ADVERTISEMENT

ರಾಜಸ್ಥಾನದ ಸಾಂಭರ್‌ ಕೆರೆಯಲ್ಲಿ ಸಾವಿರಾರು ವಲಸೆ ಹಕ್ಕಿಗಳ ನಿಗೂಢ ಸಾವು

ಪಿಟಿಐ
Published 12 ನವೆಂಬರ್ 2019, 13:16 IST
Last Updated 12 ನವೆಂಬರ್ 2019, 13:16 IST
ಸಾವಿಗೀಡಾಗಿರುವ ಸಾವಿರಾರು ಪಕ್ಷಿಗಳನ್ನು ಸಾಮೂಹಿಕವಾಗಿ ಹೂಳಲಾಯಿತು
ಸಾವಿಗೀಡಾಗಿರುವ ಸಾವಿರಾರು ಪಕ್ಷಿಗಳನ್ನು ಸಾಮೂಹಿಕವಾಗಿ ಹೂಳಲಾಯಿತು   

ಸಾಂಭರ್‌(ರಾಜಸ್ಥಾನ): ಜೈಪುರ ಸಮೀಪದ ಸಾಂಭರ್‌ ಕೆರೆ ಸುತ್ತಲು ಸಾವಿರಾರು ವಲಸೆ ಹಕ್ಕಿಗಳು ಸತ್ತು ಬಿದ್ದಿವೆ. ಸುಮಾರು ಹತ್ತು ಪ್ರಭೇದಗಳ ಸಾವಿರಾರು ಪಕ್ಷಿಗಳ ಸಾಮೂಹಿಕ ಸಾವು ಸ್ಥಳೀಯರು ಹಾಗೂ ಆಡಳಿತ ವಲಯದಲ್ಲಿ ಆತಂಕ ಸೃಷ್ಟಿಸಿದೆ.

ಸುಮಾರು 1,500 ವಲಸೆ ಹಕ್ಕಿಗಳು ಮೃತಪಟ್ಟಿರುವುದಾಗಿಅಧಿಕಾರಿಗಳು ಹೇಳುತ್ತಿದ್ದರೆ, ಸ್ಥಳೀಯರು ಕನಿಷ್ಠ 5,000 ಪಕ್ಷಿಗಳಾದರೂ ಸಾವಿಗೀಡಾಗಿವೆ ಎಂದು ಲೆಕ್ಕ ಮಾಡುತ್ತಿದ್ದಾರೆ. ಕಲುಷಿತ ನೀರು ಪಕ್ಷಿಗಳ ಸಾವಿಗೆ ಕಾರಣವಾಗಿರಬಹುದು ಎಂದು ಅಧಿಕಾರಿಗಳು ಊಹಿಸಿದ್ದು, ಕರಳು ಪರೀಕ್ಷೆ ವರದಿ ನಂತರವಷ್ಟೇ ನಿಖರ ಕಾರಣ ತಿಳಿಯಲಿದೆ ಎನ್ನಲಾಗಿದೆ.

'ಉಪ್ಪು ನೀರಿನ ಈ ಕೆರೆಯ ಬಳಿ ಹೀಗೆ ಸಾಮೂಹಿಕವಾಗಿ ಪಕ್ಷಿಗಳು ಸಾವಿಗೀಡಾಗಿರುವುದನ್ನು ನಾವು ಎಂದೆಂದೂ ಕಂಡಿರಲಿಲ್ಲ. ಸುಮಾರು 5,000 ಪಕ್ಷಿಗಳು ನಿಗೂಢವಾಗಿ ಸಾವಿಗೀಡಾಗಿವೆ' ಎಂದು ಸ್ಥಳೀಯ ಪಕ್ಷಿ ವೀಕ್ಷಕ ಅಭಿನವ್‌ ವೈಷ್ಣವ್‌ ಬೇಸರ ವ್ಯಕ್ತಪಡಿಸಿದ್ದಾರೆ.

ADVERTISEMENT

ಕೆರೆಯ ಸುತ್ತಲಿನ ಪ್ರದೇಶದಲ್ಲಿ ಭಾನುವಾರ ಓಡಾಡುವಾಗ ಮುದ್ದೆಯಂತೆ ರಾಶಿ ಬಿದ್ದ ಪಕ್ಷಿಗಳನ್ನು ಪಕ್ಷಿ ವೀಕ್ಷಕರು ಗಮನಿಸಿದ್ದಾರೆ. ಪ್ಲೋವರ್ಸ್‌, ಕಾಮನ್‌ ಕೂಟ್‌, ಬ್ಲ್ಯಾಕ್‌ ವಿಂಗಡ್‌ ಸ್ಟಿಲ್ತ್‌,...ಸೇರಿದಂತೆ ಹಲವು ಪ್ರಭೇದಗಳ ಪಕ್ಷಿಗಳು ಕೆರೆ ಭಾಗದ 12–13 ಕಿ.ಮೀ. ಆಯಕಟ್ಟಿನ ಜಾಗದಲ್ಲಿ ಬಿದ್ದಿವೆ.

