ADVERTISEMENT

ಸರ್ಕಾರದಿಂದ ಹೊರಬಂದ ಟಿಎಂಸಿ ಪ್ರಭಾವಿ ನಾಯಕ: ಮಂತ್ರಿಗಿರಿಗೆ 'ಅಧಿಕಾರಿ' ರಾಜೀನಾಮೆ

ಪಿಟಿಐ
Published 27 ನವೆಂಬರ್ 2020, 10:30 IST
Last Updated 27 ನವೆಂಬರ್ 2020, 10:30 IST
ಸುವೇಂದು ಅಧಿಕಾರಿ
ಸುವೇಂದು ಅಧಿಕಾರಿ   

ಕೋಲ್ಕತಾ: ಪಕ್ಷದ ನಾಯಕತ್ವದೊಂದಿಗೆ ಭಿನ್ನಾಭಿಪ್ರಾಯ ಹೊಂದಿರುವ ತೃಣಮೂಲ ಕಾಂಗ್ರೆಸ್‌ನ ಹಿರಿಯ ಮುಖಂಡ ಸುವೇಂದು ಅಧಿಕಾರಿ, ತಾವು ಹೊಂದಿದ್ದ ಸಾರಿಗೆ ಸಚಿವ ಸ್ಥಾನಕ್ಕೆ ಶುಕ್ರವಾರ ರಾಜೀನಾಮೆ ನೀಡಿದ್ದಾರೆ.

ಅವರ ರಾಜಕೀಯದ ಮುಂದಿನ ಹೆಜ್ಜೆಗಳ ಕುರಿತು ಪಶ್ಚಿಮ ಬಂಗಾಳದಲ್ಲಿ ಊಹಾಪೋಹಗಳು ಮನೆ ಮಾಡಿರುವ ನಡುವೆಯೇ ರಾಜೀನಾಮೆ ಬೆಳವಣಿಗೆಯೂ ನಡೆದುಹೋಗಿದೆ.

2011 ರಲ್ಲಿ ಮಮತಾ ಬ್ಯಾನರ್ಜಿ ಅವರು ಅಧಿಕಾರಕ್ಕೇರಲು ಕಾರಣವಾಗಿದ್ದ 'ನಂದಿಗ್ರಾಮ ಚಳವಳಿಯ' ಪ್ರಮುಖ ನಾಯಕರಾಗಿದ್ದ ಸುವೇಂದು ಅಧಿಕಾರಿ ತಮ್ಮ ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿಗೆ ಫ್ಯಾಕ್ಸ್ ಮೂಲಕ ರವಾನಿಸಿದ್ದಾರೆ. ನಂತರ ಅವರು ರಾಜ್ಯಪಾಲ ಜಗದೀಪ್ ಧಂಖರ್ ಅವರಿಗೆ ಇ-ಮೇಲ್ ಮೂಲಕ ಕಳುಹಿಸಿದ್ದಾರೆ.

ADVERTISEMENT

'ನಾನು ನನ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಅದರ ಅಂಗೀಕಾರಕ್ಕೆ ಕ್ರಮ ತೆಗೆದುಕೊಳ್ಳಬಹುದು,' ಎಂದು ಅವರು ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇದಕ್ಕೂ ಹಿಂದೆ 'ಹೂಗ್ಲಿ ನದಿ ಸೇತುವೆ ಆಯೋಗ'ದ ಅಧ್ಯಕ್ಷ ಸ್ಥಾನಕ್ಕೆ ಅವರು ಬುಧವಾರ ರಾಜೀನಾಮೆ ನೀಡಿದ್ದರು.

ಅಧಿಕಾರಿ ಅವರ ಆಪ್ತ ಮೂಲಗಳ ಪ್ರಕಾರ ಅವರು ಪಕ್ಷದ ವರಿಷ್ಠರ ವಿಚಾರದಲ್ಲಿ ಅಸಮಾದಾನ ಹೊಂದಿದ್ದಾರೆ ಎನ್ನಲಾಗಿದೆ. ಪಕ್ಷದ ಬಾವುಟವಿಲ್ಲದೆ, ಬೆಂಬಲಿಗರ ಸಮಾವೇಶ, ರ್ಯಾಲಿಗಳನ್ನು ಆಯೋಜಿಸಿದ್ದ ಸುವೇಂದು ಅಧಿಕಾರಿ ಅವರ ಮನವೊಲಿಸಲು ಪಕ್ಷವೂ ಪ್ರಯತ್ನ ನಡೆಸಿತ್ತು. ಸಂಸದರಾದ ಸೌಗತ ರಾಯ್‌, ಸುದೀಪ್‌ ಬಂಡೋಪಧ್ಯಾಯ ಅವರನ್ನು ಈ ಕೆಲಸಕ್ಕೆ ನಿಯೋಜಿಸಲಾಗಿತ್ತು. ಆದರೆ, ಅದ್ಯಾವುದೂ ಪ್ರಯೋಜನಕ್ಕೆ ಬಂದಿಲ್ಲ.

ಈ ರಾಜೀನಾಮೆ ಬಗ್ಗೆ ತೃಣಮೂಲ ಕಾಂಗ್ರೆಸ್ ಮೌನವಾಗಿದೆ. 'ಇವತ್ತಿನ ಈ ರಾಜೀನಾಮೆಯು ಟಿಎಂಸಿ ಪಕ್ಷದ ವರಿಷ್ಠರ ವಿರುದ್ಧದ ನಾಯಕರ ಕೋಪದ ಪ್ರತಿಬಿಂಬವಾಗಿದೆ,' ಎಂದು ಬಿಜೆಪಿ ಹೇಳಿದೆ. ಅಧಿಕಾರಿ ಬಿಜೆಪಿ ಸೇರುತ್ತಾರೆ ಎಂಬ ವದಂತಿಗಳ ಕುರಿತು ಪ್ರತಿಕ್ರಿಯಿಸಲು ಬಿಜೆಪಿ ನಾಯಕ ವಿಜಯ ವರ್ಗೀಯ ಅವರು ನಿರಾಕರಿಸಿದ್ದಾರೆ.

ಪೂರ್ವ ಮಿಡ್ನಾಪುರದ ತಮ್ಮ ಸ್ವಂತ ಜಿಲ್ಲೆಯಯನ್ನೂ ಹೊರತುಪಡಿಸಿ, ಅಧಿಕಾರಿ ಅವರು ಪಶ್ಚಿಮ ಮಿಡ್ನಾಪುರ, ಬಂಕುರಾ, ಪುರುಲಿಯಾ, ಜಾರ್‌ಗ್ರಾಮ್‌ ಮತ್ತು ಬುಡಕಟ್ಟು ಜನರ ಪ್ರಾಬಲ್ಯವಿರುವ ಜಂಗಲ್‌ ಮಹಲ್‌ನ ಪ್ರದೇಶವಾದ ಬಿರ್ಭುಮ್‌ ಸೇರಿದಂತೆ ಕನಿಷ್ಠ 35-40 ಕ್ಷೇತ್ರಗಳ ಮೇಲೆ ತಮ್ಮ ಪ್ರಭಾವ ಹೊಂದಿದ್ದಾರೆ.

294 ಸದಸ್ಯ ಬಲದ ಪಶ್ಚಿಮ ಬಂಗಾಳ ವಿಧಾನಸಭೆಗೆ ಮುಂದಿನ ವರ್ಷ ಏಪ್ರಿಲ್-ಮೇ ತಿಂಗಳಲ್ಲಿ ಚುನಾವಣೆ ನಡೆಯುವ ಸಾಧ್ಯತೆಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.