ADVERTISEMENT

ಯುವಕರು ಬಿಜೆಪಿ ಕಚೇರಿಯ ದ್ವಾರಪಾಲಕರಲ್ಲ: ವಿಜಯವರ್ಗೀಯಗೆ ಟಿಎಂಸಿ ತಿರುಗೇಟು

ಪಿಟಿಐ
Published 20 ಜೂನ್ 2022, 5:46 IST
Last Updated 20 ಜೂನ್ 2022, 5:46 IST
ಕೈಲಾಶ್ ವಿಜಯವರ್ಗೀಯ - ಪಿಟಿಐ ಚಿತ್ರ
ಕೈಲಾಶ್ ವಿಜಯವರ್ಗೀಯ - ಪಿಟಿಐ ಚಿತ್ರ   

ಕೋಲ್ಕತ್ತ:ಬಿಜೆಪಿ ಕಚೇರಿಯಲ್ಲಿ ಭದ್ರತಾ ಸಿಬ್ಬಂದಿ ನೇಮಕ ಮಾಡಿಕೊಳ್ಳುವ ಪ್ರಸಂಗ ಬಂದರೆ ‘ಅಗ್ನಿವೀರ’ರಿಗೆ ಆದ್ಯತೆ ನೀಡುತ್ತೇನೆ ಎಂಬ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ ಹೇಳಿಕೆಗೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಹಾಗೂ ಸಿಪಿಐ(ಎಂ) ಆಕ್ರೋಶ ವ್ಯಕ್ತಪಡಿಸಿವೆ.

ಈ ರೀತಿಯ ಹೇಳಿಕೆ ನೀಡುವ ಮೂಲಕ ದೇಶದ ಯೋಧರ ಶೌರ್ಯಕ್ಕೆ ವಿಜಯವರ್ಗೀಯ ಅವಮಾನ ಮಾಡಿದ್ದಾರೆ. ದೇಶದ ಯುವಕರು ಬಿಜೆಪಿ ಕಚೇರಿಗಳ ಕಾವಲುಗಾರರಾಗುವುದು ಸಾಧ್ಯವಿಲ್ಲ ಎಂದು ಟಿಎಂಸಿ ಹೇಳಿದೆ.

ಈ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿಯವರು ಸ್ಪಷ್ಟನೆ ನೀಡಬೇಕು ಎಂದೂ ಟಿಎಂಸಿ ಆಗ್ರಹಿಸಿದೆ.

‘ಯುವ ಶಕ್ತಿಯು ದೇಶ ಸೇವೆ ಮಾಡಲು ಬಯಸುತ್ತದೆ. ‘ಅಗ್ನಿವೀರ’ರಿಗೆ ಸಂಬಂಧಿಸಿದ ಬಿಜೆಪಿ ನಾಯಕರ ಹೇಳಿಕೆಯು ಕ್ಷುಲ್ಲಕವಾದದ್ದೇ ಎಂಬುದನ್ನು ಪ್ರಧಾನಿ ಸ್ಪಷ್ಟಪಡಿಸಬೇಕು’ ಎಂದು ಟಿಎಂಸಿ ಒತ್ತಾಯಿಸಿದೆ.

ವಿಜಯವರ್ಗೀಯ ಹೇಳಿಕೆಯು ಬಿಜೆಪಿಯ ನೈಜ ಮುಖವನ್ನು ಅನಾವರಣಗೊಳಿಸಿದೆ ಎಂದು ಟಿಎಂಸಿ ವಕ್ತಾರ ಕುನಾಲ್ ಘೋಷ್ ಹೇಳಿದ್ದಾರೆ.

ವಿಜಯವರ್ಗೀಯ ದೇಶದ ಮಹತ್ವಾಕಾಂಕ್ಷಿ ಯುವಕರ ಮತ್ತು ಸಶಸ್ತ್ರ ಪಡೆಗಳ ಶೌರ್ಯಕ್ಕೆ ಅವಮಾನ ಮಾಡಿದ್ದಾರೆ ಎಂದು ಸಿಪಿಐ(ಎಂ) ಕೇಂದ್ರ ಸಮಿತಿ ಸದಸ್ಯ ಸುಜನ್ ಚಕ್ರವರ್ತಿ ಟೀಕಿಸಿದ್ದಾರೆ. ವಿಜಯವರ್ಗೀಯರನ್ನು ಪಕ್ಷದಿಂದ ಉಚ್ಚಾಟಿಸಬೇಕು ಎಂದು ಅವರು ಬಿಜೆಪಿಯನ್ನು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.