ADVERTISEMENT

ಗುಜರಾತ್‌: ‘ಕೈ’ಗೆ ಅಲ್ಪ ಅಂತರದ ಸೋಲಿನ ತಲೆನೋವು

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2022, 14:00 IST
Last Updated 12 ನವೆಂಬರ್ 2022, 14:00 IST
ಬಿಜೆಪಿಯ ಚುನಾವಣಾ ಪ್ರಚಾರ ಸಾಮಗ್ರಿಗಳನ್ನು ಸಿದ್ಧಪಡಿಸುವ ಕಾರ್ಯ ಭರದಿಂದ ಸಾಗಿದೆ ಎಎಫ್‌ಪಿ ಚಿತ್ರ
ಬಿಜೆಪಿಯ ಚುನಾವಣಾ ಪ್ರಚಾರ ಸಾಮಗ್ರಿಗಳನ್ನು ಸಿದ್ಧಪಡಿಸುವ ಕಾರ್ಯ ಭರದಿಂದ ಸಾಗಿದೆ ಎಎಫ್‌ಪಿ ಚಿತ್ರ   

ಅಹಮದಾಬಾದ್‌ (ಪಿಟಿಐ): ಗುಜರಾತ್ ವಿಧಾನಸಭೆಗೆ 2017ರಲ್ಲಿ ನಡೆದ ಚುನಾವಣೆಯಲ್ಲಿ ಕನಿಷ್ಠ 16 ಕ್ಷೇತ್ರಗಳಲ್ಲಿ ಗೆಲುವಿನ ಅಂತರ 3,000 ಮತಗಳಿಗಿಂತಲೂ ಕಡಿಮೆ ಇತ್ತು. ಎರಡು ಪ್ರಮುಖ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ನ ಹಲವು ಮುಖಂಡರು ಅಲ್ಪ ಅಂತರದಲ್ಲಿ ಗೆಲುವು ತಪ್ಪಿಸಿಕೊಂಡಿದ್ದರು.

ಏಳು ಕ್ಷೇತ್ರಗಳಲ್ಲಿ ಗೆಲುವಿನ ಅಂತರ 1,000 ಮತಗಳಿಗಿಂತಲೂ ಕಡಿಮೆ ಇತ್ತು. ಕಡಿಮೆ ಅಂತರದ ಗೆಲುವಿನ 16 ಕ್ಷೇತ್ರಗಳ ಪೈಕಿ 10 ಕ್ಷೇತ್ರಗಳು ಬಿಜೆಪಿ ಪಾಲಾದರೆ ಉಳಿದ ಆರು ಕ್ಷೇತ್ರಗಳು ಕಾಂಗ್ರೆಸ್‌ಗೆ ದಕ್ಕಿದ್ದವು. ಅತ್ಯಂತ ಕಡಿಮೆ ಅಂತರದ ಗೆಲುವು ವಲಸಡ್‌ ಜಿಲ್ಲೆಯ ಕಪ್ರಾಡಾ (ಪರಿಶಿಷ್ಟ ಪಂಗಡ ಮೀಸಲು) ಕ್ಷೇತ್ರದಲ್ಲಿ ದಾಖಲಾಗಿದೆ. ಬಿಜೆಪಿಯ ಮಧುಭಾಯ್‌ ರಾವತ್‌ ಅವರು ಕಾಂಗ್ರೆಸ್‌ನ ಜಿತುಭಾಯ್‌ ಚೌಧರಿ ವಿರುದ್ಧ ಇಲ್ಲಿ 170 ಮತಗಳ ಅಂತರದಲ್ಲಿ ಸೋತರು. ಬಳಿಕ ಜಿತುಭಾಯಿ ಅವರು ಬಿಜೆಪಿ ಸೇರಿದ್ದಾರೆ. ಈ ಬಾರಿಯೂ ಅವರಿಗೆ ಅಲ್ಲಿಂದ ಬಿಜೆಪಿ ಟಿಕೆಟ್‌ ದೊರೆತಿದೆ.

