
ಅಮರಾವತಿ: ತಿರುಪತಿ ಲಡ್ಡು ಪ್ರಸಾದದಲ್ಲಿ ಕಲಬೆರಕೆ ತುಪ್ಪ ಬಳಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿ ಕೇಂದ್ರಿಯ ತನಿಖಾ ಸಂಸ್ಥೆ (ಸಿಬಿಐ) ತನಿಖೆಯನ್ನು ಪೂರ್ಣಗೊಳಿಸಿದೆ.
ಪ್ರಕರಣದಲ್ಲಿ ತುಪ್ಪ ಪೂರೈಕೆದಾರರು, ಟಿಟಿಡಿಯ ನೌಕರರು ಹಾಗೂ ಇತರರನ್ನು ಆರೋಪಿಗಳು ಎಂದು ಸ್ಥಳೀಯ ನ್ಯಾಯಾಲಯಕ್ಕೆ ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದೆ.
‘ನೆಲ್ಲೂರಿನ ಎಸಿಬಿ ನ್ಯಾಯಾಲಯಕ್ಕೆ ಶುಕ್ರವಾರ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ’ ಎಂದು ಮೂಲಗಳು ತಿಳಿಸಿದೆ.
ಆರೋಪಿಗಳು ಹಸುವಿನ ಶುದ್ಧ ತುಪ್ಪದ ಬದಲಿಗೆ ಕೋಲ್ಕತ್ತದ ಬ್ಯೂಜ್ ಬಡ್ಜ್ ಕಂಪನಿಯಿಂದ ಪಡೆದ ಪಾಮ್ ಆಯಿಲ್, ಪಾಮ್ ಕರ್ನಲ್ ಎಣ್ಣೆ ಮತ್ತು ಪಾಮೊಲಿನ್‌ನಂತಹ ಕಲಬೆರಕೆ ವಸ್ತುಗಳನ್ನು ಬಳಸಿದ್ದಾರೆ. ಈ ವಸ್ತುಗಳನ್ನು ಅಲ್ಪ ಪ್ರಮಾಣದ ಶುದ್ಧ ತುಪ್ಪ, ಬೀಟಾ–ಕೆರೋಟಿನ್, ಅಸಿಟಿಕ್ ಆ್ಯಸಿಡ್ ಎಸ್ಟರ್ ಮತ್ತು ಸಿಂಥೆಟಿಕ್ ತುಪ್ಪದ ಸುವಾಸನೆಯಂತಹ ರಾಸಾಯನಿಕಗಳೊಂದಿಗೆ ಮಿಶ್ರಣ ಮಾಡಲಾಗುತ್ತಿತ್ತು ಎಂದು ತನಿಖೆಯಲ್ಲಿ ಗೊತ್ತಾಗಿದೆ.
ಉತ್ತರಾಖಂಡದ ಭೋಲೆ ಬಾಬಾ ಸಾವಯವ ಡೇರಿ ನಿರ್ದೇಶಕರಾದ ಪೋಮಿಲ್ ಜೈನ್ ಮತ್ತು ವಿಪಿನ್ ಜೈನ್ ಅವರನ್ನು ಪ್ರಕರಣದ ಪ್ರಮುಖ ಆರೋಪಿಗಳನ್ನಾಗಿಸಲಾಗಿದೆ. ದೋಷಾರೋಪ ಪಟ್ಟಿಯಲ್ಲಿ 36 ಆರೋಪಿಗಳ ಹೆಸರನ್ನು ಪಟ್ಟಿ ಮಾಡಲಾಗಿದ್ದು, ಅಷ್ಟೂ ಜನರನ್ನು ಬಂಧಿಸಲಾಗಿದೆ. ಈ ಪೈಕಿ ಮೂವರು ಜಾಮೀನು ಲಭ್ಯವಾಗದೆ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.