ADVERTISEMENT

ತೀವ್ರ ಕಾರ್ಯಾಚರಣೆ ಮೂವರು ಉಗ್ರರ ಹತ್ಯೆ

ಗಡಿ ನಿಯಂತ್ರಣ ರೇಖೆಯಲ್ಲಿ ಉಗ್ರರಿಗಾಗಿ ವ್ಯಾಪಕ ಶೋಧ ಕಾರ್ಯಾಚರಣೆ

ಪಿಟಿಐ
Published 1 ಜೂನ್ 2020, 20:00 IST
Last Updated 1 ಜೂನ್ 2020, 20:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶ್ರೀನಗರ: ಗಡಿ ನಿಯಂತ್ರಣ ರೇಖೆಯಲ್ಲಿ ನುಸುಳುವಿಕೆಯ ಯತ್ನವನ್ನು ವಿಫಲಗೊಳಿಸಿರುವ ಸೇನೆಯು, ಅಪಾರ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಮೂವರು ಉಗ್ರರನ್ನು ಸೋಮವಾರ ಹತ್ಯೆ ಮಾಡಿದೆ.

ಜಮ್ಮು ಪ್ರದೇಶದ ರಾಜೌರಿ ಜಿಲ್ಲೆಯ ನೌಶೆರಾ ವಲಯದಲ್ಲಿ ಈ ಕಾರ್ಯಾಚರಣೆ ನಡೆದಿದೆ.

’ಮೇ 28ರಿಂದ ಉಗ್ರರ ನುಸುಳುವಿಕೆಯನ್ನು ಪತ್ತೆ ಮಾಡಲು ತೀವ್ರ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಕಟ್ಟೆಚ್ಚರವಹಿಸಿದ್ದ ಸೇನಾ ಪಡೆಗಳು ನುಸುಳುವಿಕೆಯನ್ನು ವಿಫಲಗೊಳಿಸಿವೆ. ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿದೆ‘ ಎಂದು ಭಾರತೀಯ ಸೇನೆ ಪ್ರಕಟಣೆ ತಿಳಿಸಿದೆ.

ADVERTISEMENT

ಸ್ಥಳದಿಂದ ಎರಡು ಎಕೆ ಬಂದೂಕಿನ ಜೊತೆಗೆ 13 ಮ್ಯಾಗಜಿನ್, ಅಮೆರಿಕ ನಿರ್ಮಿತ ಎಂ–16ಎ2 ರೈಫಲ್‌ ಜೊತೆಗೆ 6 ಮ್ಯಾಗಜಿನ್‌, 9 ಎಂಎಂ ಚೈನೀಸ್‌ ಪಿಸ್ತೂಲ್‌, ಗ್ರೆನೇಡ್‌ ಲಾಂಚರ್‌ ಸಹಿತ ಆರು ಗ್ರೆನೇಡ್‌ಗಳು, ಔಷಧಗಳು, ₹17 ಸಾವಿರವನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ‌

ಅಂತರರಾಷ್ಟ್ರೀಯ ಗಡಿಯ ಕಠುವಾ–ಸಾಂಬಾ ವಲಯ ಮತ್ತು ಪೂಂಚ್‌ ಜಿಲ್ಲೆಯಲ್ಲೂ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ಕೈಗೊಂಡಿವೆ. ಬಿಎಸ್‌ಎಫ್‌ ಯೋಧರು ಮತ್ತು ಪೊಲೀಸರು ಜಂಟಿಯಾಗಿ ಈ ಕಾರ್ಯಾಚರಣೆ ಕೈಗೊಂಡಿದ್ದಾರೆ. ಜಮ್ಮು–ಪಠಾಣಕೋಟ್‌ ಹೆದ್ದಾರಿಯಲ್ಲೂ ಕಟ್ಟೆಚ್ಚರವಹಿಸಲಾಗಿದೆ.

‘ಕೊರೊನಾ ವೈರಸ್‌ ಸಾಂಕ್ರಾಮಿಕ ಕಾಯಿಲೆಯಿಂದ ಸೃಷ್ಟಿಯಾಗಿರುವ ಬಿಕ್ಕಟ್ಟಿನ ಪರಿಸ್ಥಿತಿಯನ್ನೇ ಪಾಕಿಸ್ತಾನ ಸೇನೆ ದುರುಪಯೋಗ ಪಡೆಸಿಕೊಳ್ಳಲು ಮುಂದಾಗಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರು ನುಸುಳಲು ಪ್ರಚೋದಿಸುತ್ತಿದೆ’ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.