ADVERTISEMENT

‘ಅನುಮತಿ ನಿರಾಕರಿಸಿದರೂ ಮಹಾಪಂಚಾಯಿತಿ ಖಚಿತ’

ರೈತ ಸಮಾವೇಶಕ್ಕೆ ಜಿಲ್ಲಾಡಳಿತ ಅನುಮತಿ ನಿರಾಕರಣೆ

ಪಿಟಿಐ
Published 19 ಫೆಬ್ರುವರಿ 2021, 19:21 IST
Last Updated 19 ಫೆಬ್ರುವರಿ 2021, 19:21 IST
ರಾಜಸ್ಥಾನದ ಕೋಟಖವಾಡದಲ್ಲಿ ನಡೆದ ಕಿಸಾನ್‌ ಮಹಾಪಂಚಾಯತ್‌ನಲ್ಲಿ ರಾಜ್ಯದ ಉಪಮುಖ್ಯಮಂತ್ರಿ, ಕಾಂಗ್ರೆಸ್‌ ಮುಖಂಡ ಸಚಿನ್‌ ಪೈಲಟ್‌ ಮಾತನಾಡಿದರು –ಪಿಟಿಐ ಚಿತ್ರ
ರಾಜಸ್ಥಾನದ ಕೋಟಖವಾಡದಲ್ಲಿ ನಡೆದ ಕಿಸಾನ್‌ ಮಹಾಪಂಚಾಯತ್‌ನಲ್ಲಿ ರಾಜ್ಯದ ಉಪಮುಖ್ಯಮಂತ್ರಿ, ಕಾಂಗ್ರೆಸ್‌ ಮುಖಂಡ ಸಚಿನ್‌ ಪೈಲಟ್‌ ಮಾತನಾಡಿದರು –ಪಿಟಿಐ ಚಿತ್ರ   

ನಾಗ್ಪುರ: ಅನುಮತಿ ನೀಡಲು ಜಿಲ್ಲಾಡಳಿತವು ನಿರಾಕರಿಸಿದ್ದರೂ ಮಹಾರಾಷ್ಟ್ರದ ಯವತ್ಮಾಲ್‌ನಲ್ಲಿ ಶನಿವಾರ (ಫೆ. 20) ರೈತರ ‘ಮಹಾ ಪಂಚಾಯಿತಿ’ ಆಯೋಜಿಸುವುದು ಖಚಿತ ಎಂದು ರೈತ ಮುಖಂಡ ರಾಕೇಶ್‌ ಟಿಕಾಯತ್‌ ಹೇಳಿದ್ದಾರೆ.

ಕೋವಿಡ್‌–19 ಪ್ರಕರಣಗಳು ಹೆಚ್ಚುತ್ತಿರುವ ಕಾರಣಕ್ಕೆ ರೈತರ ಮಹಾಪಂಚಾಯಿತಿ ಹಮ್ಮಿಕೊಳ್ಳಲು ಯವತ್ಮಾಲ್‌‌ ಜಿಲ್ಲಾಡಳಿತ ನಿರಾಕರಿಸಿದೆ. ಶಾಲಾ ಕಾಲೇಜುಗಳನ್ನು ಪುನಃ ಹತ್ತು ದಿನಗಳ ಕಾಲ ಮುಚ್ಚಲು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ. ಜನರು ಗುಂಪು ಸೇರುವುದರ ಮೇಲೂ ನಿಷೇಧ ಹೇರಲಾಗಿದೆ.

ಆದರೆ, ‘ನಾವು ಕಾರ್ಯಕ್ರಮ ಆಯೋಜಿಸುವುದು ಖಚಿತ. ರೈತ ಮುಖಂಡ ಟಿಕಾಯತ್‌ ಹಾಗೂ ಇತರರನ್ನು ತಡೆಯುವ ಪ್ರಯತ್ನ ಮಾಡಿದರೆ ಎಲ್ಲಿ ಅವರನ್ನು ತಡೆಯಲಾಗುವುದೋ ಅಲ್ಲಿಯೇ ಧರಣಿ ನಡೆಸುತ್ತೇವೆ’ ಎಂದು ರೈತರ ಸಂಘಟನೆಗಳ ಒಕ್ಕೂಟ ‘ಸಂಯುಕ್ತ ಕಿಸಾನ್‌ ಮೋರ್ಚಾ’ದ ಮಹಾರಾಷ್ಟ್ರ ಘಟಕದ ಸಂಚಾಲಕ ಸಂದೀಪ್‌ ಗಿಡ್ಡೆ ಶುಕ್ರವಾರ ಹೇಳಿದ್ದಾರೆ.

