ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ
ಪಿಟಿಐ ಚಿತ್ರ
ಶ್ರೀನಗರ: ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದ ಕೆಲವು ಪ್ರದೇಶಗಳನ್ನು ಗುರಿಯಾಗಿಸಿ ಪಾಕಿಸ್ತಾನ ನಡೆಸಿದ ಶೆಲ್ ದಾಳಿಯ ಭೀತಿಯಿಂದಾಗಿ ಮನೆಗಳನ್ನು ತೊರೆದು ಹೋಗಿದ್ದ ಜನರು ಮತ್ತೆ ಮನೆಗಳಿಗೆ ತೆರಳಬಹುದು ಎಂದು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಸೋಮವಾರ ಹೇಳಿದ್ದಾರೆ.
ಶೆಲ್, ದಾಳಿಯಿಂದ ಹಾನಿಗೆ ಒಳಗಾಗಿರುವ ಪ್ರದೇಶಗಳಿಗೆ ಒಮರ್ ಭೇಟಿ ನೀಡಿ, ಜನರೊಂದಿಗೆ ಮಾತುಕತೆ ನಡೆಸಿದರು.
'ಇಲ್ಲಿನ ಪ್ರದೇಶಗಳನ್ನು ನೋಡಿದಾಗ ಯುದ್ಧದಂತಹ ಪರಿಸ್ಥಿತಿ ಸೃಷ್ಟಿಯಾಗಿದೆ. ಪಾಕ್ ಶೆಲ್ ದಾಳಿಯಿಂದಾಗಿ ಪೂಂಚ್ ಜಿಲ್ಲೆ ಅತಿ ಹೆಚ್ಚು ಹಾನಿಗೆ ಒಳಗಾಗಿದೆ' ಎಂದು ಒಮರ್ ಕಳವಳ ವ್ಯಕ್ತಪಡಿಸಿದ್ದಾರೆ.
ಉಭಯ ರಾಷ್ಟ್ರಗಳ ನಡುವೆ ಪರಿಸ್ಥಿತಿ ತಿಳಿಯಾಗಿದ್ದು, ಕದನ ವಿರಾಮ ಘೋಷಣೆಯಾದ ಬೆನ್ನೆಲ್ಲೇ ಶೆಲ್ ದಾಳಿಯ ಭೀತಿಯಿಂದ ಮನೆಗಳನ್ನು ತೊರೆದು ಹೋಗಿದ್ದ ಜನರು ಮತ್ತೆ ಮನೆಗಳಿಗೆ ತೆರಳಬಹುದು ಎಂದು ಒಮರ್ ಭರವಸೆ ನೀಡಿದ್ದಾರೆ.
ಇಂತಹ ಕಠಿಣ ಪರಿಸ್ಥಿತಿಯಲ್ಲಿ ಕೋಮು ಸಾಮರಸ್ಯವನ್ನು ಕಾಪಾಡಿಕೊಂಡು, ಹಿಂದೂಗಳು, ಮುಸ್ಲಿಮರು ಮತ್ತು ಸಿಖ್ಖರ ನಡುವೆ ಭೇದ ಭಾವನೆ ಇಲ್ಲದೇ ಏಕತೆಯಿಂದ ಹೋರಾಡಿದ್ದಕ್ಕಾಗಿ ಪೂಂಚ್‌ನ ಜನರನ್ನು ಶ್ಲಾಘಿಸಿದರು. ಈ ವೇಳೆ ಭವಿಷ್ಯದ ಹಿತದೃಷ್ಟಿಯಿಂದ ಬಂಕರ್‌ಗಳ ಸ್ಥಾಪಿಸುವುದು ಅಗತ್ಯವಾಗಿದೆ ಎಂದು ಒಮರ್ ತಿಳಿಸಿದ್ದಾರೆ.
ಪಹಲ್ಗಾಮ್‌ನಲ್ಲಿ ಉಗ್ರರ ಕೃತ್ಯಕ್ಕೆ ಪ್ರತೀಕಾರವಾಗಿ ಭಾರತೀಯ ಸಶಸ್ತ್ರ ಪಡೆ ಉಗ್ರರ ಒಂಬತ್ತು ನೆಲೆಗಳನ್ನು ಗುರಿಯಾಗಿಸಿ 'ಆಪರೇಷನ್ ಸಿಂಧೂರ' ಕಾರ್ಯಾಚರಣೆಯನ್ನು ನಡೆಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.