ಸಾಂದರ್ಭಿಕ-ಚಿತ್ರ
ಎ.ಐ ಚಿತ್ರ
ಐಜ್ವಾಲ್: ಗಡಿ ದಾಟಿ ಭಾರತಲ್ಲಿ ಆಶ್ರಯ ಪಡೆದಿದ್ದ ಮ್ಯಾನ್ಮಾರ್‌ನ 3 ಸಾವಿರ ಮಂದಿ ನಿರಾಶ್ರಿತರು ಸ್ವಂತ ಗ್ರಾಮಕ್ಕೆ ಮರಳಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಗುರುವಾರ ತಿಳಿಸಿದ್ದಾರೆ.
ಮ್ಯಾನ್ಮಾರ್‌ನ 4,500ಕ್ಕೂ ಮಿಕ್ಕ ನಿರಾಶ್ರಿತರು ಭಾರತ ಪ್ರವೇಶಿಸಿ ಮಿಜೋರಾಂನ ಚಂಪಾಯ್ ಜಿಲ್ಲೆಯ ಝೋಕೌತಾರ್, ಸೈಖುಂಪೈ ಹಾಗೂ ವಾಪಾಯ್ ಗ್ರಾಮಗಳಲ್ಲಿ ವಾಸವಾಗಿದ್ದರು. ಚೀನಾ ಸೇನೆ ಬೆಂಬಲಿತ ಶಸ್ತ್ರ ಸಜ್ಜಿತ ಗುಂಪುಗಳಾದ ಚಿನ್ ನ್ಯಾಷನಲ್ ಡಿಫೆನ್ಸ್ ಫೋರ್ಸ್ ಹಾಗೂ ಚಿನ್‌ಲ್ಯಾಂಡ್ ಡಿಫೆನ್ಸ್ ಫೋರ್ಸ್‌ನೊಂದಿಗೆ ಸಂಘರ್ಷದ ಬಳಿಕ ಇವರೆಲ್ಲರೂ ನಿರಾಶ್ರಿತರಾಗಿದ್ದರು.
ಇವರೆಲ್ಲರೂ ಮ್ಯಾನ್ಮಾರ್‌ನ ಚಿನ್ ರಾಜ್ಯದವರು.
ನಿರಾಶ್ರಿತರಾಗಿ ಝೋಕೌತಾರ್ ಗ್ರಾಮದಲ್ಲಿದ್ದ 2,923 ಮಂದಿ, ವಾಪಾಯ್ ಗ್ರಾಮದಲ್ಲಿದ್ದ 39 ಮಂದಿ ಬುಧವಾರ ಸ್ವದೇಶಕ್ಕೆ ಮರಳಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಸಂಘರ್ಷ ನಿರತ ಗುಂಪುಗಳ ನಡುವೆ ಕದನ ವಿರಾಮ ಏರ್ಪಟ್ಟಿದ್ದರಿಂದ ನಿರಾಶ್ರಿತರು ಮರಳುವ ಪ್ರಕ್ರಿಯೆ ಜುಲೈ 7 ರಂದು ಆರಂಭವಾಗಿ, ಜುಲೈ 12ಕ್ಕೆ ವೇಗ ಪಡೆದುಕೊಂಡಿದೆ ಎಂದು ಅವರು ಹೇಳಿದ್ದಾರೆ.
ಸದ್ಯ ಭಾರತ–ಮ್ಯಾನ್ಮಾರ್ ಗಡಿಯಲ್ಲಿ ಪರಿಸ್ಥಿತಿ ಶಾಂತವಾಗಿದ್ದು, ಉಳಿದ ನಿರಾಶ್ರಿತರು ಮುಂಬರುವ ದಿನಗಳಲ್ಲಿ ಮರಳಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಮಿಜೋರಾಂ ಮ್ಯಾನ್ಮಾರ್‌ನೊಂದಿಗೆ 510 ಕಿ.ಮಿ ಗಡಿ ಹಂಚಿಕೊಂಡಿದೆ.
2021ರ ಫೆಬ್ರುವರಿಯಲ್ಲಿ ನಡೆದ ಸೇನಾ ಕ್ಷಿಪ್ರಕ್ರಾಂತಿಯಲ್ಲಿ ನಿರಾಶ್ರಿತರಾದ 32 ಸಾವಿರಕ್ಕೂ ಅಧಿಕ ಮ್ಯಾನ್ಮಾರ್ ಪ್ರಜೆಗಳು ಮಿಜೋರಾಂನಲ್ಲಿ ವಾಸವಿದ್ದಾರೆ.
ಇವರ ಗುರುತು ಪತ್ತೆಗೆ ಬಯೋಮೆಟ್ರಿಕ್ ಸಂಗ್ರಹಕ್ಕೆ ರಾಜ್ಯ ಸರ್ಕಾರ ಯೋಚಿಸುತ್ತಿದೆ. ನಿರಾಶ್ರಿತರೆಲ್ಲರೂ ಚಿನ್ ಸಮುದಾಯಕ್ಕೆ ಸೇರಿದವರಾಗಿದ್ದು, ಮಿಜೊಗಳೊಂದಿಗೆ ಜನಾಂಗೀಯ ಸಂಬಂಧ ಹೊಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.