ADVERTISEMENT

ದೆಹಲಿ ಮಹಾನಗರ ಪಾಲಿಕೆ ಮತದಾನ ಇಂದು: ಬಿಗಿ ಭದ್ರತೆ

ಪಿಟಿಐ
Published 4 ಡಿಸೆಂಬರ್ 2022, 1:20 IST
Last Updated 4 ಡಿಸೆಂಬರ್ 2022, 1:20 IST
ಎಂಸಿಡಿ ಚುನಾವಣೆಯ ಅಂಗವಾಗಿ ದೆಹಲಿಯ ಗೋಲ್‌ ಮಾರ್ಕೆಟ್‌ ಪ್ರದೇಶದ ಮತಗಟ್ಟೆಯೊಂದಕ್ಕೆ ಶನಿವಾರ ಬಿಗಿ ಪೊಲೀಸ್‌ ಭದ್ರತೆ ಒದಗಿಸಲಾಗಿತ್ತು –ಪಿಟಿಐ ಚಿತ್ರ
ಎಂಸಿಡಿ ಚುನಾವಣೆಯ ಅಂಗವಾಗಿ ದೆಹಲಿಯ ಗೋಲ್‌ ಮಾರ್ಕೆಟ್‌ ಪ್ರದೇಶದ ಮತಗಟ್ಟೆಯೊಂದಕ್ಕೆ ಶನಿವಾರ ಬಿಗಿ ಪೊಲೀಸ್‌ ಭದ್ರತೆ ಒದಗಿಸಲಾಗಿತ್ತು –ಪಿಟಿಐ ಚಿತ್ರ   

ನವದೆಹಲಿ: ದೆಹಲಿ ಮಹಾನಗರ ಪಾಲಿಕೆಯ (ಎಂಸಿಡಿ) 250 ವಾರ್ಡ್‌ಗಳಿಗೆ ಇಂದು (ಭಾನುವಾರ)ಮತದಾನ ನಡೆಯಲಿದ್ದು, ಬಿಗಿ ಭದ್ರತೆ ಏರ್ಪಡಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

40 ಸಾವಿರ ಪೊಲೀಸರನ್ನು, 20 ಸಾವಿರ ಗೃಹರಕ್ಷಕರನ್ನು ಮತ್ತು ಅರೆಸೇನಾ ಪಡೆಯ 108 ಕಂಪನಿಗಳನ್ನು ಹಾಗೂ ರಾಜ್ಯ ಸಶಸ್ತ್ರ ಪೊಲೀಸ್‌ ಪಡೆಯನ್ನೂ ಭದ್ರತೆಗಾಗಿ ನಿಯೋಜಿಸಲಾಗಿದೆ ಎಂದಿದ್ದಾರೆ.

ಸೂಕ್ಷ್ಮ ಪ್ರದೇಶಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಕಣ್ಗಾವಲಿಗಾಗಿ 60 ಡ್ರೋನ್‌ಗಳನ್ನು ಬಳಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಮತದಾನದ ವೇಳೆ ಕೋಮು ಗಲಭೆ ನಡೆಯದಂತೆ ಎಚ್ಚರಿಕೆ ವಹಿಸುವುದು, ಅಭ್ಯರ್ಥಿಗಳು ಮತದಾರರಿಗೆ ಆಮಿಷವೊಡ್ಡದಂತೆ ತಡೆಯುವುದು ಪೊಲೀಸರು ಮುಖ್ಯ ಗುರಿಯಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ವಿವರಿಸಿದ್ದಾರೆ. ಶಾಂತಿ ಸಮಿತಿ ಸದಸ್ಯರ ಜೊತೆ ಸಹಾಯಕ ಪೊಲೀಸ್‌ ಆಯುಕ್ತರು ಸಭೆ ನಡೆಸಿದ್ದಾರೆ ಎಂದಿದ್ದಾರೆ.

ವಿದ್ಯುನ್ಮಾನ ಮತ ಯಂತ್ರಗಳನ್ನು (ಇವಿಎಂ) ಇರಿಸಿರುವ ಭದ್ರತಾ ಕೊಠಡಿಗಳು, ಮತದಾನ ಕೇಂದ್ರಗಳು ಹಾಗೂ ಮತಎಣಿಕೆ ಕೇಂದ್ರಗಳ ಮೇಲೆ ಪೊಲೀಸರು ನಿಗಾ ಇರಿಸಿದ್ದಾರೆ ಎಂದೂ ಮಾಹಿತಿ ನೀಡಿದ್ದಾರೆ. ಡಿಸೆಂಬರ್‌ 7ರಂದು ಮತಎಣಿಕೆ ನಡೆಯಲಿದೆ.

ಎಂಸಿಡಿ ಚುನಾವಣೆಯಲ್ಲಿ 1.45 ಕೋಟಿಗೂ ಅಧಿಕ ಮತದಾರರು ತಮ್ಮ ಹಕ್ಕು ಚಲಾಯಿಸಲು ಅರ್ಹರಾಗಿದ್ದಾರೆ. 1,349 ಅಭ್ಯರ್ಥಿಗಳು ಕಣದಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಎಂಸಿಡಿ ಚುನಾವಣೆಯ ಅಂಗವಾಗಿ ದೆಹಲಿಯ ಎಲ್ಲಾ ಸರ್ಕಾರಿ ಶಾಲೆಗಳಿಗೆಶನಿವಾರ ರಜೆ ನೀಡಲಾಗಿತ್ತು.

ದೆಹಲಿಯನ್ನು ಕಸದ ದಿಬ್ಬ ಮಾಡಿದ್ದ ಬಿಜೆಪಿ:‘ಎಂಸಿಡಿಯಲ್ಲಿ 15 ವರ್ಷಗಳ ಕಾಲ ಆಡಳಿತ ನಡೆಸಿದ್ದ ಬಿಜೆಪಿಯು ರಾಷ್ಟ್ರ ರಾಜಧಾನಿಯನ್ನು ಕಸದ ದಿಬ್ಬವನ್ನಾಗಿ ಮಾಡಿತ್ತು’ ಎಂದು ಆರೋಪಿಸಿರುವ ದೆಹಲಿ ಉಪಮುಖ್ಯಮಂತ್ರಿ ಮನೀಷ್‌ ಸಿಸೋಡಿಯಾ, ‘ಎಂಸಿಡಿ ಚುನಾವಣೆಯಲ್ಲೂ ಜನರು ಎಎಪಿಯನ್ನೇ ಆಯ್ಕೆ ಮಾಡಲಿದ್ದಾರೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.