‌ಬಿಎಸ್‌ಪಿಯಂತಹ ಸಣ್ಣ ಪಕ್ಷಗಳು ಮತ್ತು ಪಕ್ಷೇತರರು ಪಡೆದುಕೊಳ್ಳುವ ಮತಗಳು ಕಾಂಗ್ರೆಸ್‌ ಗೆಲುವಿಗೆ ತೊಡಕು ಉಂಟು ಮಾಡುತ್ತಿವೆ ಎಂದು ವಿಶ್ಲೇಷಕರು ಹೇಳುತ್ತಾರೆ. ಅಂತಹ ಒಂದು ಕ್ಷೇತ್ರ ಪಂಚಮಹಲ್‌ ಜಿಲ್ಲೆಯ ಗೋಧ್ರಾ. ಇದು ಮುಸ್ಲಿಮರು ಹೆಚ್ಚು ಇರುವ ಕ್ಷೇತ್ರ. ಇಲ್ಲಿ ಬಿಜೆಪಿ ಅಭ್ಯರ್ಥಿ ಸಿ.ಕೆ.ರೌಲ್‌ಜಿ ಅವರು ಕಾಂಗ್ರೆಸ್‌ನ ಪ್ರವೀಣ್‌ ಸಿಂಹ ಚೌಹಾಣ್ ಅವರನ್ನು 258 ಮತಗಳಿಂದ ಸೋಲಿಸಿದ್ದರು. 4,000 ಮತಗಳು ನೋಟಾಕ್ಕೆ ಹೋಗಿದ್ದರೆ ಬಿಎಸ್‌ಪಿ ಮತ್ತು ಇಬ್ಬರು ಪಕ್ಷೇತರರು ಪಡೆದ ಮತಗಳ ಸಂಖ್ಯೆ ಸುಮಾರು 20 ಸಾವಿರ. ಕಾಂಗ್ರೆಸ್‌ನಲ್ಲಿದ್ದ ರೌಲ್‌ಜಿ ಅವರು ಬಳಿಕ ಬಿಜೆಪಿ ಸೇರಿದ್ದರು. ಗೋಧ್ರಾ ಕ್ಷೇತ್ರದಲ್ಲಿ ಈ ಬಾರಿಯೂ ಅವರಿಗೆ ಟಿಕೆಟ್ ನೀಡಲಾಗಿದೆ.

ADVERTISEMENT

ಬಿಜೆಪಿ ಮುಖಂಡ ಭೂಪೇಂದ್ರಸಿಂಹ ಚೂಡಾಸಮ ಅವರು 327 ಮತಗಳಿಂದ ಧೋಲ್ಕ ಕ್ಷೇತ್ರದಲ್ಲಿ ಗೆದ್ದಿದ್ದರು. ಬಿಎಸ್‌ಪಿ, ಎನ್‌ಸಿಪಿ ಮತ್ತು ಇಬ್ಬರು ಪಕ್ಷೇತರರಿಗೆ ಸುಮಾರು 11 ಸಾವಿರ ಮತಗಳು ಸಿಕ್ಕಿದ್ದವು. ಸಣ್ಣ ಪಕ್ಷಗಳು ಮತ್ತು ಪಕ್ಷೇತರರಿಂದಾಗಿಯೇ ಬಿಜೆಪಿಗೆ ಇಲ್ಲಿ ಗೆಲುವು ಸಾಧ್ಯವಾಗಿತ್ತು.

ಗಾಂಧಿನಗರದ ಮನ್ಸಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಸುರೇಶ್‌ ಪಟೇಲ್‌ ಅವರು ಬಿಜೆಪಿಯ ಯುವ ಮುಖಂಡ ಅಮಿತ್ ಚೌಧರಿ ಅವರನ್ನು 524 ಮತಗಳಿಂದ ಸೋಲಿಸಿದ್ದರು. ಚೌಧರಿ ಅವರು 2012ರಲ್ಲಿ ಇದೇ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್‌ನಿಂದ ಗೆದ್ದಿದ್ದರು. ಬಳಿಕ, ಬಿಜೆಪಿ ಸೇರಿದ್ದರು. ಪರಿಶಿಷ್ಟ ಪಂಗಡದ ಮೀಸಲು ಕ್ಷೇತ್ರ ಡಾಂಗ್ಸ್‌ನಲ್ಲಿ ಕಾಂಗ್ರೆಸ್‌ನ ಮಂಗಲ್‌ ಗವಿತ್ ಅವರು 768 ಮತಗಳಿಂದ ಗೆದ್ದಿದ್ದರು. ಬಿಜೆಪಿಯ ಸೌರಭ್‌ ಪಟೇಲ್‌ ಅವರು ಬೊಟಾದ್‌ ಕ್ಷೇತ್ರದಲ್ಲಿ 906 ಮತಗಳಿಂದ ಗೆಲುವು ಪಡೆದಿದ್ದರು. ಬನಸ್ಕಾಂತದ ದೇವದರ್ ಕ್ಷೇತ್ರವನ್ನು 972 ಮತಗಳಿಂದ ಬಿಜೆಪಿಯಿಂದ ಕಾಂಗ್ರೆಸ್ ಕಸಿದುಕೊಂಡಿತ್ತು.

