ADVERTISEMENT

ಪಶ್ಚಿಮ ಬಂಗಾಳ ಉಪಚುನಾವಣೆ: ಎಲ್ಲ ನಾಲ್ಕು ಕ್ಷೇತ್ರಗಳಲ್ಲಿ ಟಿಎಂಸಿಗೆ ಗೆಲುವು

ಪಿಟಿಐ
Published 2 ನವೆಂಬರ್ 2021, 14:33 IST
Last Updated 2 ನವೆಂಬರ್ 2021, 14:33 IST
ಪಶ್ಚಿಮ ಬಂಗಾಳದ ನಾದಿಯಾದಲ್ಲಿ ಟಿಎಂಸಿ ಕಾರ್ಯಕರ್ತರ ಸಂಭ್ರಮಾಚರಣೆ – ಪಿಟಿಐ ಚಿತ್ರ
ಪಶ್ಚಿಮ ಬಂಗಾಳದ ನಾದಿಯಾದಲ್ಲಿ ಟಿಎಂಸಿ ಕಾರ್ಯಕರ್ತರ ಸಂಭ್ರಮಾಚರಣೆ – ಪಿಟಿಐ ಚಿತ್ರ   

ಕೋಲ್ಕತ್ತ: ‍ಪಶ್ಚಿಮ ಬಂಗಾಳದ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಜಯ ಗಳಿಸಿದೆ.

ಕೂಚ್‌ಬೆಹಾರ್ ಮತ್ತು ನಾದಿಯಾ ಜಿಲ್ಲೆಗಳ ದಿನ್‌ಹಟ, ಶಾಂತಿಪುರ ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿ ವಿರುದ್ಧ ಟಿಎಂಸಿ ಅಭ್ಯರ್ಥಿಗಳು ಭಾರಿ ಅಂತರದ ಗೆಲುವು ಸಾಧಿಸಿದ್ದಾರೆ. ಉತ್ತರ 24 ಪರಗಣ ಹಾಗೂ ದಕ್ಷಿಣ 24 ಪರಗಣ ಜಿಲ್ಲೆಗಳ ಖರ್‌ದಾಹ್ ಮತ್ತು ಗೊಸಬಾ ಕ್ಷೇತ್ರಗಳಲ್ಲಿ ಟಿಎಂಸಿ ಮತ್ತೆ ಜಯ ಗಳಿಸಿದೆ.

ಇದರೊಂದಿಗೆ, 294 ಸದಸ್ಯ ಬಲದ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಟಿಎಂಸಿ ಸಂಖ್ಯಾಬಲ 215ಕ್ಕೆ ಹೆಚ್ಚಳವಾಗಿದೆ.

ಒಟ್ಟಾರೆ ಚಲಾವಣೆಯಾಗಿರುವ ಮತಗಳ ಪೈಕಿ ಟಿಎಂಸಿ ಶೇ 75.02 ಗಳಿಸಿದ್ದರೆ ಬಿಜೆಪಿಗೆ ಶೇ 14.48ರಷ್ಟು ಮಾತ್ರವೇ ದೊರೆತಿದೆ.

ಉಪಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಎಲ್ಲ ನಾಲ್ವರು ಅಭ್ಯರ್ಥಿಗಳಿಗೆ ಅಭಿನಂದನೆಗಳು ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿದ್ದಾರೆ.

‘ಈ ಗೆಲುವು ಜನರ ಗೆಲುವಾಗಿದೆ. ಪ್ರಚಾರ ಮತ್ತು ದ್ವೇಷದ ರಾಜಕೀಯಕ್ಕಿಂತ ಬಂಗಾಳವು ಯಾವಾಗಲೂ ಅಭಿವೃದ್ಧಿ, ಏಕತೆಯನ್ನು ಹೇಗೆ ಆರಿಸಿಕೊಳ್ಳುತ್ತದೆ ಎಂಬುದನ್ನು ಈ ಗೆಲುವು ತೋರಿಸಿಕೊಟ್ಟಿದೆ. ಜನರ ಆಶೀರ್ವಾದದೊಂದಿಗೆ, ಬಂಗಾಳವನ್ನು ಅಭಿವೃದ್ಧಿ ಪಥದಲ್ಲಿ ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವುದಾಗಿ ನಾವು ಭರವಸೆ ನೀಡುತ್ತೇವೆ’ ಎಂದು ಅವರು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.