ADVERTISEMENT

TMC ಶಾಸಕ ಸಾಹ ಬಂಧಿಸಿದ ಇ.ಡಿ: ಗೋಡೆ ಹಾರಿ ಪರಾರಿಗೆ ಯತ್ನಿಸಿದರಾ ಟಿಎಂಸಿ ಶಾಸಕ?

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2025, 13:34 IST
Last Updated 25 ಆಗಸ್ಟ್ 2025, 13:34 IST
ಜೀವನ್ ಕೃಷ್ಣ ಸಾಹ, ಟಿಎಂಸಿ ಶಾಸಕ
ಜೀವನ್ ಕೃಷ್ಣ ಸಾಹ, ಟಿಎಂಸಿ ಶಾಸಕ   

ಕೋಲ್ಕತ್ತ: ಪಶ್ಚಿಮ ಬಂಗಾಳದ ಶಾಲಾ ಶಿಕ್ಷಕರು ಮತ್ತು ಸಿಬ್ಬಂದಿ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿದಂತೆ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ ಶಾಸಕ ಜೀವನ್‌ ಕೃಷ್ಣ ಸಾಹ ಅವರನ್ನು ಸೋಮವಾರ ಜಾರಿ ನಿರ್ದೇಶನಾಲಯ (ಇ.ಡಿ) ಬಂಧಿಸಿದೆ.

ಬಂಧನದ ವೇಳೆ ಸಾಹ ಮನೆಯ ಗೋಡೆ ಹಾರಿ ಪರಾರಿಗೆ ಯತ್ನಿಸಿದ್ದರು ಎಂದು ಮೂಲಗಳು ತಿಳಿಸಿವೆ.

ಮುರ್ಷಿದಾಬಾದ್ ಜಿಲ್ಲೆಯಲ್ಲಿರುವ ಬುರ್ವಾನ್ ವಿಧಾನಸಭಾ ಕ್ಷೇತ್ರದ ಶಾಸಕರ ನಿವಾಸ, ಅವರ ಸಂಬಂಧಿಕರು ಮತ್ತು ಆಪ್ತರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಇ.ಡಿ.ಅಧಿಕಾರಿಗಳು ಸೋಮವಾರ ಶೋಧ ನಡೆಸಿದರು. ದಾಳಿ ವೇಳೆ ಮನೆಯಲ್ಲೇ ಇದ್ದ ಜೀವನ್‌ ಕೃಷ್ಣ ಸಾಹ, ತಮ್ಮ ಮನೆ ಬಳಿಯ ಚರಂಡಿಗೆ ಮೊಬೈಲ್‌ ಎಸೆದು, ಗೋಡೆ ಹಾರಿ ಪರಾರಿಯಾಗಲು ಯತ್ನಿಸಿದರು. ಅಧಿಕಾರಿಗಳ ತಂಡ ಸಿಆರ್‌ಪಿಎಫ್‌ ಭದ್ರತೆಯೊಂದಿಗೆ ಶಾಸಕ ಸಾಹ ಅವರನ್ನು ಬಂಧಿಸಿ, ಕರೆದೊಯ್ದಿದೆ.

ADVERTISEMENT

ಇ.ಡಿ. ದಾಳಿ ಸಂದರ್ಭದ ದೃಶ್ಯ ಮತ್ತು ಚಿತ್ರಗಳಲ್ಲಿ ಗೋಡೆ ಹಾರುವ ವೇಳೆ ಚರಂಡಿ ನೀರಿನಿಂದ ಶಾಸಕರು ಒದ್ದೆಯಾಗಿದ್ದಾರೆ.

ಸಾಹ ಅವರನ್ನು ಇ.ಡಿ ವಿಚಾರಣೆಗೆ ಸಹಕರಿಸದ ಆರೋಪದ ಮೇಲೆ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ (ಪಿಎಂಎಲ್‌ಎ) ಬಂಧಿಸಲಾಗಿದೆ. 2023ರಲ್ಲೂ ಸಾಹ ಅವರನ್ನು ಶಿಕ್ಷಕರ ಅಕ್ರಮ ನೇಮಕ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ಬಂಧಿಸಿ ಆನಂತರ ಬಿಡುಗಡೆ ಮಾಡಿತ್ತು.

ಪ್ರಕರಣ ಸಂಬಂಧ ಈವರೆಗೂ ನಾಲ್ಕು ದೋಷಾರೋಪಣಾ ಪಟ್ಟಿಗಳನ್ನು ಸಲ್ಲಿಸಿರುವ ಇ.ಡಿ, ಈ ಹಿಂದೆ ಮಾಜಿ ಸಚಿವ ಪಾರ್ಥ ಚಟರ್ಜಿ, ಅರ್ಪಿತಾ ಮುಖರ್ಜಿ, ಮಾಜಿ ಶಾಸಕ ಮಾಣಿಕ್‌ ಭಟ್ಟಾಚಾರ್ಯ ಸೇರಿ ಹಲವರನ್ನು ಬಂಧಿಸಿತ್ತು. ಬಂಧನ ನಂತರ ಚಟರ್ಜಿ ಅವರನ್ನು ಟಿಎಂಸಿಯಿಂದ ಅಮಾನತು ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.