ಮಮತಾ ಬ್ಯಾನರ್ಜಿ ಮತ್ತು ಅಮಿತ್ ಶಾ
ನವದೆಹಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸರ್ಕಾರವು (ಟಿಎಂಸಿ) ಅಕ್ರಮ ವಲಸಿಗರನ್ನು ಮತಬ್ಯಾಂಕ್ ಆಗಿ ಬಳಸುತ್ತಿದೆ. ಆದರೆ, ಕೇಂದ್ರ ಸರ್ಕಾರವು ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
‘ಟೈಮ್ಸ್ ನೌ ಶೃಂಗಸಭೆ 2025’ರಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಪಶ್ಚಿಮ ಬಂಗಾಳ ಸರ್ಕಾರದೊಂದಿಗೆ ಯಾವುದೇ ಘರ್ಷಣೆ ನಡೆಸುತ್ತಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
‘ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಅಕ್ರಮ ವಲಸಿಗರನ್ನು ಮತಬ್ಯಾಂಕ್ ಆಗಿ ಬಳಸಿಕೊಳ್ಳಲು ಎದುರು ನೋಡುತ್ತಿದ್ದಾರೆ. ಆದರೆ, ಯಾವುದೇ ಪಕ್ಷವು ಅಕ್ರಮ ವಲಸಿಗರನ್ನು ಮತಬ್ಯಾಂಕ್ ಆಗಿ ಬಳಸಿಕೊಳ್ಳಲು ನಾವು ಬಿಡುವುದಿಲ್ಲ’ ಎಂದು ಶಾ ತಿಳಿಸಿದ್ದಾರೆ.
2024ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮಾತನಾಡಿದ್ದ ಅಮಿತ್ ಶಾ, ‘ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬಂದರೆ ದೇಶದಾದ್ಯಂತ ‘ರಾಷ್ಟ್ರೀಯ ಪೌರತ್ವ ನೋಂದಣಿ’ (ಎನ್‌ಆರ್‌ಸಿ) ನಡೆಸಲಾಗುವುದು. ದೇಶದೊಳಕ್ಕೆ ನುಸುಳಿರುವ ಪ್ರತಿಯೊಬ್ಬರನ್ನೂ ಹೊರಕ್ಕೆ ದಬ್ಬಲಾಗುವುದು ಎಂದು ಹೇಳಿದ್ದರು.
ಪಶ್ಚಿಮ ಬಂಗಾಳದಲ್ಲಿರುವ ಬಂಗಾಳಿ ವಲಸಿಗರು ಚಿಂತಿಸಬೇಕಿಲ್ಲ ಎಂದೂ ಭರವಸೆ ಕೊಟ್ಟಿದ್ದ ಅವರು, ಬೌದ್ಧರು, ಹಿಂದೂಗಳು ಮತ್ತು ಸಿಖ್ಖರನ್ನು ಬಿಟ್ಟು ಉಳಿದೆಲ್ಲ ವಲಸಿಗರನ್ನು ದೇಶದಿಂದ ಹೊರಗೆ ಹಾಕಲಾಗುವುದು ಎಂದಿದ್ದರು.
ಎನ್‌ಆರ್‌ಸಿಗೆ ಸಂಬಂಧಿಸಿ ಬಂಗಾಳಿ ವಲಸಿಗರನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ದಾರಿ ತಪ್ಪಿಸುತ್ತಿದ್ದಾರೆ ಎಂದೂ ಶಾ ಆರೋಪಿಸಿದ್ದಾರೆ.
‘ನಾವು ಎನ್‌ಆರ್‌ಸಿ ಬಗ್ಗೆ ಮಾತನಾಡಿದಾಗೆಲ್ಲ ಮಮತಾ ಬ್ಯಾನರ್ಜಿ ಅವರು ಬಂಗಾಳಿ ವಲಸಿಗರೆಲ್ಲ ದೇಶ ಬಿಡಬೇಕಾಗುತ್ತದೆ ಎಂದು ಹೇಳುತ್ತಾರೆ. ಪೌರತ್ವ (ತಿದ್ದುಪಡಿ) ಮಸೂದೆಯನ್ನು ನಾವು ತಂದಿದ್ದೇವೆ. ಭಾರತಕ್ಕೆ ವಲಸೆ ಬಂದಿರುವ ಪಾಕಿಸ್ತಾನ ಅಥವಾ ಬಾಂಗ್ಲಾದೇಶದ ಹಿಂದೂ, ಸಿಖ್, ಬೌದ್ಧ ಮತ್ತು ಜೈನ ನಿರಾಶ್ರಿತರು ಹೆದರಬೇಕಿಲ್ಲ. ಅವರನ್ನು ವಾಪಸ್ ಕಳುಹಿಸುವುದಿಲ್ಲ’ ಎಂದೂ ಸ್ಪಷ್ಟಪಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.