ADVERTISEMENT

ಕೃಷಿಕರೇತರು ಕೃಷಿಕರನ್ನು ಬೆಂಬಲಿಸುವ ಸಮಯ ಬಂದಿದೆ

ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ಖ್ಯಾತ ಪತ್ರಕರ್ತ ಪಿ.ಸಾಯಿನಾಥ್

ಪಿಟಿಐ
Published 3 ಡಿಸೆಂಬರ್ 2020, 7:40 IST
Last Updated 3 ಡಿಸೆಂಬರ್ 2020, 7:40 IST
ಪಿ.ಸಾಯಿನಾಥ್
ಪಿ.ಸಾಯಿನಾಥ್   

ನವದೆಹಲಿ: ‘ಕೇಂದ್ರ ನೂತನ ಕೃಷಿ ಕಾಯ್ದೆಗಳ ರದ್ದುಗೊಳಿಸುವಂತೆ ಆಗ್ರಹಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಸಮಾಜದಲ್ಲಿರುವ ಕೃಷಿಕರೇತರ ವರ್ಗದವರು ಬೆಂಬಲಿಸಬೇಕಾದ ಸಮಯ ಬಂದಿದೆ‘ ಎಂದು ಖ್ಯಾತ ಪತ್ರಕರ್ತ ಪಿ.ಸಾಯಿನಾಥ್ ಅಭಿಪ್ರಾಯಪಟ್ಟಿದ್ದಾರೆ.

ಕೊರೊನಾ ಸಾಂಕ್ರಾಮಿಕದ ಸಮಯದಲ್ಲಿ ಕೃಷಿ ಕಾಯ್ದೆಗಳನ್ನು ಜಾರಿಗೊಳಿಸಿದರೆ, ಯಾರೂ ವಿರೋಧಿಸಲು ಸಾಧ್ಯವಿಲ್ಲ. ಪ್ರತಿಭಟನೆ ನಡೆಸಲು ಆಗುವುದಿಲ್ಲ ಎಂಬ ತಪ್ಪು ಲೆಕ್ಕಾಚಾರ ಮಾಡಿ, ಈ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿತು ಎಂದು ಸಾಯಿನಾಥ್ ಪ್ರತಿಪಾದಿಸಿದರು.

ರೈತ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸುವ ಹಿನ್ನೆಲೆಯಲ್ಲಿ ವಿವಿಧ ನಾಗರಿಕ ಸಂಘಟನೆಗಳು ಆಯೋಜಿಸಿದ್ದ ವರ್ಚುವಲ್‌ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಲಕ್ಷಾಂತರ ಕಾರ್ಮಿಕರು, ತಮ್ಮ ಕಾರ್ಮಿಕ ಸಂಘಟನೆಗಳು ಮೂಲಕ ಈಗಾಗಲೇ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ. ಈಗ ಸಮಾಜದಲ್ಲಿರುವ ಕೃಷಿಕರೇತರ ವರ್ಗದವರು ರೈತರನ್ನು ಬೆಂಬಲಿಸುವ ಸಮಯ ಬಂದಿದೆ‘ ಎಂದು ಹೇಳಿದರು.

ADVERTISEMENT

ಮೂರು ನೂತನ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಹರಿಯಾಣ ಮತ್ತು ಉತ್ತರ ಪ್ರದೇಶ ರಾಜ್ಯದ ನೂರಾರು ರೈತರು ದೆಹಲಿಯ ಗಡಿಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹೊಸ ಕಾಯ್ದೆಗಳು ಕನಿಷ್ಠ ಬೆಂಬಲ ಬೆಲೆ ನೀತಿಯನ್ನು ತೆಗೆದು ಹಾಕಲು ದಾರಿ ಮಾಡಿಕೊಡುತ್ತವೆ. ಈ ಮೂಲಕ ರೈತರನ್ನು ಕಾರ್ಪೊರೇಟ್ ಕಂಪನಿಗಳ ಅಡಿಯಾಳಾಗಿಸಲು ದಾರಿ ಮಾಡಿ ಕೊಡುತ್ತವೆ‘ ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಸಮಾಜದಲ್ಲಿರುವ ಕೃಷಿಕರೇತರ ವರ್ಗದವರು ‘ರೈತರ ಬೆನ್ನಿಗೆ ನಾವು ನಿಂತಿದ್ದೇವೆ‘ ಎಂದು ಹೇಳಬೇಕು‘ ಎಂದು ಸಾಯಿನಾಥ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.