ಕೋಲ್ಕತ್ತ: ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಅಪರಿಚಿತ ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದ ಟಿಎಂಸಿ ಮುಖಂಡರೊಬ್ಬರು ಶನಿವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ.
ಜಿಲ್ಲೆಯ ರೆಜಿನಗರ ಪ್ರದೇಶದ ಟಿಎಂಸಿಯ ಪ್ರಭಾವಿ ಮುಖಂಡ ಪಾಟೀತ್ ಪಾಲ್ ಮೃತ ವ್ಯಕ್ತಿ.
ಪಾಲ್ ಜುಲೈ 21ರ ರಾತ್ರಿ ತಮ್ಮ ಮನೆಯಲ್ಲಿ ಇದ್ದಾಗಲೇ ಅಪರಿಚಿತರು ಗುಂಡಿನ ದಾಳಿ ನಡೆಸಿದ್ದರು. ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಮುರ್ಷಿದಾಬಾದ್‌ನ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
‘ಗುಂಡಿನ ದಾಳಿ ಹಿಂದೆ ಬಿಜೆಪಿಯ ಸ್ಥಳೀಯ ಕಾರ್ಯಕರ್ತರಿದ್ದಾರೆ’ ಎಂದು ಮೃತ ಪಾಲ್ ಅವರ ಸಹೋದರ ಪರಿತೋಷ್ ಆರೋಪಿಸಿದ್ದಾರೆ.
ಪಾಟೀತ್ ನಿಧನದ ಬಳಿಕ ಎಫ್‌ಐಆರ್ ದಾಖಲಾಗಿದೆ. ಕೊಲೆ ಪ್ರಕರಣದಲ್ಲಿ ಸಾಕ್ಷ್ಯ ನುಡಿದಿದ್ದಕ್ಕಾಗಿ ಪಾಲ್‌ಗೆ ಈ ಹಿಂದೆ ಬೆದರಿಕೆ ಹಾಕಿದ್ದ ಏಳು ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳ ಪತ್ತೆಗೆ ಶೋಧ ನಡೆದಿದೆ.
‘ಆರೋಪಿಗಳ ಆಪ್ತರು ಈಗಲೂ ನಮಗೆ ಬೆದರಿಕೆ ಹಾಕುತ್ತಿದ್ದಾರೆ’ ಎಂದು ಪರಿತೋಷ್ ಹೇಳಿದ್ದಾರೆ.
‘ಟಿಎಂಸಿಯ ಒಳಜಗಳದಿಂದ ಈ ಕೊಲೆ ನಡೆದಿದೆ’ ಎಂದು ಕಾಂಗ್ರೆಸ್‌ನ ಮಾಜಿ ಸಂಸದ ಅಧೀರ್ ಚೌಧರಿ ಹೇಳಿದರೆ, ‘ಟಿಎಂಸಿಯ ಸ್ಥಳೀಯ ನಾಯಕರು ಹಾಗೂ ಬೆಂಬಲಿಗರು ಸಹ ರಾಜ್ಯದಲ್ಲಿ ಸುರಕ್ಷಿತವಾಗಿಲ್ಲ’ ಎಂದು ಸಿಪಿಎಂನ ಸುಜನ್ ಚಕ್ರವರ್ತಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.