ಕೆಲವು ದಿನಗಳ ಹಿಂದೆ ಇಲ್ಲಿ ಸುರಿದ ಆಲಿಕಲ್ಲು ಸಹಿತ ಜೋರು ಮಳೆಯು ಪಕ್ಷಿಗಳ ಸಾವಿಗೆ ಕಾರಣವಾಗಿರಬಹುದು ಎಂದು ಅರಣ್ಯಾಧಿಕಾರಿ ರಾಜೇಂದ್ರ ಜಖಾರ್‌ ಅಭಿಪ್ರಾಯ ಪಟ್ಟಿದ್ದಾರೆ.

ಪರೀಕ್ಷೆಗಾಗಿ ಜೈಪುರದ ವೈದ್ಯಕೀಯ ತಂಡಸತ್ತ ಪಕ್ಷಿಗಳ ದೇಹಗಳನ್ನು ಸಂಗ್ರಹಿಸಿದೆ ಹಾಗೂ ನೀರಿನ ಪರೀಕ್ಷೆಗಾಗಿ ಮಾದರಿಯನ್ನು ಭೋಪಾಲ್‌ಗೆ ಕಳಿಸಲಾಗಿದೆ.

ನೀರಿನಲ್ಲಿ ಉಪ್ಪಿನ ಅಂಶ ಅಧಿಕವಾಗಿ ಪಕ್ಷಿಗಳ ರಕ್ತ ಸೇರಿ, ಸರಾಗ ರಕ್ತ ಚಲನೆಗೆ ಅಡಚಣೆ ಉಂಟಾಗಿ ಮಿದುಳು ನಿಷ್ಕ್ರಿಯಗೊಂಡಿರಬಹುದು.ಬ್ಯಾಕ್ಟೀರಿಯಾ ಅಥವಾ ವೈರಸ್‌ ಸೋಂಕು ವ್ಯಾಪಿಸಿರಬಹುದು ಎಂದೆಲ್ಲ ವಿಶ್ಲೇಷಿಸಲಾಗುತ್ತಿದೆ.

ಸಾಂಭರ್‌ ಕೆರೆಯಲ್ಲಿ ಪ್ರತಿ ವರ್ಷ ಸುಮಾರು 2–3 ಲಕ್ಷ ಪಕ್ಷಿಗಳು ಆಶ್ರಯ ಪಡೆಯುತ್ತಿವೆ. ಇದರಲ್ಲಿ ಸುಮಾರು 50 ಸಾವಿರ ಫ್ಲೆಮಿಂಗೋಸ್‌ ಹಾಗೂ 1 ಲಕ್ಷ ವೇಡರ್ಸ್‌ಗಳೂ ಇರುತ್ತವೆ.

ಸುಮಾರು 600ಕ್ಕೂ ಹೆಚ್ಚು ಪಕ್ಷಿಗಳ ಮೃತ ದೇಹಗಳನ್ನು ಟ್ರ್ಯಾಕ್ಟರ್‌ಗಳಲ್ಲಿ ಸಾಗಿಸಿ ಹೂಳಲಾಗಿದೆ. ಇನ್ನು ನೂರಾರು ಪಕ್ಷಿಗಳ ದೇಹ ಕೆಸರಿನಲ್ಲಿ ಸಿಲುಕಿದ್ದು, ಅರಣ್ಯ ಸಿಬ್ಬಂದಿಯೂ ಆ ಸ್ಥಳಗಳತ್ತ ಸಾಗುವುದರಿಂದ ಹಿಂದೆ ಸರಿದಿದ್ದಾರೆ.

ಕಳೆದ ಗುರುವಾರ ಜೋಧಪುರದ ಖಿಂಚನ್‌ ಪ್ರದೇಶದಲ್ಲಿ 37 ಕೊಕ್ಕರೆಗಳು ಮೃತಪಟ್ಟಿದ್ದವು. ಅವುಗಳ ಕರಳು ಪರೀಕ್ಷೆಗೂ ಕಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.