ರಾಮ್‌ಜಿ ಲಾಲ್ ಸುಮನ್
–ಪಿಟಿಐ ಚಿತ್ರ
ನವದೆಹಲಿ: ರಜಪೂತ ರಾಜ ರಾಣಾ ಸಂಗ್ ಬಗ್ಗೆ ಆಡಿದ ವಿವಾದಾತ್ಮಕ ಮಾತುಗಳಿಗೆ ಸಮಾಜವಾದಿ ಪಕ್ಷದ ಸಂಸದ ರಾಮ್‌ಜಿ ಲಾಲ್ ಸುಮನ್ ಅವರಿಗೆ ಬೆದರಿಕೆ ಎದುರಾಗಿರುವುದು ಹಾಗೂ ಅವರ ಮನೆಯ ಮೇಲೆ ದಾಳಿ ನಡೆದಿರುವುದು ಲೋಕಸಭೆಯಲ್ಲಿ ಮಂಗಳವಾರ ಪ್ರಸ್ತಾಪ ಆಯಿತು.
ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ನೇತೃತ್ವದಲ್ಲಿ ಪಕ್ಷದ ಸಂಸದರು ಲೋಕಸಭೆಯ ಶೂನ್ಯವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದರು, ಘೋಷಣೆಗಳನ್ನು ಕೂಗಿದರು. ಈ ವಿಚಾರವಾಗಿ ನಿಲುವಳಿ ಸೂಚನೆಗೆ ಸ್ಪೀಕರ್ ಓಂ ಬಿರ್ಲಾ ಅವಕಾಶ ನೀಡದೆ ಇದ್ದಾಗ, ಸಮಾಜವಾದಿ ಪಕ್ಷದ ಕೆಲವರು ಭಿತ್ತಿಪತ್ರ ಪ್ರದರ್ಶಿಸಿದರು. ಟಿಎಂಸಿ ಸಂಸದರು ನ್ಯಾಯಮೂರ್ತಿಯೊಬ್ಬರ ವರ್ಗಾವಣೆ ವಿಚಾರವಾಗಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ತೊಡಗಿರುವ ಸಂಸದರು ತಮ್ಮ ಆಸನಗಳಿಗೆ ಮರಳಬೇಕು ಎಂದು ಬಿರ್ಲಾ ಮನವಿ ಮಾಡಿದರೂ, ಘೋಷಣೆ ಕೂಗುವುದು ಮುಂದುವರಿಯಿತು. ಭಿತ್ತಿಪತ್ರ ಹಾಗೂ ಘೋಷಣೆ ಕೂಗುವುದಕ್ಕೆ ಸದನದಲ್ಲಿ ಅವಕಾಶವಿಲ್ಲ, ವಿಷಯ ಪ್ರಸ್ತಾಪಿಸಲು ಅಖಿಲೇಶ್ ಅವರಿಗೆ ಅವಕಾಶ ನೀಡಲಾಗುತ್ತದೆ ಎಂದು ಬಿರ್ಲಾ ಹೇಳಿದರು.
ಆದರೆ ಗದ್ದಲ ಮುಂದುವರಿದ ಕಾರಣಕ್ಕೆ, ಸದನವನ್ನು ಮುಂದೂಡಲಾಯಿತು. ರಾಜ್ಯಸಭೆಯಲ್ಲಿಯೂ ಸುಮನ್ ಅವರ ವಿಚಾರ ಪ್ರಸ್ತಾಪವಾಯಿತು.
ಸಮಾಜವಾದಿ ಪಕ್ಷದ ರಾಮಗೋಪಾಲ್ ಯಾದವ್ ಅವರು ವಿಷಯ ಪ್ರಸ್ತಾಪಿಸಿ, ಸುಮನ್ ಅವರ ಜೀವ ತೆಗೆಯುವವರಿಗೆ ₹25 ಲಕ್ಷ ಕೊಡುವುದಾಗಿ ವ್ಯಕ್ತಿಯೊಬ್ಬ ಹೇಳಿದ್ದಾನೆ ಎಂದರು. ಸಂಸದರೊಬ್ಬರ ಭದ್ರತೆಗೆ ಸಂಬಂಧಿಸಿದ ವಿಷಯ ಇದು ಎಂದು ಯಾದವ್ ಹೇಳಿದರು.
ಯಾದವ್ ಅವರನ್ನು ಬೆಂಬಲಿಸಿ ಮಾತನಾಡಿದ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಂಸದರ ಭದ್ರತೆಗೆ ಸಂಬಂಧಿಸಿದ ವಿಷಯವನ್ನು ಪ್ರಸ್ತಾಪಿಸಲು ತಾವು ಬಯಸಿರುವುದಾಗಿ ಹೇಳಿದರು. ಪ್ರತಿ ಪ್ರಜೆ ಹಾಗೂ ಪ್ರತಿ ಸಂಸದನ ಭದ್ರತೆ ಬಹಳ ಮುಖ್ಯ ಎಂದು ಹೇಳಿದ ರಾಜ್ಯಸಭೆಯ ಸಭಾಪತಿ ಜಗದೀಪ್ ಧನಕರ್, ಸುಮನ್ ಅವರ ಮಾತುಗಳು ‘ನೋವು ಉಂಟುಮಾಡುವಂತೆ ಇದ್ದವು’ ಎಂದರು.
ಸುಮನ್ ಅವರು ತಮ್ಮ ಮಾತುಗಳನ್ನು ಕಡತದಿಂದ ತೆಗೆದುಹಾಕಿದರೂ, ಆ ಮಾತುಗಳನ್ನು ಮತ್ತೆ ಮತ್ತೆ ಆಡಿದರು ಎಂದು ಧನಕರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.