ADVERTISEMENT

ತಿರುಪತಿ ಲಡ್ಡು ಪ್ರಸಾದ ತುಪ್ಪದಲ್ಲಿ ಕಲಬೆರಕೆ: ವ್ಯವಸ್ಥೆ ಸುಧಾರಿಸಲು ಸಮಿತಿ

ಪಿಟಿಐ
Published 5 ಫೆಬ್ರುವರಿ 2026, 13:43 IST
Last Updated 5 ಫೆಬ್ರುವರಿ 2026, 13:43 IST
ತಿರುಪತಿ ಲಾಡು
ತಿರುಪತಿ ಲಾಡು   

ಅಮರಾವತಿ: ‘ತಿರುಪತಿ ಲಡ್ಡು ಪ್ರಸಾದ ತಯಾರಿಕೆಗೆ ಕಲಬೆರಕೆ ತುಪ್ಪ ಬಳಸಿದ್ದು, ದೇವರ ವಿಷಯದಲ್ಲಿ ಮಾಡಿದ ಅತಿ ದೊಡ್ಡ ಪಾಪದ ಕೆಲಸವಾಗಿದೆ. ವಿಶೇಷ ತನಿಖಾ ತಂಡದ (ಎಸ್‌ಐಟಿ) ವರದಿ ಆಧರಿಸಿ ತಿರುಪತಿ ತಿರುಮಲ ದೇವಸ್ಥಾನದ (ಟಿಟಿಡಿ) ಆಡಳಿತ ವ್ಯವಸ್ಥೆ ಸರಿಪಡಿಸಲು ಏಕವ್ಯಕ್ತಿ ಸಮಿತಿ ರಚಿಸಲಾಗುವುದು’ ಎಂದು ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್‌.ಚಂದ್ರಬಾಬು ನಾಯ್ಡು ತಿಳಿಸಿದ್ದಾರೆ.

‘ವೈಎಸ್‌ಆರ್‌ಸಿಪಿ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ 2022ರಲ್ಲಿ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ (ಸಿಎಫ್‌ಟಿಆರ್‌ಐ) ನೀಡಿದ ವರದಿ ಪ್ರಕಾರ ಲಡ್ಡು ಪ್ರಸಾದ ತಯಾರಿಕೆಗೆ ಕಲಬೆರಕೆ ತುಪ್ಪ ಬಳಸಿರುವುದನ್ನು ಖಚಿತಪಡಿಸಿದೆ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘2024ರಲ್ಲಿ ನಾನು ಮುಖ್ಯಮಂತ್ರಿಯಾದ ಬಳಿಕ ಟಿಟಿಡಿಯಲ್ಲಿನ ಅವ್ಯವಸ್ಥೆಯನ್ನು ಸರಿಪಡಿಸುವ ಕೆಲಸ ಶುರು ಮಾಡಿದೆ. ಲಡ್ಡು ತಯಾರಿಕೆಗೆ ಬಳಸಿದ್ದ ತುಪ್ಪದ ಮಾದರಿಗಳನ್ನು ರಾಷ್ಟ್ರೀಯ ಡೇರಿ ಅಭಿವೃದ್ಧಿ ಸಂಸ್ಥೆಯ ಪ್ರಯೋಗಾಲಯಕ್ಕೆ (ಎನ್‌ಡಿಡಿಬಿ)ಗೂ ಕಳುಹಿಸಿ ಪರೀಕ್ಷೆ ನಡೆಸಿದ್ದ ವೇಳೆ ಪ‍್ರಾಣಿಯ ಕೊಬ್ಬು ಇರುವುದು ಕಂಡುಬಂದಿತ್ತು. ನಾನು ಕೂಡ ಅದನ್ನೇ ಹೇಳಿದ್ದೆ. ಫೆಬ್ರುವರಿ 5ರಂದು ಎಸ್‌ಐಟಿಯು ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಆ ಪ್ರಕಾರ, ಲಡ್ಡುಗೆ ಬಳಸಿದ ತುಪ್ಪದಲ್ಲಿ ಪಾಮೋಲಿನ್‌ ಹಾಗೂ ರಾಸಾಯನಿಕ ವಸ್ತುಗಳನ್ನು ಸೇರಿಸಿರುವುದು ದೃಢಪಟ್ಟಿದೆ’ ಎಂದು ಹೇಳಿದ್ದಾರೆ. 

ADVERTISEMENT

‘ಎಸ್‌ಐಟಿಯು ವರದಿ ಸಲ್ಲಿಸಿದ್ದು, ಕೆಲವರ ವಿರುದ್ಧ ಆಡಳಿತಾತ್ಮಕ ಕ್ರಮಗಳನ್ನು ಕೈಗೊಳ್ಳಲಾಗುವುದು. ವ್ಯವಸ್ಥೆಯಲ್ಲಿನ ದೋಷ ಹಾಗೂ ಸರಿಪಡಿಸುವ ಕುರಿತಂತೆ ಏಕವ್ಯಕ್ತಿ ಸಮಿತಿ ರಚಿಸಲಾಗುವುದು. ಹೆಚ್ಚುವರಿ ಮಾಹಿತಿಗಳು ಸಿಕ್ಕರೆ, ನ್ಯಾಯಾಲಯಕ್ಕೆ ಈ ಮಾಹಿತಿ ಸಲ್ಲಿಸಲಾಗುವುದು’ ಎಂದು ನಾಯ್ಡು ತಿಳಿಸಿದ್ದಾರೆ.

