
ಬೆತಿಯಾ (ಬಿಹಾರ): ‘ದೇಶಕ್ಕಾಗಿ ನಮ್ಮ ಕುಟುಂಬದ ಪೂರ್ವಿಕರು ಮಾಡಿರುವ ತ್ಯಾಗವನ್ನು ಎಂದಿಗೂ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಪಶ್ಚಿಮ ಚಂಪಾರಣ ಜಿಲ್ಲೆಯ ವಾಲ್ಮೀಕಿ ನಗರದಲ್ಲಿ ಬುಧವಾರ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ‘ನಮ್ಮ ಕುಟುಂಬದ ವಂಶಪಾರಂಪರ್ಯ ರಾಜಕಾರಣದ ಬಗ್ಗೆ ಟೀಕಿಸುವವರು, ಒಮ್ಮೆಯೂ ನಮ್ಮ ಪೂರ್ವಜರ ತ್ಯಾಗವನ್ನು ಪ್ರಶಂಸಿಸಲು ಸಾಧ್ಯವಾಗಿಲ್ಲ’ ಎಂದು ಹೇಳಿದರು.
‘ನಾವು ನಿಮಗೆ ಸೇವೆ ಸಲ್ಲಿಸಲು ಬಯಸುತ್ತೇವೆ. ದೇಶದಲ್ಲಿನ ಸಂಪತ್ತು ನಿಮಗೆ ಸೇರಿದ್ದು ಎಂದು ತಿಳಿದಿದ್ದೇವೆ. ಇಲ್ಲಿನ ಮಣ್ಣು ನಿಮ್ಮ ರಕ್ತ ಹಾಗೂ ನಮ್ಮ ಪೂರ್ವಿಕರ ರಕ್ತದಿಂದ ತೋಯ್ದಿದೆ. ವಂಶಪಾರಂಪರ್ಯ ರಾಜಕಾರಣದ ಕುರಿತು ಟೀಕಿಸುವವರು ಈ ತ್ಯಾಗವನ್ನು ಎಂದಿಗೂ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ’ ಎಂದರು.
‘ಮುಂಜಾನೆಯಿಂದ ಮುಸ್ಸಂಜೆವರೆಗೂ ಬಿಜೆಪಿಯ ನಾಯಕರು ನೆಹರೂ ಅವರನ್ನು ಟೀಕಿಸುವುದರಲ್ಲೇ ತಲ್ಲೀನರಾಗಿದ್ದಾರೆ. ದೇಶದ ಎಲ್ಲ ಸಮಸ್ಯೆಗೂ ಅವರನ್ನೇ ದೂಷಿಸುತ್ತಾರೆ. ಆದರೆ, ಅಮೆರಿಕದ ನ್ಯೂಯಾರ್ಕ್ ನಗರದ ನೂತನ ಮೇಯರ್ ಆಗಿ ಆಯ್ಕೆಯಾದ ಜೊಹ್ರಾನ್ ಮಮ್ದಾನಿ ಅವರು ನಮ್ಮ ಮುತ್ತಜ್ಜನನ್ನು ಪ್ರಂಶಸಿದ್ದಾರೆ’ ಎಂದು ಹೇಳಿದರು.
‘ದೇಶದ ಮೊದಲ ಪ್ರಧಾನಿಯು ದಿವಂಗತರಾದ ಬಳಿಕ, ತವರಿನಲ್ಲೇ ನಿತ್ಯವೂ ಅವಮಾನ ಎದುರಿಸುತ್ತಿದ್ದಾರೆ’ ಎಂದು ನೋವಿನಿಂದ ನುಡಿದರು.
‘ನಾವು ನುಸುಳುಕೋರರಿಗಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಪ್ರಧಾನಿ ದೂರುತ್ತಿದ್ದಾರೆ. ನೀವು ನಮ್ಮನ್ನು ಹಾಗೆಯೇ ನೋಡುತ್ತೀರಾ’ ಎಂದು ನೆರೆದಿದ್ದ ಜನಸ್ತೋಮವನ್ನು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.