ADVERTISEMENT

ತಮಿಳುನಾಡು ವಿಧಾನಸಭೆ: ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ನಿರ್ಣಯ ಅಂಗೀಕಾರ

ನಿರ್ಣಯಕ್ಕೆ ವಿರೋಧ, ಎಐಎಡಿಎಂಕೆ, ಬಿಜೆಪಿ ಸಭಾತ್ಯಾಗ

ಪಿಟಿಐ
Published 28 ಆಗಸ್ಟ್ 2021, 8:54 IST
Last Updated 28 ಆಗಸ್ಟ್ 2021, 8:54 IST
ಎಂ.ಕೆ.ಸ್ಟಾಲಿನ್
ಎಂ.ಕೆ.ಸ್ಟಾಲಿನ್   

ಚೆನ್ನೈ: ಕೇಂದ್ರ ಸರ್ಕಾರದ ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ತಮಿಳುನಾಡು ವಿಧಾನಸಭೆಯಲ್ಲಿ ಶನಿವಾರ ನಿರ್ಣಯವನ್ನು ಅಂಗೀಕರಿಸಲಾಯಿತು.

ನಿರ್ಣಯವನ್ನು ವಿರೋಧಿಸಿ,ಪ್ರಮುಖ ವಿರೋಧ ಪಕ್ಷ ಎಐಎಡಿಎಂಕೆ ಮತ್ತು ಮಿತ್ರ ಪಕ್ಷ ಬಿಜೆಪಿ ಶಾಸಕರು ಸಭಾತ್ಯಾಗ ಮಾಡಿದರು.

ಬೆಳಿಗ್ಗೆ ಸದನ ಸಮಾವೇಶಗೊಂಡ ನಂತರ, ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸುವ ನಿರ್ಣಯವನ್ನು ಮಂಡಿಸಿದರು. ಇದನ್ನು ಸರ್ವಾನುಮತದಿಂದ ಅಂಗೀಕರಿಸುವಂತೆ ಸದನ್ನವನ್ನು ಕೋರಿದರು.

ADVERTISEMENT

ನಿರ್ಣಯದ ಮೇಲೆ ಚರ್ಚೆ ಆರಂಭವಾದಾಗ, ಬಿಜೆಪಿ ಶಾಸಕರು ಸಭೆಯಿಂದ ಹೊರ ನಡೆದರು. ಎಐಡಿಎಂಕೆ ಶಾಸಕಾಂಗ ಪಕ್ಷದ ಉಪ ನಾಯಕ ಒ. ಪನ್ನೀರಸೆಲ್ವಂ, ‘ಮುಖ್ಯಮಂತ್ರಿಯವರು ನೂತನ ಕೃಷಿ ಕಾಯ್ದೆಗಳಿಂದ ಏನು ಅನಾನುಕೂಲಗಳಿವೆ ಎಂದು ಪಟ್ಟಿ ಮಾಡಿದ್ದಾರೆ. ಅದೇ ರೀತಿ, ಅನುಕೂಲಗಳನ್ನು ಪಟ್ಟಿ ಮಾಡಿ ಸದನಕ್ಕೆ ತಿಳಿಸಬೇಕು‘ ಎಂದರು.

ಇದೇ ವೇಳೆ, ‘ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಪತ್ರ ಬರೆದಿಯೇ. ಆ ಪತ್ರಕ್ಕೆ ಉತ್ತರ ದೊರೆತಿದೆಯೇ ಎಂಬುದನ್ನು ತಿಳಿಸುವಂತೆ‘ ಅವರು ಕೇಳಿದರು.

ಜಲಸಂಪನ್ಮೂಲ ಸಚಿವ ದುರೈಮುರುಗನ್‌ ಮಾತನಾಡಿ, ‘ಎಐಎಡಿಎಂಕೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಇದೇ ನಿರ್ಣಯಗಳನ್ನು ಅಂಗೀಕರಿಸಲಾಗಿತ್ತು. ಅಂದಿನ ಆಡಳಿತ ಪಕ್ಷ ಈಗ ಪ್ರಮುಖ ವಿರೋಧ ಪಕ್ಷವಾಗಿದೆ. ಈಗ ಸರ್ಕಾರ ಕೈಗೊಂಡಿರುವ ನಿರ್ಣಯವನ್ನು ವಿರೋಧ ಪಕ್ಷ ಬೆಂಬಲಿಸುತ್ತದೆಯೋ ಇಲ್ಲವೋ ಎಂದು ಮುಖ್ಯಮಂತ್ರಿ ತಿಳಿಯಲು ಬಯಸಿದ್ದಾರೆ‘ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಎಐಎಡಿಎಂಕೆ ನಾಯಕ ಪನ್ನೀರಸೆಲ್ವಂ,‘ಕೃಷಿ ಕಾಯ್ದೆಗಳ ವಿರುದ್ಧ ಸಲ್ಲಿಸಿರುವ ಅರ್ಜಿಗಳುಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಉಳಿದಿವೆ. ಆದ್ದರಿಂದ ಪಕ್ಷ ಈಗಲೇ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ರೈತರ ಕಲ್ಯಾಣದ ವಿಷಯಗಳನ್ನು ನಮ್ಮ ಪಕ್ಷ ಬೆಂಬಲಿಸುತ್ತದೆ‘ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.