ADVERTISEMENT

ತಿರುಪತಿಗೆ ರೇಷ್ಮೆ ಬದಲು ಪಾಲಿಸ್ಟರ್ ಶಲ್ಯ ಸರಬರಾಜು: ಬೃಹತ್ ಹಗರಣ ಬಯಲು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಡಿಸೆಂಬರ್ 2025, 9:59 IST
Last Updated 10 ಡಿಸೆಂಬರ್ 2025, 9:59 IST
Venugopala K.
   Venugopala K.

ಹೈದರಾಬಾದ್: ಆಂಧ್ರಪ್ರದೇಶದ ಪ್ರಸಿದ್ಧ ತಿರುಪತಿ ತಿರುಮಲ ದೇವಸ್ಥಾನಕ್ಕೆ ರೇಷ್ಮೆ ಶಲ್ಯದ ಹೆಸರಿನಲ್ಲಿ ಪಾಲಿಸ್ಟರ್ ಶಲ್ಯಗಳನ್ನು ಪೂರೈಕೆ ಮಾಡಿರುವ ₹54 ಕೋಟಿಯ ಹಗರಣ ಬೆಳಕಿಗೆ ಬಂದಿದೆ.

2015ರಿಂದ 2025ರವರೆಗೆ ಈ ಹಗರಣ ನಡೆದಿದ್ದು, ದೇವಸ್ಥಾನದ ಆಡಳಿತವನ್ನು ನಿರ್ವಹಿಸುವ ತಿರುಮಲ ತಿರುಪತಿ ದೇವಸ್ಥಾನಮ್ಸ್(ಟಿಟಿಡಿ) ಟ್ರಸ್ಟ್ ಈ ಹಗರಣದಿಂದ ತಲ್ಲಣಗೊಂಡಿದೆ.

ಗುತ್ತಿಗೆದಾರರೊಬ್ಬರು ಟೆಂಡರ್ ದಾಖಲೆಗಳಲ್ಲಿ ಶುದ್ಧ ಮಲ್ಬೆರಿ ರೇಷ್ಮೆ ಉತ್ಪನ್ನಗಳೆಂದು ಉಲ್ಲೇಖಿಸಿ ಬಿಲ್ ಪಡೆದಿದ್ದು, ಪಾಲಿಸ್ಟರ್ ಶಲ್ಯಗಳನ್ನು ನಿರಂತರವಾಗಿ ಪೂರೈಸಿದ್ದಾರೆ ಎಂದು ಆಂತರಿಕ ಜಾಗೃತ ದಳದ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ADVERTISEMENT

ಶಲ್ಯಗಳ ಕುರಿತಂತೆ ಟಿಟಿಡಿ ಮಂಡಳಿಯ ಅಧ್ಯಕ್ಷ ಬಿ.ಆರ್. ನಾಯ್ಡು ಅನುಮಾನ ವ್ಯಕ್ತಪಡಿಸಿದ ನಂತರ ನಡೆದ ತನಿಖೆಯಲ್ಲಿ ಸತ್ಯ ಹೊರಬಿದ್ದಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಪ್ರಮುಖ ದಾನಿಗಳಿಗೆ ನೀಡಲಾಗುವ ಮತ್ತು ವೇದಾಶಿರ್ವಾಚನದಂತಹ ದೇವಾಲಯದ ಆಚರಣೆಗಳಲ್ಲಿ ಬಳಸಲಾಗುವ ಶಲ್ಯಗಳು ಕಡ್ಡಾಯವಾಗಿ ಶುದ್ಧ ಮಲ್ಬೆರಿ ರೇಷ್ಮೆಯಿಂದ ತಯಾರಿಸಿರಬೇಕೆಂಬ ನಿಯಮವಿದ್ದರೂ ಗುತ್ತಿಗೆದಾರ ಅಗ್ಗದ ಪಾಲಿಸ್ಟರ್ ಉತ್ಪನ್ನಗಳನ್ನು ಪೂರೈಸಿದ್ದಾರೆ.

ಹತ್ತು ವರ್ಷಗಳ ಕಾಲ ಅಕ್ರಮ ನಡೆದಿವೆ ಎಂದು ಅಂದಾಜಿಸಲಾಗಿದೆ. ಇದರ ಪರಿಣಾಮವಾಗಿ ದೇವಾಲಯದ ಟ್ರಸ್ಟ್‌ಗೆ ₹54 ಕೋಟಿಗೂ ಹೆಚ್ಚು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

'ಸುಮಾರು ₹350 ಬೆಲೆಯ ಶಲ್ಯಕ್ಕೆ ₹1,300ರಂತೆ ಬಿಲ್ ಮಾಡಲಾಗುತ್ತಿತ್ತು. ಒಟ್ಟು ₹50 ಕೋಟಿಗೂ ಹೆಚ್ಚು ಮೌಲ್ಯದ ಹಗರಣ ನಡೆದಿದ್ದು, ಎಸಿಬಿ (ಭ್ರಷ್ಟಾಚಾರ ನಿಗ್ರಹ ದಳ) ತನಿಖೆಗೆ ಕೇಳಿದ್ದೇವೆ’ಎಂದು ಬಿ.ಆರ್. ನಾಯ್ಡು ಹೇಳಿದ್ದಾರೆ.

