ADVERTISEMENT

ಟೂಲ್‌ಕಿಟ್ ಪ್ರಕರಣ: ದಿಶಾ ರವಿಗೆ ಜಾಮೀನು ನೀಡಿದ ದೆಹಲಿ ನ್ಯಾಯಾಲಯ

ಪಿಟಿಐ
Published 23 ಫೆಬ್ರುವರಿ 2021, 11:18 IST
Last Updated 23 ಫೆಬ್ರುವರಿ 2021, 11:18 IST
ದಿಶಾ ರವಿ
ದಿಶಾ ರವಿ    

ನವದೆಹಲಿ: ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾದಲ್ಲಿ ಟೂಲ್‌ಕಿಟ್‌ ಹಂಚಿಕೊಂಡ ಆರೋಪದಡಿ ದೆಹಲಿ ಪೊಲೀಸರಿಂದ ಬಂಧನವಾಗಿರುವ 21 ವರ್ಷದ ಪರಿಸರ ಕಾರ್ಯಕರ್ತೆ ದಿಶಾ ರವಿ ಅವರಿಗೆ ದೆಹಲಿ ನ್ಯಾಯಾಲಯ ಮಂಗಳವಾರ ಜಾಮೀನು ನೀಡಿದೆ.

ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಧರ್ಮೇಂದರ್ ರಾಣಾ ಅವರು ದಿಶಾ ರವಿ ಅವರಿಗೆ ಒಂದು ಲಕ್ಷ ರೂ.ಗಳ ವೈಯಕ್ತಿಕ ಬಾಂಡ್ ಮತ್ತು ಅಷ್ಟೇ ಮೊತ್ತದ ಇಬ್ಬರ ಶ್ಯೂರಿಟಿ ಮೇಲೆ ಜಾಮೀನು ಮಂಜೂರು ಮಾಡಿದ್ದಾರೆ.

ದಿಶಾ ರವಿ ಅವರನ್ನು ದೆಹಲಿ ಪೊಲೀಸರ ಸೈಬರ್ ಸೆಲ್ ತಂಡವು ಬೆಂಗಳೂರಿನಿಂದ ಬಂಧಿಸಿ ದೆಹಲಿಗೆ ಕರೆತಂದಿತ್ತು. ಸದ್ಯ ಆಕೆ ಪೊಲೀಸ್ ಕಸ್ಟಡಿಯಲ್ಲಿದ್ದರು.

ADVERTISEMENT

ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಹೇಗೆ ಬೆಂಬಲಿಸಬೇಕು ಎಂಬುದನ್ನು ವಿವರಿಸುವ ‘ಟೂಲ್‌ಕಿಟ್‌’ ಅನ್ನು ಸಿದ್ಧಪಡಿಸಿ, ಅದನ್ನು ಅಂತರ ರಾಷ್ಟ್ರೀಯ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್‌ಬರ್ಗ್ ಅವರಿಗೆ ಕಳುಹಿಸಿದ ಆರೋಪದ ಮೇಲೆ ದಿಶಾ ರವಿ ಅವರನ್ನು ಬಂಧಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.