VV ರಾಜೇಶ್ ಅವರಿಗೆ ರಾಜೇವ್ ಚಂದ್ರಶೇಖರ್ ಸೇರಿ ಬಿಜೆಪಿ ನಾಯಕರು ಸಿಹಿ ತಿನ್ನಿಸಿದರು.
ತಿರುವನಂತಪುರ: ಕೇರಳ ರಾಜ್ಯದಲ್ಲಿ ಬಿಜೆಪಿಯಿಂದ ಮೊದಲ ಮೇಯರ್ ಆಗಿ ಆಯ್ಕೆಯಾಗುವ ಮೂಲಕ ತಿರುವನಂತಪುರದ ಬಿಜೆಪಿ ನಾಯಕ ವಿವಿ ರಾಜೇಶ್ ಇತಿಹಾಸ ನಿರ್ಮಿಸಿದರು.
ಇತ್ತೀಚೆಗೆ ಕೇರಳದಲ್ಲಿ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ರಾಜಧಾನಿ ತಿರುವನಂತರಪುರ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಭರ್ಜರಿ ಜಯ ಗಳಿಸಿತ್ತು. 101 ವಾರ್ಡುಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 50 ಸ್ಥಾನಗಳಲ್ಲಿ ಜಯ ದಾಖಲಿಸಿ ಕೇರಳದ ಎಡಪಕ್ಷಗಳಿಗೆ ಹಾಗೂ ಕಾಂಗ್ರೆಸ್‌ಗೆ ಬಿಸಿ ಮುಟ್ಟಿಸಿತ್ತು.
ಈ ಹಿನ್ನೆಲೆಯಲ್ಲಿ ತಿರುವನಂತಪುರ ಮಹಾನಗರ ಪಾಲಿಕೆಯಲ್ಲಿ ಮೇಯರ್ ಆಯ್ಕೆಗೆ ಇಂದು ಚುನಾವಣೆ ನಡೆಯಿತು. ಬಿಜೆಪಿಗೆ ಮೇಯರ್ ಗದ್ದುಗೆ ಹಿಡಿಯಲು ಒಂದು ಸ್ಥಾನ ಕೊರತೆ ಇತ್ತು. ಈ ವೇಳೆ ಪಕ್ಷೇತರ ಸದಸ್ಯರೊಬ್ಬರು ಬಿಜೆಪಿ ಬೆಂಬಲಿಸುವ ಮೂಲಕ (51) ವಿವಿ ರಾಜೇಶ್ ಮೇಯರ್ ಆಗಿ ಗೆಲುವಿನ ನಗೆ ಬೀರಲು ಕಾರಣರಾದರು.
ಮೇಯರ್ ಚುನಾವಣೆಯಲ್ಲಿ ವಿವಿ ರಾಜೇಶ್ ವಿರುದ್ಧ ಎಲ್‌ಡಿಎಫ್‌ನ ಅಭ್ಯರ್ಥಿ 29, ಯುಡಿಎಫ್‌ನ ಅಭ್ಯರ್ಥಿ 19 ಮತಗಳನ್ನು ಪಡೆದು ಪರಾಭವಗೊಂಡರು.
ಬಳಿಕ ಮೇಯರ್ ಆಗಿ ರಾಜೇಶ್ ಅವರು ಪ್ರಮಾಣವಚನ ಸ್ವೀಕರಿದರು. ಈ ವೇಳೆ ಕೇರಳ ಬಿಜೆಪಿ ಅಧ್ಯಕ್ಷ ರಾಜೀವ್ ಚಂದ್ರಶೇಖರ್, ಬಿಜೆಪಿ ಮುಖಂಡರಾದ ಕೆ. ಸುರೇಂದ್ರನ್, ವಿ. ಮುರುಳಿಧರನ್ ಅವರು ಉಪಸ್ಥಿತರಿದ್ದರು.
ತಿರುವನಂತಪುರ ಸಿಟಿ ಕಾರ್ಪೊರೇಷನ್‌ನ ರಚನೆ ಆದ ಮೇಲೆ (40 ವರ್ಷಗಳ ಹಿಂದೆ) ಹಾಗೂ ಕೇರಳದ ಇತರ ಸಿಟಿ ಕಾರ್ಪೊರೇಷನ್‌ಗಳನ್ನೂ ಒಳಗೊಂಡಂತೆ ಇದೇ ಮೊದಲ ಬಾರಿಗೆ ಬಿಜೆಪಿಯ ಅಭ್ಯರ್ಥಿ ಮೇಯರ್ ಆಗಿ ದಾಖಲೆ ನಿರ್ಮಾಣವಾಗಿದೆ.
ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ತಿರುವನಂತಪುರದ ಜೊತೆ, ತ್ರಿಪುನಿತುರ ಹಾಗೂ ಪಾಲಕ್ಕಾಡ್‌ನಲ್ಲಿ ಬಿಜೆಪಿ ಅಧಿಕಾರಕ್ಕೇರಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.