ಶಲ್ಯಗಳ ಮಾದರಿಗಳನ್ನು ಕೇಂದ್ರ ರೇಷ್ಮೆ ಮಂಡಳಿ(ಸಿಎಸ್‌ಬಿ) ಅಡಿಯಲ್ಲಿ ಬರುವ ಪ್ರಯೋಗಾಲಯ ಸೇರಿದಂತೆ ಎರಡು ಪ್ರಯೋಗಾಲಯಗಳಿಗೆ ವೈಜ್ಞಾನಿಕ ವಿಶ್ಲೇಷಣೆಗಾಗಿ ಕಳುಹಿಸಲಾಗಿತ್ತು. ಇದು ಪಾಲಿಸ್ಟರ್ ಶಲ್ಯ ಎಂದು ಎರಡೂ ಪರೀಕ್ಷೆಗಳು ದೃಢಪಡಿಸಿವೆ ಎಂದು ಅವರು ತಿಳಿಸಿದ್ದಾರೆ.

ಏನಿದು ಪ್ರಕರಣ?: 15 ಸಾವಿರ ಶಲ್ಯಗಳನ್ನು ಪೂರೈಸುವಂತೆ ನಗರಿ ಪಟ್ಟಣದ ವಿಆರ್‌ಎಸ್‌ ಎಕ್ಸ್‌ಪೋರ್ಟ್‌ನೊಂದಿಗೆ ಟಿಟಿಡಿ ಒಪ್ಪಂದ ಮಾಡಿಕೊಂಡಿತ್ತು. ಪ್ರತಿ ಶಲ್ಯಕ್ಕೆ ₹1,389.15 ದರ ನಿಗದಿಪಡಿಸಲಾಗಿತ್ತು. ವಿಆರ್‌ಎಸ್‌ ಎಕ್ಸ್‌ಪೋರ್ಟ್‌ ಸಂಸ್ಥೆಯು ತಿರುಮಲ ಫ್ಯಾಬ್ರಿಕ್ಸ್, ನಾನ್ನ ಕಾಟೇಜ್‌ ಮತ್ತು ವಿ.ಎಂ. ರಾಜಾ ಪವರ್‌ ಲೂಮ್‌ ಯೂನಿಟ್‌ ಸೇರಿದಂತೆ ಅನೇಕ ಸೋದರ ಕಂಪನಿಗಳನ್ನು ಹೊಂದಿದ್ದು, 2015ರಿಂದ 2025ರ ನಡುವೆ ಒಟ್ಟು ₹54,95,90,782 ಮೌಲ್ಯದ ಶಲ್ಯಗಳನ್ನು ಖರೀದಿಸಲಾಗಿದೆ. 

ಸೆಪ್ಟೆಂಬರ್‌ 16ರಂದು ಕೈಗೊಂಡ ನಿರ್ಣಯದ ಪ್ರಕಾರ, ದೇವಸ್ಥಾನಕ್ಕೆ ಸರಬರಾಜು ಮಾಡಲಾದ ಶಲ್ಯಗಳ ಗುಣಮಟ್ಟದ ಬಗ್ಗೆ ಸಮಗ್ರ ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಮುಖ್ಯ ಜಾಗೃತ ದಳದ ಅಧಿಕಾರಿ ಮತ್ತು ಭದ್ರತಾ ಅಧಿಕಾರಿಗೆ ಟಿಟಿಡಿ ಸೂಚಿಸಿತ್ತು. ಹೀಗಾಗಿ, ತಿರುಪತಿಯ ಗೋದಾಮಿನಲ್ಲಿರುವ ಹೊಸ ದಾಸ್ತಾನು ಮತ್ತು ತಿರುಮಲದ ವೈಭವೋತ್ಸವ ಮಂಟಪದಲ್ಲಿ ಲಭ್ಯವಿದ್ದ ಅನುಮೋದಿತ ಮಾದರಿಗಳನ್ನು ಗುಣಮಟ್ಟದ ಪರಿಶೀಲನೆಗಾಗಿ ಬೆಂಗಳೂರು ಮತ್ತು ಧರ್ಮಾವರಂ ಪ್ರಯೋಗಾಲಯಗಳಿಗೆ ಕಳುಹಿಸಲಾಗಿತ್ತು.

