ADVERTISEMENT

ಮೋದಿ ವಿರುದ್ಧ ತೊಗಾಡಿಯಾ ಕಣಕ್ಕೆ!

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2019, 19:31 IST
Last Updated 26 ಮಾರ್ಚ್ 2019, 19:31 IST
ಪ್ರವೀಣ್ ತೊಗಾಡಿಯಾ
ಪ್ರವೀಣ್ ತೊಗಾಡಿಯಾ   

ಲಖನೌ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾರಾಣಸಿ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವ ಬಗ್ಗೆ ವಿಶ್ವ ಹಿಂದೂ ಪರಿಷತ್‌ನ ಮಾಜಿ ಅಧ್ಯಕ್ಷ ಪ್ರವೀಣ್ ತೊಗಾಡಿಯಾ ಸುಳಿವು ನೀಡಿದ್ದಾರೆ.

ಬಿಜೆಪಿಯಿಂದ ಅಂತರ ಕಾಯ್ದುಕೊಂಡಿರುವ ತೊಗಾಡಿಯಾ ಅವರು, ವಿಎಚ್‌ಪಿ ಅಧ್ಯಕ್ಷನ ಹುದ್ದೆಯಿಂದ ಇಳಿದ ನಂತರ ಹಿಂದುಸ್ತಾನ್ ನಿರ್ಮಾಣ್ ದಳವನ್ನು(ಎಚ್‌ಎನ್‌ಡಿ) ಸ್ಥಾಪಿಸಿದ್ದಾರೆ. ಈ ಚುನಾವಣೆಯಲ್ಲಿ ನೂರು ಕ್ಷೇತ್ರಗಳಲ್ಲಿ ಎಚ್‌ಎನ್‌ಡಿ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ.

ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ. ‘ನಾನು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸಬೇಕು ಎಂದು ಪಕ್ಷದ ಕಾರ್ಯಕರ್ತರು ಒತ್ತಡ ಹೇರುತ್ತಿದ್ದಾರೆ. ಕಾರ್ಯಕರ್ತರ ಜತೆ ಮಾತುಕತೆ ನಡೆಸಿ, ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇನೆ’ ಎಂದು ಅವರು ಹೇಳಿದ್ದಾರೆ.

ADVERTISEMENT

ಉತ್ತರ ಪ್ರದೇಶದಲ್ಲಿ ಪಕ್ಷದ ವತಿಯಿಂದ ಸ್ಪರ್ಧಿಸಲಿರುವ 26 ಅಭ್ಯರ್ಥಿಗಳ ಪಟ್ಟಿಯನ್ನು ಅವರು ಮಾಧ್ಯಮಗೋಷ್ಠಿಯಲ್ಲಿ ಬಿಡುಗಡೆ ಮಾಡಿದ್ದಾರೆ. ಈ ವೇಳೆ ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ.

‘2014ರ ಚುನಾವಣೆ ವೇಳೆ ಮೋದಿ ಹಲವು ಭರವಸೆಗಳನ್ನು ನೀಡಿದ್ದರು. ಅವುಗಳಲ್ಲಿ ಯಾವೊಂದನ್ನೂ ಮೋದಿಯಾಗಲೀ, ಬಿಜೆಪಿಯಾಗಲೀ ಈಡೇರಿಸಿಲ್ಲ. ಉಗ್ರರ ದಾಳಿ ಮತ್ತು ಪಾಕಿಸ್ತಾನವನ್ನು ಮೋದಿ ಸರ್ಕಾರ ನಿರ್ವಹಿಸಿದ ರೀತಿ ಸರಿಯಿಲ್ಲ. ರಾಷ್ಟ್ರೀಯತೆಗಿಂತ ರಾಷ್ಟ್ರಪ್ರೇಮ ಅತ್ಯಂತ ಮುಖ್ಯವಾದುದು. ಎಲ್‌.ಕೆ.ಅಡ್ವಾಣಿಯಂತಹ ಹಿರಿಯ ನಾಯಕರನ್ನು ನಡೆಸಿಕೊಂಡ ರೀತಿ ಸರಿಯಿಲ್ಲ. ಬಿಜೆಪಿ ಕಾಂಗ್ರೆಸ್‌ನಂತೆಯೇ ಪರಿವರ್ತನೆಯಾಗಿದೆ’ ಎಂದು ಅವರು ಟೀಕಿಸಿದ್ದಾರೆ.

* ಮೋದಿ ತಮ್ಮ ಅಧಿಕಾರಾವಧಿಯಲ್ಲಿ ಒಮ್ಮೆಯೂ ಅಯೋಧ್ಯೆಗೆ ಭೇಟಿ ನೀಡಿಲ್ಲ. ಚುನಾವಣಾ ಸಂದರ್ಭಗಳಲ್ಲಿ ಮಾತ್ರ ಬಿಜೆಪಿಗೆ ಅಯೋಧ್ಯೆಯ ನೆನಪಾಗುತ್ತದೆ

- ಪ್ರವೀಣ್ ತೊಗಾಡಿಯಾ, ಸಂಸ್ಥಾಪಕ, ಹಿಂದುಸ್ತಾನ್ ನಿರ್ಮಾಣ್ ದಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.