ADVERTISEMENT

ರೈತರನ್ನು ಮುಗಿಸಲೆಂದೇ ಕೃಷಿ ಕಾಯ್ದೆ ಜಾರಿಯಾಗಿದೆ : ರಾಹುಲ್ ಗಾಂಧಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಜನವರಿ 2021, 10:25 IST
Last Updated 15 ಜನವರಿ 2021, 10:25 IST
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ   

ನವದೆಹಲಿ: ಬಿಜೆಪಿ ಆಡಳಿತದ ಕೇಂದ್ರ ಸರ್ಕಾರವು ವಿವಾದಿತ ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳಲೇಬೇಕು. ಅಲ್ಲಿಯ ವರೆಗೆ ಕಾಂಗ್ರೆಸ್ ಪಟ್ಟು ಸಡಿಲಿಸುವುದಿಲ್ಲ. ಈ ಕಾಯ್ದೆಗಳು ರೈತರಿಗೆ ಯಾವುದೇ ನೆರವನ್ನುಂಟು ಮಾಡುವುದಿಲ್ಲ. ರೈತರನ್ನು ಮುಗಿಸಲೆಂದೇ ಕೃಷಿ ಕಾಯ್ದೆ ಜಾರಿಯಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆ ಜಾರಿ ವಿರುದ್ಧ ರೈತರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಿರುವ ಕಾಂಗ್ರೆಸ್ ಪಕ್ಷವು ಶುಕ್ರವಾರ 'ಕಿಸಾನ್ ಅಧಿಕಾರ್ ದಿವಸ್' ಆಚರಿಸುತ್ತಿದೆ. ಅಲ್ಲದೆ ಎಲ್ಲ ರಾಜ್ಯ ಘಟಕಗಳ ರಾಜಭವನದಲ್ಲಿ ಧರಣಿಯನ್ನು ಹಮ್ಮಿಕೊಂಡಿದೆ. ಇದು 'ಸ್ಪೀಕ್ ಅಪ್ ಫಾರ್ ಕಿಸಾನ್ ಅಧಿಕಾರ್' (ರೈತರ ಅಧಿಕಾರಕ್ಕಾಗಿ ಧ್ವನಿಯೆತ್ತಿ) ಅಭಿಯಾನದ ಭಾಗವಾಗಿದೆ.

ಕಾಂಗ್ರೆಸ್ ಧರಣಿ ಮುನ್ನಡೆಸುತ್ತಿರುವ ರಾಹುಲ್ ಗಾಂಧಿ, ವಿವಾದಿತ ಕೃಷಿ ಕಾಯ್ದೆಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸುವಂತೆ ಒತ್ತಾಯಿಸಿದರು.

ADVERTISEMENT

ನರೇಂದ್ರ ಮೋದಿ ಸರ್ಕಾರ ಈ ಹಿಂದೆ ರೈತರ ಭೂಮಿಯನ್ನು ಕಸಿದುಕೊಳ್ಳಲು ಪ್ರಯತ್ನಿಸಿತ್ತು. ಭೂಸ್ವಾಧೀನ ಕಾಯ್ದೆ ಬಂದಾಗ ಕಾಂಗ್ರೆಸ್ ಪಕ್ಷವು ತಡೆ ಹಿಡಿದಿತ್ತು. ಈಗ ಬಿಜೆಪಿ ಮತ್ತು ಅವರ ಇಬ್ಬರು ಸ್ನೇಹಿತರು ಸೇರಿ ರೈತರ ಮೇಲೆ ಹಲ್ಲೆ ನಡೆಸುತ್ತಿದ್ದು,ಮೂರು ಕೃಷಿ ಕಾನೂನುಗಳನ್ನು ಜಾರಿಗೆ ತಂದಿದ್ದಾರೆ ಎಂದು ಆರೋಪಿಸಿದರು.

ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ರಾಜಸ್ಥಾನ ಸೇರಿದಂತೆ ಸಾವಿರಾರು ರೈತರು ದೆಹಲಿ ಗಡಿ ಗ್ರದೇಶಗಳಲ್ಲಿ ನಿರಂತರ ಅಂದೋಲನ ನಡೆಸುತ್ತಿದ್ದಾರೆ. ಸರ್ಕಾರ ಜೊತಗಿನ ಹಲವು ಸುತ್ತಿನ ಮಾತುಕತೆಯು ವಿಫಲಗೊಂಡಿದೆ. 9ನೇ ಸುತ್ತಿನ ಮಾತುಕತೆಯು ಇಂದು (ಶುಕ್ರವಾರ) ನಡೆಯುತ್ತಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ರೈತರನ್ನು ಗೌರವಿಸುತ್ತಿಲ್ಲ. ಪ್ರತಿಭಟನಾ ನಿರತ ರೈತರನ್ನು ಕಡೆಗಣಿಸುವ ಮೂಲಕ ಸತಾಯಿಸಲು ಬಯಸುತ್ತಿದ್ದಾರೆ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.