ADVERTISEMENT

ಮಧ್ಯಮವರ್ಗದ ವಿರೋಧಿ: ‘ಹೊಸ ಕೃಷಿ ಕಾಯ್ದೆಗಳು ರೈತರಿಗಷ್ಟೇ ಅಲ್ಲ, ದೇಶದ ಮಧ್ಯಮವರ್ಗದ ಜನರ ವಿರೋಧಿಯೂ ಆಗಿವೆ’ ಎಂದು ರಾಜಸ್ಥಾನದ ಕಾಂಗ್ರೆಸ್‌ ಮುಖಂಡ ಸಚಿನ್‌ ಪೈಲಟ್‌ ಹೇಳಿದ್ದಾರೆ.

ಕೋಟಖವಾಡಾದಲ್ಲಿ ಆಯೋಜಿಸಿದ್ದ ಕಿಸಾನ್‌ ಮಹಾಪಂಚಾಯಿತಿಯಲ್ಲಿ ಮಾತನಾಡಿದ ಅವರು, ‘ರೈತರು ಭಿಕ್ಷೆ ಬೇಡುತ್ತಿಲ್ಲ. ತಮ್ಮ ಹಕ್ಕಿಗಾಗಿ ಹೋರಾಡುತ್ತಿದ್ದಾರೆ. ಕಾಯ್ದೆಗಳನ್ನು ಹಿಂತೆಗೆದುಕೊಳ್ಳಲು ಕಾಂಗ್ರೆಸ್‌ ಪಕ್ಷವು ಸರ್ಕಾರದ ಮೇಲೆ ಒತ್ತಡ ಹೇರಲಿದೆ’ ಎಂದರು.

ಮಧ್ಯವರ್ತಿಗಳಿಂದ ವಿರೋಧ: ಯೋಗಿ
‘ಕೇಂದ್ರದ ಕೃಷಿ ಕಾಯ್ದೆಗಳನ್ನು ಮಧ್ಯವರ್ತಿಗಳು ಮಾತ್ರ ವಿರೋಧಿಸುತ್ತಿದ್ದಾರೆ’ ಎಂದು ಉತ್ತರಪ್ರದೇಶ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಹೇಳಿದ್ದು ಭಾರಿ ಗದ್ದಲಕ್ಕೆ ಕಾರಣವಾಗಿದೆ.

ವಿಧಾನಸಭೆಯಲ್ಲಿ ವಿರೋಧಪಕ್ಷಗಳ ಒತ್ತಾಯಕ್ಕೆ ಮಣಿದು, ಕೃಷಿ ಕಾನೂನುಗಳ ಚರ್ಚೆಗೆ ಅವಕಾಶ ನೀಡಿದ ಕೂಡಲೇ ಯೋಗಿ ಅವರು, ‘ಹಣವು ನೇರವಾಗಿ ರೈತರ ಖಾತೆಗಳಿಗೆ ಹೋಗುತ್ತಿರುವುದರಿಂದ ಹೊಸ ಕಾಯ್ದೆಗಳಿಂದ ಮಧ್ಯವರ್ತಿಗಳಿಗೆ ಭಾರಿ ಚಿಂತೆಯಾಗಿದೆ. ರೈತರಿಗೆ ತಮ್ಮ ಹಕ್ಕಿನ ಹಣ ಲಭಿಸುವುದಲ್ಲದೆ, ತಮ್ಮ ಫೋನ್‌ನಲ್ಲೇ ಆ ಕುರಿತ ವಿವರಗಳು ಲಭಿಸುತ್ತಿವೆ. ದಲ್ಲಾಳಿ ವ್ಯವಸ್ಥೆಯು ಅಂತ್ಯವಾಗುತ್ತಿದೆ’ ಎಂದರು.

ಈ ಸಂದರ್ಭದಲ್ಲಿ ಭಾರಿ ಗದ್ದಲ ಸೃಷ್ಟಿಯಾಗಿ ಕಲಾಪವನ್ನು ಮುಂದೂಡಬೇಕಾದ ಪ್ರಸಂಗ ಒದಗಿತು. ಆ ನಂತರವೂ ಮತ್ತೊಮ್ಮೆ ಕಲಾಪವನ್ನು ಮುಂದೂಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.