಧಾರ ಆಘಾತ ಉಂಟು ಮಾಡಿದೆ. ಸೀಮನ್‌ ಅವರ ವಿರುದ್ಧ ವಿಜಯಲಕ್ಷ್ಮಿ ಯಾಕಿಷ್ಟು ಆಕ್ರೋಶಗೊಂಡಿದ್ದಾರೆ? ಕಲಾವಿದರ ಸಂಘ ಏನು ಮಾಡುತ್ತಿದೆ?’ ಎಂದು ಸುಬ್ರಮಣಿ ಇಳಂಗೋವನ್‌ ಎಂಬುವವರು ಪ್ರಶ್ನೆ ಮಾಡಿದ್ದಾರೆ.

‘ವಿಜಯಲಕ್ಷ್ಮೀ ಅವರು ಕ್ಷೇಮವಾಗಿದ್ದಾರೆ ಎಂದು ತಿಳಿದು ಖುಷಿಯಾಯಿತು. ಸಹಾನುಭೂತಿ ಒಳ್ಳೆಯದೇ. ಆದರೆ, ನೆನಪಿರಲಿ, ಇವತ್ತಿನ ಬೆಳೆಯುವ ಮಕ್ಕಳ ಮನಸ್ಸಿನ ಮೇಲೆ ಸಾಮಾಜಿಕ ತಾಣಗಳು ಗಾಢವಾದ ಪರಿಣಾಮ ಬೀರುತ್ತವೆ. ಆತ್ಮಹತ್ಯೆಯಂಥ ಪ್ರಕರಣಗಳ ವಿಚಾರದಲ್ಲಿ ನಮ್ಮ ಸಮಾಜ ಉತ್ಪ್ರೇಕ್ಷೆ ಮಾಡಬಾರದು. ಅದಕ್ಕೆ ಪ್ರಚಾರವನ್ನೂ ನೀಡಬಾರದು,’ ಎಂದು ಅಜಿತ್‌ ಎಂಬ ಎಐಎಡಿಎಂಕೆ ಕಾರ್ಯಕರ್ತ ಹೇಳಿಕೊಂಡಿದ್ದಾರೆ.

‘ನಟಿ ವಿಜಯಲಕ್ಷ್ಮಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸೀಮನ್ ಮತ್ತು ಆತನ ಪಕ್ಷದವರು ಚಿತ್ರಹಿಂಸೆ ನೀಡಿದ್ದಾರೆ ಎಂದು ನಟಿ ಕಾರಣ ನೀಡಿದ್ದಾರೆ. ಈಗ ಮುಂದಿನದ್ದು ಏನು? ಈ ಸುದ್ದಿ ಏಕೆ ಸದ್ದು ಮಾಡುತ್ತಿಲ್ಲ? ಯಾರೂ ಅವಳನ್ನು ಏಕೆ ಬೆಂಬಲಿಸುತ್ತಿಲ್ಲ? ಏಕೆ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ? ಆಕೆ ಇನ್ನೂ ಜೀವಂತವಾಗಿ ಉಳಿದಿರುವುದೇ ಇದಕ್ಕೆಲ್ಲ ಕಾರಣವೇ?’ ಎಂದು ಪಂಕಜ್‌ ಕುಮಾರ್‌ ಎಂಬುವವರು ಹೇಳಿದ್ದಾರೆ.

‘ನಾಮ್‌ ತಮಿಳರ್‌ ಕಚ್ಚಿ’ಯು ಇತ್ತೀಚೆಗೆ ಒಳ್ಳೆ ಕೆಲಸ ಮಾಡುತ್ತಿದೆ. ವಿಜಯಲಕ್ಷ್ಮೀ ಬೇಕಾಗಿಯೇ ಹೀಗೆ ಮಾಡುತ್ತಿದ್ದಾರೆ. ಅವರ ಹಿಂದೆ ಯಾರೋ ಇದ್ದಾರೆ. ಇದು ಗಂಭೀರ ವಿಷಯವಲ್ಲವೇ? ಕೊಳಕು ರಾಜಕೀಯಕ್ಕೆ ವಿಜಯಲಕ್ಷ್ಮಿ ಬಲಿಯಾಗುತ್ತಿದ್ದಾರೆ. ಆದಷ್ಟು ಬೇಗ ಅವರು ಮಾನಸಿಕವಾಗಿ ಗುಣವಾಗಲಿ,’ ಎಂದು ಕನಗು ಎಂಬುವವರು ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.