ಟೆಂಡರ್‌ನ ಷರತ್ತುಗಳನ್ನು ಉಲ್ಲಂಘಿಸಿರುವುದು ಈ ಮಾದರಿಗಳ ಪರಿಶೀಲನೆಯಿಂದ ಗೊತ್ತಾಗಿದೆ. ರೇಷ್ಮೆ ಶಲ್ಯಗಳೆಂದು ಕರೆಯಲಾಗುವ ಇವುಗಳಲ್ಲಿ ರೇಷ್ಮೆ ಹೊಲೊಗ್ರಾಮ್‌ಗಳು ಸಹ ಕಂಡುಬಂದಿಲ್ಲ.

ವಿಶೇಷವೆಂದರೆ, ಈ ಶಲ್ಯದ ಮಾದರಿಗಳನ್ನು ಈ ಹಿಂದೆ ಕಾಂಚೀಪುರದ ಸಿಎಸ್‌ಬಿ ಕಚೇರಿ ಅನುಮೋದಿಸಿತ್ತು. ಆದರೆ, ಬೆಂಗಳೂರು ಮತ್ತು ಧರ್ಮಾವರಂ ಸಿಎಸ್‌ಬಿ ಪ್ರಯೋಗಾಲಯಗಳಲ್ಲಿ ಪರೀಕ್ಷಿಸಿದ ಮಾದರಿಗಳು ರೇಷ್ಮೆ ಗುಣಮಟ್ಟದ ಪರೀಕ್ಷೆಯಲ್ಲಿ ವಿಫಲವಾಗಿವೆ.

ಎಸಿಬಿ ತನಿಖೆಗೆ ಟಿಟಿಡಿ ಮನವಿ ಟಿಟಿಡಿ

ಗೋದಾಮಿನ ಅಧಿಕಾರಿಯೊಬ್ಬರು ಕಳುಹಿಸಿದ್ದ ಮಾದರಿಯನ್ನು ಬದಲಿಸಿರಬಹುದು ಅಥವಾ ಕಾಂಚೀಪುರದ ಪ್ರಯೋಗಾಲಯದಲ್ಲಿನ ಅನುಮೋದನೆ ಪ್ರಕ್ರಿಯೆ ಮೇಲೆ ಪ್ರಭಾವ ಬೀರಿರಬಹುದು ಎಂಬುದನ್ನು ಗಮನಿಸಿದ್ದ ಜಾಗೃತ ದಳವು ಸಂಭಾವ್ಯ ಅಕ್ರಮದ ಬಗ್ಗೆ ಸುಳಿವು ನೀಡಿತ್ತು. ಜಾಗೃತ ದಳ ಸಲ್ಲಿಸಿದ್ದ ವರದಿಯನ್ನು ಇತ್ತೀಚೆಗೆ ಟಿಟಿಡಿ ಮಂಡಳಿಯ ಮುಂದೆ ಇಡಲಾಗಿತ್ತು. ಶಲ್ಯ ಖರೀದಿ ಹಗರಣದ ಬಗ್ಗೆ ಭ್ರಷ್ಟಾಚಾರ ನಿಗ್ರಹ ದಳದಿಂದ (ಎಸಿಬಿ) ಸಮಗ್ರ ತನಿಖೆ ನಡೆಸುವಂತೆ ರಾಜ್ಯ ಸರ್ಕಾರವನ್ನು ಟಿಟಿಡಿ ಕೋರಿದೆ. ಟೆಂಡರ್‌ ನೀಡಿದವರು ಟಿಟಿಡಿಯನ್ನು ವಂಚಿಸಿದ್ದಾರೆ. ರೇಷ್ಮೆ ಬದಲಿಗೆ ಅಗ್ಗದ ಪಾಲಿಸ್ಟರ್‌ ಶಲ್ಯಗಳನ್ನು ಪೂರೈಸುವ ಮೂಲಕ ಟೆಂಡರ್‌ನ ಷರತ್ತುಗಳನ್ನು ಉಲ್ಲಂಘಿಸಲಾಗಿದೆ. ಇದರಿಂದಾಗಿ ಟಿಟಿಡಿ ಖಜಾನೆಗೆ ಆರ್ಥಿಕ ನಷ್ಟವಾಗಿದೆ. ಪೂರೈಕೆದಾರರ ಮತ್ತು ಪ್ರಕರಣದಲ್ಲಿ ಭಾಗಿಯಾಗಿರುವ ಇತರರ ವಿರುದ್ಧ ಕ್ರಿಮಿನಲ್‌ ಕ್ರಮ ಕೈಗೊಳ್ಳಬೇಕು ಎಂದು ಟಿಟಿಡಿ ಮಂಡಳಿ ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.