ಇಂಫಾಲ್: ‘ಜನಾಂಗೀಯ ಸಂಘರ್ಷ ಕುರಿತಂತೆ ನಾನು ಜನರ ಕ್ಷಮೆ ಕೋರಿದ್ದ ವಿಚಾರವಾಗಿ ರಾಜಕೀಯ ಮಾಡುತ್ತಿರುವವರು ರಾಜ್ಯದಲ್ಲಿ ಅಸ್ಥಿರತೆ ಮುಂದುವರಿಯಬೇಕು ಎಂಬುದಾಗಿ ಬಯಸುತ್ತಿದ್ದಾರೆ’ ಎಂದು ಮಣಿಪುರ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಶುಕ್ರವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯದಲ್ಲಿ ಶಾಂತಿ ಮರುಸ್ಥಾಪನೆ ನನ್ನ ಸರ್ಕಾರದ ಆದ್ಯತೆಯಾಗಿದೆ’ ಎಂದರು.
‘ಆಗಿದ್ದು ಆಗಿ ಹೋಯಿತು. ಎರಡೂ ಸಮುದಾಯದವರು ಒಟ್ಟಿಗೆ ಕುಳಿತು ಮಾತನಾಡಿ, ಈ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು’ ಎಂದು ರಾಜ್ಯದ ವಿವಿಧ ಸಮುದಾಯಗಳಿಗೆ ಅವರು ಮನವಿ ಮಾಡಿದರು.
‘ವಿರೋಧ ಪಕ್ಷಗಳಿಗೆ ಸಿದ್ಧಾಂತವೆಂಬುದೇ ಇಲ್ಲ. ನಾನು ದುಃಖಿತನಾಗಿರುವ ಬಗ್ಗೆ ಹೇಳಿದ್ದೆ. ತಮ್ಮವರನ್ನು ಕಳೆದುಕೊಂಡವರಿಗೆ ಹಾಗೂ ಜನಾಂಗೀಯ ಸಂಘರ್ಷದಿಂದಾಗಿ ನೋವು ಅನುಭವಿಸುತ್ತಿರುವವರಲ್ಲಿ ಕ್ಷಮೆ ಯಾಚಿಸಿದ್ದೆ’ ಎಂದ ಅವರು, ‘ಉಗ್ರರಲ್ಲಿ ನಾನೇಕೆ ಕ್ಷಮೆ ಯಾಚಿಸಲಿ’ ಎಂದು ಪ್ರಶ್ನಿಸಿದರು.
‘ರಾಜ್ಯದಲ್ಲಿರುವ ವಿವಿಧ ಸಮುದಾಯಗಳ ಜನರಿಗೆ ನಾನು ಶಾಂತಿಯ ಸಂದೇಶ ರವಾನಿಸಿದ್ದೇನೆ. ಹಳೆಯದನ್ನು ಮರೆಯಬೇಕು ಹಾಗೂ ಕ್ಷಮಿಸಬೇಕು. ಮಾತುಕತೆ ಮೂಲಕ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.