ಕಡಿಮೆ ಮತಗಳ ಅಂತರವಿದ್ದ ಹೆಚ್ಚಿನ ಸಂದರ್ಭಗಳಲ್ಲಿ ಕಾಂಗ್ರೆಸ್‌ಗೆ ಸೋಲಾಗಿದೆ. ಹಾಗಾಗಿಯೇ ಈ ಬಾರಿ ಈ ಸಮಸ್ಯೆ ಪರಿಹರಿಸಿಕೊಳ್ಳಲು ಪ್ರಯತ್ನ ಮಾಡಲಾಗಿದೆ. ಪಕ್ಷೇತರರ ಸಂಖ್ಯೆ ಅತ್ಯಂತ ಕಡಿಮೆ ಆಗುವಂತೆ ನೋಡಿಕೊಳ್ಳಲಾಗಿದೆ. ಪಕ್ಷೇತರರು ಮತ್ತು ಸಣ್ಣ ‍ಪಕ್ಷಗಳ ಅಭ್ಯರ್ಥಿಗಳು ಕಣಕ್ಕೆ ಇಳಿಯದಂತೆ ಮನವೊಲಿಸಲು ಯತ್ನಿಸಲಾಗಿದೆ ಎಂದು ಗುಜರಾತ್‌ ಕಾಂಗ್ರೆಸ್ ಕಾರ್ಯಾಧ್ಯಕ್ಷ ಲಲಿತ್ ಕಗಥರ ಹೇಳಿದ್ದಾರೆ.

ಅತ್ಯಂತ ನಿಕಟ ಸ್ಪರ್ಧೆ ಇರುವ ಕ್ಷೇತ್ರಗಳು ಕೈತಪ್ಪದಂತೆ ಬಿಜೆಪಿ ಕೂಡ ಕ್ರಮಗಳನ್ನು ಕೈಗೊಂಡಿದೆ. ‘ಅಲ್ಪ ಅಂತರದಲ್ಲಿ ಸೋತ ಕ್ಷೇತ್ರಗಳಲ್ಲಿ ಈ ಬಾರಿ ಗೆಲ್ಲುವುದಕ್ಕಾಗಿ ಪ್ರಯತ್ನ ನಡೆಸಲಾಗಿದೆ. ಕಾರ್ಯಕರ್ತರು ಮತಗಟ್ಟೆ ಮಟ್ಟದಲ್ಲಿ ಕೆಲಸ ಮಾಡುತ್ತಿದ್ದಾರೆ. ಇದರಿಂದಾಗಿ ನಮಗೆ ಹೆಚ್ಚಿನ ಮತಗಳು ಸಿಗಲಿವೆ. ಹಾಗಾಗಿ, ಕಡಿಮೆ ಮತಗಳ ಅಂತರದ ಗೆಲುವಿನ ಪ್ರಶ್ನೆಯೇ ಇಲ್ಲ’ ಎಂದು ಗುಜರಾತ್ ಬಿಜೆಪಿ ವಕ್ತಾರ ಕಿಶೋರ್ ಮಕ್ವಾನಾ ಹೇಳಿದ್ದಾರೆ.

‘ಒಂದು ಪ್ರದೇಶ ಅಥವಾ ಜಾತಿಯ ಮತದಾರರು ತಮಗೆ ಮತ ನೀಡುವುದೇ ಇಲ್ಲ ಎಂಬುದು ಖಾತರಿಯಾದಾಗ ಆ ಪ‍್ರದೇಶದ ವ್ಯಕ್ತಿಯೊಬ್ಬರನ್ನು ಪಕ್ಷೇತರರಾಗಿ ಕಣಕ್ಕೆ ಇಳಿಸುವ ಕಾರ್ಯತಂತ್ರವನ್ನು ಅನುಸರಿಸಲಾಗುತ್ತಿದೆ. ಹೀಗಾದಾಗ ಆ ಜಾತಿ ಅಥವಾ ಪ್ರದೇಶದ ಮತಗಳು ವಿಭಜನೆಯಾಗಿ, ಪ‍್ರತಿಸ್ಪರ್ಧಿ ಅಭ್ಯರ್ಥಿಗೆ ಸಿಗುವ ಮತಗಳ ಸಂಖ್ಯೆ ಕಡಿಮೆ ಆಗುತ್ತದೆ’ ಎಂದು ರಾಜಕೀಯ ವಿಶ್ಲೇಷಕ ರವೀಂದ್ರ ತ್ರಿವೇದಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.