ADVERTISEMENT

ಸುಗ್ರೀವಾಜ್ಞೆ: ಆಡಳಿತ, ವಿರೋಧ ಪಕ್ಷದ ನಾಯಕರ ವಾಕ್ಸಮರ

ಸಿಬಿಐ, ಇ.ಡಿ ನಿರ್ದೇಶಕ ಹುದ್ದೆಗಳ ಅಧಿಕಾರ ಅವಧಿ ಹೆಚ್ಚಳ

ಪಿಟಿಐ
Published 16 ನವೆಂಬರ್ 2021, 7:11 IST
Last Updated 16 ನವೆಂಬರ್ 2021, 7:11 IST
ಪ್ರಲ್ಹಾದ್‌ ಜೋಷಿ
ಪ್ರಲ್ಹಾದ್‌ ಜೋಷಿ   

ನವದೆಹಲಿ: ಸಿಬಿಐ, ಜಾರಿ ನಿರ್ದೇಶನಾಲಯದ (ಇ.ಡಿ) ನಿರ್ದೇಶಕರ ಹುದ್ದೆಗಳ ಅಧಿಕಾರ ಅವಧಿ ಹೆಚ್ಚಿಸಿ ಕೇಂದ್ರ ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆಯು ಆಡಳಿತ ಮತ್ತು ವಿರೋಧ ಪಕ್ಷದ ನಾಯಕರ ವಾಕ್‌ ಸಮರಕ್ಕೆ ಕಾರಣವಾಗಿದೆ.

ಈ ವಿಷಯದಲ್ಲಿ ತೃಣಮೂಲ ಕಾಂಗ್ರೆಸ್‌ನ (ಟಿಎಂಸಿ) ರಾಜ್ಯಸಭಾ ಸದಸ್ಯ ಡೆರೆಕ್‌ ಒಬ್ರಿಯಾನ್‌ ಮತ್ತು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಷಿ ಅವರ ನಡುವೆ ಟ್ವೀಟ್‌ ಸಮರ ನಡೆದಿದೆ.

17ನೇ ಲೋಕಸಭೆಯಲ್ಲಿ ಪ್ರತಿ 10 ಮಸೂದೆಗಳಿಗೆ ನಾಲ್ಕು ಸುಗ್ರೀವಾಜ್ಞೆಗಳನ್ನು ತರಲಾಗಿದೆ ಎಂದು ದೂರಿರುವ ಡೆರೆಕ್‌ ಒಬ್ರಿಯಾನ್‌, 2014ರಿಂದ ಅದನ್ನು ಹೇಗೆಲ್ಲ ದುರುಪಯೋಗಪಡಿಸಿಕೊಳ್ಳಲಾಗಿದೆ ಎಂಬುದನ್ನು ತೋರಿಸುವ ಗ್ರಾಫಿಕ್‌ ಅನ್ನು ಪೋಸ್ಟ್‌ ಮಾಡಿದ್ದಾರೆ.

ADVERTISEMENT

ಇದಕ್ಕೆ ಸರಣಿ ಟ್ವೀಟ್‌ಗಳ ಮೂಲಕ ಪ್ರತಿಕ್ರಿಯಿಸಿರುವ ಜೋಷಿ ಅವರು, ಹಿಂದಿನ ಕಾಂಗ್ರೆಸ್ ಸರ್ಕಾರಗಳು ಸುಗ್ರೀವಾಜ್ಞೆಗಳನ್ನು ಹೇಗೆ ಬಳಸಿದವು ಎಂಬುದನ್ನು ತೋರಿಸಿದ್ದಾರೆ.

‘ಕಾಂಗ್ರೆಸ್ ಆಡಳಿತಾವಧಿಯಲ್ಲಿ ಇದುವರೆಗೆ ಒಟ್ಟು 524 ಸುಗ್ರೀವಾಜ್ಞೆಗಳನ್ನು ಹೊರಡಿಸಲಾಗಿದೆ. 5ನೇ ಲೋಕಸಭೆಯ ಅವಧಿಯಲ್ಲಿಯೇ 96 ಸುಗ್ರೀವಾಜ್ಞೆಗಳನ್ನು ಹೊರಡಿಸಲಾಗಿತ್ತು’ ಎಂದು ಅವರು ಹೇಳಿದ್ದಾರೆ.

‘ಈ ಸಂಖ್ಯೆಗಳನ್ನು ವಿವರಿಸಲು ಡೆರೆಕ್‌ ಒಬ್ರಿಯಾನ್‌ ಅವರು ಕಾಳಜಿ ವಹಿಸುತ್ತಾರೆಯೇ?’ ಎಂದು ಜೋಷಿ ಪ್ರಶ್ನಿಸಿದ್ದಾರೆ.

‘ಸುಗ್ರೀವಾಜ್ಞೆಗಳು ಪ್ರಜಾಪ್ರಭುತ್ವದ ಭಾಗವಾಗಿವೆ. ಟಿಎಂಸಿಗೆ ಇದು ಅರ್ಥವಾಗುವುದಿಲ್ಲ. ಏಕೆಂದರೆ ಪಶ್ಚಿಮ ಬಂಗಾಳದಲ್ಲಿ ಇತರ ಪಕ್ಷಗಳ ಪ್ರಜಾಸತ್ತಾತ್ಮಕ ಹಕ್ಕುಗಳು ಏನಾಗುತ್ತಿವೆ ಎಂಬುದನ್ನು ನಾವು ನೋಡಿದ್ದೇವೆ. ವಿವಿಧ ಪ್ರಕರಣಗಳಲ್ಲಿ ಹೈಕೋರ್ಟ್‌ ಏನನ್ನು ಗಮನಿಸಿದೆ ಎಂಬುದನ್ನು ನಾವು ನೋಡಿದ್ದೇವೆ. ಅಲ್ಲದೆ ಪಶ್ಚಿಮ ಬಂಗಾಳದ ವಿಧಾನಸಭೆಯಲ್ಲಿ ಎಷ್ಟು ಅಧಿವೇಶನಗಳು ನಡೆದಿವೆ ಎಂಬುದೂ ತಿಳಿದಿದೆ’ ಎಂದು ಅವರು ಹೇಳಿದ್ದಾರೆ.

‘ಟಿಎಂಸಿ ಪಕ್ಷ ಬೆಂಬಲಿಸಿರುವ ಕಾಂಗ್ರೆಸ್‌ ಅತ್ಯಂತ ಪ್ರಜಾಪ್ರಭುತ್ವ ವಿರೋಧಿ ಪಕ್ಷ ಎಂಬುದನ್ನು ಇನ್ನೂದರೂ ತಿಳಿದುಕೊಳ್ಳಿ. ಕಾಂಗ್ರೆಸ್‌ ಪಕ್ಷವು 356ನೇ ವಿಧಿಯನ್ನು ಬಳಸಿ 93 ಬಾರಿ ವಿವಿಧ ರಾಜ್ಯ ಸರ್ಕಾರಗಳನ್ನು ವಜಾಗೊಳಿಸಿದೆ ಎಂಬುದು ನೆನಪಿಸಬೇಕೇ?’ ಎಂದು ಪ್ರಲ್ಹಾದ್ ಜೋಷಿ ಕುಟುಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.