‘ಹಿಂದಿನ ಜಗನ್‌ ಮೋಹನ್‌ ರೆಡ್ಡಿ ನೇತೃತ್ವದ ಸರ್ಕಾರವು ತುಪ್ಪ ಕಲಬೆರಕೆ ಮಾಡುವ ಮೂಲಕ ಪಾಪದ ಕೆಲಸ ಮಾಡಿದ್ದು, ಹಿಂದಿನ ಸರ್ಕಾರದಲ್ಲಿ ಹಲವು ದೇವಾಲಯಗಳ ಮೇಲೂ ದಾಳಿ ನಡೆಸಲಾಗಿತ್ತು’ ಎಂದು ಹೇಳಿದ್ದಾರೆ.

ಚಂದ್ರಬಾಬುಸ ನಾಯ್ಡು

*2024ರ ಸೆಪ್ಟೆಂಬರ್‌ನಲ್ಲಿ ಬೆಳಕಿಗೆ ಬಂದಿದ್ದ ಕಲಬೆರಕೆ ಪ್ರಕರಣ

*ಲಡ್ಡು ಪ್ರಸಾದ ತಯಾರಿಕೆಗೆ ಕಲಬೆರಕೆ ತುಪ‍್ಪ ಬಳಕೆ

*ತನಿಖೆ ನಡೆಸಿದ ಎಸ್‌ಐಟಿ

ವೆಂಕಟೇಶ್ವರ ಸ್ವಾಮಿ ನಮ್ಮ ಮನೆ ದೇವರು. 2003ರಲ್ಲಿ ನಕ್ಸಲರು ನೆಲಬಾಂಬ್‌ ಸ್ಫೋಟಿಸಿ ನನ್ನ ಮೇಲೆ ದಾಳಿ ನಡೆಸಿದ ವೇಳೆ ದೇವರೇ ನನ್ನನ್ನು ಕಾಪಾಡಿದ್ದ
ಚಂದ್ರಬಾಬು ನಾಯ್ಡು ಆಂಧ್ರಪ್ರದೇಶ ಮುಖ್ಯಮಂತ್ರಿ

ಸಿಬಿಐ ಕ್ಲೀನ್‌ಚಿಟ್‌ ನೀಡಿಲ್ಲ: ಪವನ್‌ ಕಲ್ಯಾಣ್‌

‘ಲಡ್ಡು ಪ್ರಸಾದದ ಕಲಬೆರಕೆಗೆ ಸಂಬಂಧಿಸಿದಂತೆ ಹಿಂದಿನ ವೈಎಸ್‌ಆರ್‌ಸಿಪಿ ಸರ್ಕಾರಕ್ಕೆ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ)ಯು ಕ್ಲೀನ್‌ಚಿಟ್‌ ನೀಡಿಲ್ಲ’ ಎಂದು ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿ ಪವನ್‌ ಕಲ್ಯಾಣ್‌ ತಿಳಿಸಿದ್ದಾರೆ. ಮುಖ್ಯಮಂತ್ರಿ ನಾಯ್ಡು ಜೊತೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ನಂಬಿಕೆಯು ಅತ್ಯಂತ ಸೂಕ್ಷ್ಮ ವಿಷಯವಾಗಿದ್ದು ಈ ವಿಚಾರ ಮಾತನಾಡುವ ವೇಳೆ ಎಚ್ಚರಿಕೆ ವಹಿಸುತ್ತೇವೆ’ ಎಂದು ಹೇಳಿದ್ದಾರೆ. ‘ಈ ವಿಚಾರದಲ್ಲಿ ವೈಎಸ್‌ಆರ್‌ಸಿಪಿಗೆ ಸಿಬಿಐ ಕ್ಲೀನ್‌ಚಿಟ್‌ ನೀಡಿಲ್ಲ. ವಿರೋಧ ಪಕ್ಷದ ನಾಯಕರು ಬಾಯಿಗೆ ಬಂದಂತೆ ಹೇಳಿಕೆ ನೀಡುತ್ತಿದ್ದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಿದ್ದಾರೆ’ ಎಂದು ತಿಳಿಸಿದ್ದಾರೆ. ‘ಜನರ ಮುಂದೆ ಸತ್ಯವನ್ನು ಮುಂದಿಟ್ಟಿದ್ದೇವೆ. ಅದನ್ನು ತಿಳಿಸದಿದ್ದರೆ ನಮ್ಮದೇ ತಪ್ಪಾಗುತ್ತದೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.