ADVERTISEMENT

ತ್ರಿಭಾಷಾ ಸೂತ್ರ ವಿವಾದ: ಪಿಚೈ ಅನ್ನು ಎಳೆತಂದ ರಾಜಕಾರಣಿಗಳು

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2025, 15:19 IST
Last Updated 13 ಮಾರ್ಚ್ 2025, 15:19 IST
ಸುಂದರ್‌ ಪಿಚೈ
ಸುಂದರ್‌ ಪಿಚೈ   

ಚೆನ್ನೈ: ಗೂಗಲ್‌ ಸಿಇಒ ಸುಂದರ್‌ ಪಿಚೈ ಅವರು ಶಾಲೆಯಲ್ಲಿ ಹಿಂದಿ ಕಲಿತಿದ್ದಾರೊ, ಇಲ್ಲವೊ ಎಂಬ ಕುರಿತ ಚರ್ಚೆ ತಮಿಳುನಾಡಿನಲ್ಲಿ ಆರಂಭವಾಗಿದ್ದು, ಈ ಮೂಲಕ ರಾಜಕಾರಣಿಗಳು ಅವರನ್ನು ತ್ರಿಭಾಷಾ ಸೂತ್ರದ ವಿವಾದಕ್ಕೆ ಎಳೆದು ತಂದಿದ್ದಾರೆ.

ತಮಿಳುನಾಡಿನ ಪಿಚೈ ಮೂಲದವರಾದ ಅವರು, ಜವಾಹರ ವಿದ್ಯಾಲಯ ಮತ್ತು ವನ ವಾನಿ ಮ್ಯಟ್ರಿಕ್ಯುಲೇಷನ್‌ ಹೈಯರ್‌ ಸೆಕೆಂಡರ್‌ ಸ್ಕೂಲ್‌ನಲ್ಲಿ ಶಾಲಾ ಶಿಕ್ಷಣ ಪೂರೈಸಿದ್ದು, ಖರಗ್‌ಪುರ ಐಐಟಿಯಲ್ಲಿ ಎಂಜಿನಿಯರಿಂಗ್‌ ವ್ಯಾಸಂಗ ಮಾಡಿದ್ದಾರೆ.

ಪಿಚೈ ಅವರ ಮಾತೃಭಾಷೆ ತಮಿಳು ಆಗಿದ್ದು, ಭಾಷೆಯ ಮೇಲೆ ಪ್ರೌಢಿಮೆಯನ್ನೂ ಹೊಂದಿದ್ದಾರೆ. ಪಿಚೈ ಅವರ ಕುರಿತು ತಮಿಳುನಾಡಿನ ಮಾಹಿತಿ ತಂತ್ರಜ್ಞಾನ ಸಚಿವ ಪಿಟಿಆರ್‌ ಪಳನಿವೇಲ್‌ ತ್ಯಾಗರಾಜನ್‌ ಅವರು, ‘ಹಿಂದಿ ತಿಳಿಯದಿರುವುದು ಗೂಗಲ್‌ ಸಿಇಒ ಅವರ ಯಶಸ್ವಿ ವೃತ್ತಿಜೀವನಕ್ಕೆ ಏನಾದರೂ ಅಡ್ಡಿಯಾಗಿದೆಯೇ’ ಎಂದು ಪ್ರಶ್ನಿಸಿದ್ದರು.

ADVERTISEMENT

‘ತ್ರಿಭಾಷಾ ಸೂತ್ರ ವಿಫಲವಾಗಿರುವಾಗ, ದ್ವಿಭಾಷಾ ಸೂತ್ರವನ್ನು ಬದಲಿಸಿ ಅದನ್ನು ತರುವುದರಲ್ಲಿ ಅರ್ಥವಿಲ್ಲ’ ಎಂದು ಪ್ರತಿಪಾದಿಸಿದ್ದರು.

ವಿಡಿಯೊ ಪೋಸ್ಟ್‌ ಮಾಡಿದ ಬಿಜೆಪಿ:

‘ಹಿಂದಿಯನ್ನು ಶಾಲಾ ದಿನಗಳಲ್ಲಿ ನಾನು ಕಲಿತಿದ್ದೇನೆ’ ಎಂದು ಹೇಳುವ ಪಿಚೈ ಅವರ ವಿಡಿಯೊವೊಂದನ್ನು ಬಿಜೆಪಿ ನಾಯಕರು ಹಂಚಿಕೊಂಡಿದ್ದಾರೆ. ರಾಜ್ಯದ ಖಾಸಗಿ ಶಾಲೆಗಳು 1980ರಲ್ಲೂ ತ್ರಿಭಾಷಾ ಸೂತ್ರ ಅನುಸರಿಸುತ್ತಿದ್ದವು ಎಂಬುದು ಇದರಿಂದ ಗೊತ್ತಾಗುತ್ತದೆ’ ಎಂದು ಬಿಜೆಪಿ ಮುಖಂಡರು ಹೇಳಿದ್ದಾರೆ.

‘ಚೆನ್ನೈನಿಂದ ಬಂದಿರುವ ನಾನು ಶಾಲೆಯಲ್ಲಿ ಹಿಂದಿ ಕಲಿತಿದ್ದೇನೆ. ಆದರೆ ಅದನ್ನು ಹೆಚ್ಚು ಮಾತನಾಡಲಿಲ್ಲ’ ಎಂದು ಪಿಚೈ ಹೇಳಿರುವುದು ವಿಡಿಯೊದಲ್ಲಿದೆ. ಇದನ್ನು ಆಧರಿಸಿ ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ಕೆ. ಅಣ್ಣಾಮಲೈ ಸೇರಿದಂತೆ ಹಲವು ಬಿಜೆಪಿ ನಾಯಕರು, ‘ಗೂಗಲ್‌ ಸಿಇಒ ಶಾಲೆಯಲ್ಲಿ ಹಿಂದಿಯನ್ನು ಮೂರನೇ ಭಾಷೆಯಾಗಿ ಕಲಿತಿದ್ದಾರೆ’ ಎಂದು ಹೇಳಿದ್ದಾರೆ.

ಈ ವಿಡಿಯೊವನ್ನು ಪರಿಶೀಲಿಸಿರುವ ತಮಿಳು ಫ್ಯಾಕ್ಟ್‌ಚೆಕಿಂಗ್‌ ವೆಬ್‌ಸೈಟ್‌ ‘ಯು ಟರ್ನ್‌’, ಅದು ತಿರುಚಿದ ವಿಡಿಯೊ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.